ಆಕ್ರೋಶಕ್ಕೆ ಕಾರಣವಾಯ್ತು ಬಿಬಿಎಂಪಿ ಅಧಿಕಾರಿಯ ರಸ್ತೆ ಸ್ವಚ್ಛತಾ ವಿಡಿಯೋ!| Bengaluru

untitled-design-2025-09-15t123921059-68c7bbc0a6f9a
Published on

Bengaluru: ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿನ ಅವ್ಯವಸ್ಥೆಯ ಬಗ್ಗೆ ಕೆನಡಾದ ವ್ಲಾಗರ್​ ಕ್ಯಾಲೆಬ್​ ಫ್ರೈಸೆನ್​ ಅವರ ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡು ಸ್ವಚ್ಛತೆ ಕಾರ್ಯ ಆರಂಭಿಸಿದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ರಾಜೇಂದ್ರ ಚೋಳನ್​ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ˌ ಅನೇಕ ಬಾರಿ ಇಲ್ಲಿನ ಸಮಸ್ಯೆಯ ಬಗ್ಗೆ ದೂರು ನೀಡಿದರು ಸ್ಪಂದಿಸದ ಅಧಿಕಾರಿಗಳಿಗೆ ˌ ಈಗ ವಿದೇಶಿ ಪ್ರಜೆಯ ವಿಡಿಯೋದಿಂದ ಜ್ಞಾನೋದಯವಾಗಿದೆ ಎಂದು ಟೀಕಿಸಿದ್ದಾರೆ.

ಬೆಂಗಳೂರಿನ ಹೃದಯದ ಭಾಗ ಎಂದೇ ಪ್ರಸಿದ್ದಿ ಪಡೆದಿರುವ ಮೆಜೆಸ್ಟಿಕ್​ ಪ್ರದೇಶದಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಉಂಟಾಗುವ ಭೀಕರ ಸ್ಥಿತಿಯ ವಿಡಿಯೋವೊಂದನ್ನು ಫ್ರೈಸೆನ್ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮೆಜೆಸ್ಟಿಕ್​ನಿಂದ ಸ್ಟಾರ್​ಬಕ್ಸ್​ಗೆ ಕೇವಲ 1.5 ಕಿಮೀ ಇದ್ದು, ಇಲ್ಲಿಗೆ ನಡೆದುಕೊಂಡು ಹೋಗಲು ಎಷ್ಟು ಕಷ್ಟ ಎಂಬುದನ್ನುಈ ವಿಡಿಯೋ ತೋರಿಸಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನಾಗರಿಕ ಸಂಸ್ಥೆಯು ಆ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯಾರಂಭ ಮಾಡಿದ್ದು, ಈ ವೇಳೆ ಬಿಬಿಎಂಪಿ ಆಯುಕ್ತ ಚೋಳನ್​ ನಾಗರೀಕರೊಂದಿಗೆ ಸೇರಿ ಪಾದಚಾರಿ ಮಾರ್ಗಗಳನ್ನು ಗುಡಿಸಲು ಪ್ರಾರಂಭಿಸಿ, ಈ ವೇಳೆ ಅಲ್ಲಿಯ ಸಿಬ್ಬಂದಿಗಳೊಂದಿಗೆ ಕೂತು ಉಪಹಾರ ಸೇವಿಸಿದರು.

ಈ ಮೊದಲು ಈ ಸ್ಥಳದಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇಂದು ಕಸ, ಮೂತ್ರ, ಮುಳ್ಳುತಂತಿ ಇದ್ದ ಪ್ರದೇಶದಲ್ಲಿ ಎಲ್ಲರೂ ಕುಳಿತು ಊಟ ಮಾಡುತ್ತಿರುವುದು ರೋಮಾಂಚನಕಾರಿಯಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ ವ್ಲಾಗರ್​ ಫ್ರೈಸೆನ್ ತಮ್ಮ ಮತ್ತೊಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆಯೇ ನೆಟ್ಟಿಗರು ಬಿಬಿಎಂಪಿ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯ ನಿವಾಸಿಗಳು ವರ್ಷಗಳಿಂದ ದೂರು ನೀಡಿದರೂ ಅದಕ್ಕೆ ನಿರ್ಲಕ್ಷ್ಯ ಮಾಡಿದ್ದು, ಈಗ ವಿದೇಶಿಯರೊಬ್ಬ ದೂರನ್ನು ನೀಡಿದ ನಂತರ ನಾಗರಿಕ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇನ್ನೋರ್ವ ದಿ ಸ್ಕಿನ್ ಡಾಕ್ಟರ್ ಎಂಬ ಹೆಸರಿನ X ಖಾತೆದಾರನೊಬ್ಬರು ಪ್ರತಿಕ್ರಿಯಿಸಿದ್ದು, ನಾವು ಇನ್ನೂ ವಸಾಹತುಶಾಹಿ ಆಳ್ವಿಕೆಯಲ್ಲಿದ್ದೇವಾ, ಇಲ್ಲಿನ ಕೆಲಸಗಳನ್ನು ಮಾಡುವಲ್ಲಿ ಭಾರತೀಯರ ಧ್ವನಿಗಿಂತ ಬಿಳಿಯ ವ್ಯಕ್ತಿಯ ವಿಡಿಯೋ ಹೆಚ್ಚಾಯಿತಾ? ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net