

ಶಿರಸಿ: ತಾಲೂಕಿನ ಸುಧಾಪುರದ ಮುಂಡಿಗೆಕೆರೆಯಲ್ಲಿ ಪ್ರತಿ ವರ್ಷ ಮಳೆಗಾಲಕ್ಕೂ ಮುಂಚೆ ಆಗಮಿಸಿ ಇಲ್ಲಿಯ ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡಿಕೊಳ್ಳುತ್ತಿದ್ದ ಬೆಳ್ಳಕ್ಕಿಗಳು ಈ ವರ್ಷ ಅವಧಿಗೂ ಮುನ್ನವೇ ಹಾರಿಹೋಗಿವೆ. ಮಳೆಗಾಲದ ಅಬ್ಬರ, ಸಿಡಿಲಿನ ಶಬ್ದಕ್ಕೆ ಅಂಜಿ ಬೆಳ್ಳಕ್ಕಿಗಳು ಜಾಗ ಖಾಲಿ ಮಾಡಿವೆ ಎಂದು ರ್ತಸಲಾಗುತ್ತಿದೆ.
ಮುಂಡಿಗೆಕೆರೆ ಮಳೆಗಾಲದಲ್ಲಿ ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದು, ನೂರಾರು ವರ್ಷಗಳಿಂದ ಬೆಳ್ಳಕ್ಕಿಗಳು ಇಲ್ಲಿ ಆಗಮಿಸಿ ವಂಶಾಭಿವೃದ್ಧಿ ಮಾಡಿಕೊಳ್ಳುತ್ತಿವೆ. ನಿಸರ್ಗ ನಿರ್ವಿುತ ಈ ಹೆರಿಗೆ ತಾಣಕ್ಕೆ ಪ್ರತಿ ವರ್ಷ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರದಲ್ಲಿ ಎಲ್ಲಿಂದಲೋ ಬೆಳ್ಳಕ್ಕಿಗಳು ಬಂದು ಮುಂಡಿಗೆ ಗಿಡಗಳ- ಗರಿಗಳಲ್ಲಿ ಕಡ್ಡಿಗಳನ್ನು ಇಟ್ಟು ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳಾದ ನಂತರ ಅವುಗಳಿಗೆ ಹಾರಾಟ ತರಬೇತಿ ನೀಡಿ ಪುಟ್ಟ ಕಂದಮ್ಮಗಳೊಂದಿಗೆ ಹಾರಿ ಹೋಗುತ್ತವೆ. ಜೂನ್ ತಿಂಗಳಿಂದ 3 ಹಂತಗಳಲ್ಲಿ ಆಗಮಿಸುವ ಪಕ್ಷಿಗಳ ಗುಂಪು ಸುಮಾರು 120 ರಿಂದ 130 ದಿನಗಳವರೆಗೆ ಇಲ್ಲಿದ್ದು ಹಾರಿ ಹೋಗುವಿಕೆ ಪ್ರತಿ ವರ್ಷ ನಡೆಯುತ್ತಿತ್ತು.
ಮುಂಡಿಗೆ ಕೆರೆಗೆ ಬೆಳ್ಳಕ್ಕಿಗಳು ಬಂದವೆಂದರೆ ಮಳೆ ಆರಂಭವಾಗುವ ಮುನ್ಸೂಚನೆ ಸಹ ಹೌದು. ಕಳೆದ ವರ್ಷ 3 ತಂಡಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಕೆರೆಗೆ ಇಳಿದ ಪಕ್ಷಿಗಳು ಗೂಡುಕಟ್ಟಿದ್ದವು. ಆಗಸ್ಟ್ ಮೊದಲ ವಾರ ಕೆರೆಯಲ್ಲಿ 1850ರಿಂದ 1900 ಬೆಳ್ಳಕ್ಕಿಗಳುದಿದ್ದವು. ಈ ವರ್ಷ ಪಕ್ಷಿಗಳು ಜೂನ್ 24ಕ್ಕೆ ಕೆರೆಗೆ ಬೆಳ್ಳಕ್ಕಿಗಳು ಆಗಮಿಸಿದ್ದು, 3 ತಂಡಗಳು ಬೇರೆ ಬೇರೆ ದಿನಗಳಲ್ಲಿ ಕೆರೆಗೆ ಇಳಿದು ಗೂಡು ಕಟ್ಟಿದ್ದವು. ಕೆರೆಯ ತುಂಬೆಲ್ಲ ಸುಮಾರು 800ಕ್ಕೂ ಅಧಿಕ ಬೆಳ್ಳಕ್ಕಿ ಇರುವುದು ಕಂಡು ಬಂದಿತ್ತು. ಆದರೆ, ಆಗಸ್ಟ್ 17ರ ಸಂಜೆ 4 ರಿಂದ 4.30 ರವರೆಗೆ ಸುಧಾಪುರ ಕ್ಷೇತ್ರ ಹಾಗೂ ಮುಂಡಿಗೆ ಕೆರೆ ಸರಹದ್ದಿನಲ್ಲಿ ಅತ್ಯಧಿಕ ಗಾಳಿ- ಮಳೆ ಗುಡುಗು ಸಿಡಿಲುಗಳ ಆರ್ಭಟ ಜೋರಾಗಿತ್ತು. ಒಮ್ಮೆಲೆ ಬೀಸಿದ ಗಾಳಿ, ಜತೆಗೆ ಮುಂಡಿಗೆ ಕೆರೆ ಪ್ರದೇಶದಲ್ಲಿ ಸಿಡಿಲು ಬಡಿದ ಕಾರಣ ಬೆಳ್ಳಕ್ಕಿಗಳು ಬೆಚ್ಚಿವೆ. ಈ ವಿದ್ಯಮಾನದಿಂದಾಗಿ ಆಗಸ್ಟ್ 19 ರಂದು ಕೆರೆಯಲ್ಲಿ ಬೆಳ್ಳಕ್ಕಿಗಳು ಬೆರಳೆಣಿಕೆಯಲ್ಲಿ ಕಂಡು ಬಂದವು, ಕೇವಲ 5 ರಿಂದ 6 ಗೂಡುಗಳಲ್ಲಿ ಮರಿಗಳೊಂದಿಗೆ ತಾಯಿ ಪಕ್ಷಿ ಕುಳಿತಿರುವುದು ಕಂಡು ಬಂದಿದೆ. ಉಳಿದಂತೆ ಎಲ್ಲ ಬೆಳ್ಳಕ್ಕಿಗಳು ಹಾರಿ ಹೋಗಿವೆ. ಮರಿಗಳ ಹಾರಾಟ-ಚಿರಾಟದಿಂದ ಸಂತೋಷ ಸಂಭ್ರಮದಲ್ಲಿರಬೇಕಿದ್ದ ಮುಂಡಿಗೆಕೆರೆ ಪಕ್ಷಿಧಾಮ ಈಗ ಸೂತಕದ ಮನೆಯಂತಾಗಿದೆ. ಈ ವರ್ಷ ಜೂನ್ನಿಂದ ಆಗಸ್ಟ್ 19 ರವರೆಗೆ 2630 ಮಿ.ಮೀ. ಮಳೆಯಾಗಿದ್ದು, ಉತ್ತಮ ವಾತಾವರಣ ಇದ್ದರೂ, ಸಿಡಿಲಿನ ಆರ್ಭಟಕ್ಕೆ ಸಿಕ್ಕು ಪಕ್ಷಿಗಳ ವಂಶಾಭಿವೃದ್ಧಿ ಸಾಧ್ಯವಾಗದಂತಾಗಿದೆ.
ಸೋಂದಾ ಜಾಗೃತ ವೇದಿಕೆ ಕಳೆದ 29 ವರ್ಷಗಳಿಂದ ಇಲ್ಲಿಯ ಆಗು-ಹೋಗುಗಳನ್ನು ದಾಖಲಿಸುತ್ತಿದೆ. ಪ್ರತಿವರ್ಷ ಪಕ್ಷಿಗಳು 120 ರಿಂದ 130 ದಿನಗಳವರೆಗೆ ವಾಸ್ತವ್ಯವಿರುತ್ತವಾದರೂ ಈ ವರ್ಷ ಕೇವಲ 54 ದಿನಕ್ಕೆ ಹಾರಿಹೋಗಿವೆ.| ರತ್ನಾಕರ ಹೆಗಡೆ ಬಾಡಲಕೊಪ್ಪ, ಸೋಂದಾ ಜಾಗೃತ ವೇದಿಕೆ ಪ್ರಮುಖ