

ಮಂಗಳೂರು: ಒಂದು ಪ್ರದೇಶ ಹಲವು ಭಾಷೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಕರಾವಳಿ ಪ್ರದೇಶವು ದೇಶದಲ್ಲೇ ವಿಶಿಷ್ಠವಾದ ಸಂಸ್ಕೃತಿಕ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಸಂಸ್ಕೃತಿ ಮತ್ತು ಕ್ರೀಡೆಯ ಬಗ್ಗೆ ಮಹತ್ವವನ್ನು ಸಾರುವ ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್ ನಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಸಂತಸದ ವಿಚಾರ. ಒಂದು ಒಳ್ಳೆಯ ಕಾರ್ಯಕ್ಕಾಗಿ ಇಂತಹ ಕಾರ್ಯ ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ರಮ ಶ್ಲಾಘನೀಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಸಂಜೆ ನಗರದ ಓಷನ್ ಪರ್ಲ್ ಹೋಟೆಲ್ ಮೂರನೇ ಆವೃತ್ತಿಯ ಮಂಗಳೂರು ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್-2025 ಇದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕರಾವಳಿ ಜಿಲ್ಲೆಗಳು ರಾಜ್ಯದಲ್ಲೇ ಎಲ್ಲಾ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಇಲ್ಲಿ ಎಲ್ಲ ಜಾತಿ ಭಾಷೆ ಮತದ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಗಮನಸೆಳೆಯುವ ಅವಕಾಶ ಇರುವಂತಹ ಒಂದು ಪ್ರದೇಶ ದ.ಕ ಜಿಲ್ಲೆ. ತಪಸ್ಯ ಫೌಂಡೇಶನ್ ಅತ್ಯುತ್ತಮ ಸಾಮಾಜಿಕ ವಿಚಾರದೊಂದಿಗೆ ಸಮಾಜಮುಖಿ ಕಾರ್ಯಕ್ರಮ ನಡೆಸಲು ನಿರ್ದರಿಸಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಒಂದಾಗಿ ದುಡಿಯಬೇಕು. ಜಿಲ್ಲಾಡಳಿತ ಇಂತಹ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, ಇತ್ತೀಚಿಗೆ ಅನೇಕ ಬೀಚ್ ಫೆಸ್ಟ್ ನಡೆಯುತ್ತಿದೆ, ಆದರೆ ತಪಸ್ಯ ಫೌಂಡೇಶನ್ ನಿರ್ದಿಷ್ಟ ಸಮಾಜಿಕ ಕಳಕಳಿಯಿಂದ ಕಾರ್ಯಕ್ರಮ ಆಯೋಜಿಸುತ್ತಿದೆ. ಇದರ ಜತೆಗೆ ‘ಬ್ಯಾಕ್ ಟು ಊರು’ ಎಂಬ ಪರಿಕಲ್ಪನೆಯಡಿ ಅನೇಕ ಕಾರ್ಯಕ್ರಮಗಳು ಮಂಗಳೂರಿನಲ್ಲಿ ನಡೆಯಬೇಕು. ಇದರ ಜತೆಗೆ ಇಲ್ಲಿ ಹೊಸ ಉದ್ದಿಮೆಗಳು, ಪ್ರವಾಸೋಧ್ಯಮ ಅಭಿವೃದ್ಧಿಗೆ ಅವಕಾಶ ತೆರೆದುಕೊಳ್ಳುವಂತಹ ಕಾರ್ಯಕ್ರಮ ನಡೆಯಬೇಕು. ಪ್ರತಿಭಾಪಲಾಯನವನ್ನು ತಡೆದು ಹೊರ ದೇಶದಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನವರನ್ನು ಮಂಗಳೂರಿಗೆ ಕರೆತರುವ ಹಾಗೂ ಇಲ್ಲಿ ಉದ್ಯೋಗ ನಿರ್ವಹಿಸುವಂತಹ ವ್ಯವಸ್ಥೆಗಳಾದಾಗ ಮಂಗಳೂರು ಎಕನಾಮಿಕಲ್ ಕ್ಯಾಪಿಟಲ್ ಆಗಿ ರೂಪುಗೊಳ್ಳಲು ಸಾಧ್ಯವಿದೆ. ತಪಸ್ಯ ಫೌಂಡೇಶನ್ ಇಂತಹ ಯೋಜನೆಗಳನ್ನೂ ಆಯೋಜಿಸಬೇಕು. ಸಾಮಾಜಿಕ ಕಳಕಳಿಯ ಉದ್ದೇಶದಿಂದ ನಡೆಸುತ್ತಿರುವ ಇಂತಹ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಪಂ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಕೆ, ಎಸಿ ವಿನಯ್ ರಾಜ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ನವೀನ್ ಚಂದ್ರ ಹೆಗ್ಡೆ, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಪ್ರಧಾನ ಮಾರ್ಕೆಟಿಂಗ್ ಅಧಿಕಾರಿ ಟಿವಿ ನಾರಾಯಣ್, ಹರ್ಷ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು. ತಪಸ್ಯ ಫೌಂಡೇಶನ್ ಫೌಂಡರ್ ಸಬಿತಾ ಆರ್.ಶೆಟ್ಟಿ ಪ್ರಾಸ್ತಾವಿಸಿದರು. ಸಿಎ ಎನ್.ಬಿ ಶೆಟ್ಟಿ ಸ್ವಾಗತಿಸಿದರು.
----------------
ತಪಸ್ಯ ಫೌಂಡೇಶನ್ ಸಾಮಾಜಿಕ ಸೇವೆ
ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾನ್ಸರ್ ಪೀಡಿತ ರೋಗಿಗಳ ಕೊನೆಯ ಹಂತದಲ್ಲಿನ ಆರೈಕೆಗಾಗಿ ತಪಸ್ಯ ಫೌಂಡೇಶನ್ ಅನ್ನು 2019ರಲ್ಲಿ ಸ್ಥಾಪಿಸಿದ್ದೇವೆ. ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ರೋಗಿಗಳ ಆರೈಕೆ ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನ ರೋಗಿಗಳ ಆರೈಕೆಗಾಗಿ ಸುಸಜ್ಜಿತ ಕೇಂದ್ರ ಸ್ಥಾಪನೆಗಾಗಿ ಆರ್ಥಿಕ ಸಹಾಯದ ಉದ್ದೇಶದಿಂದ ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್ ಆಯೋಜನೆಯಿಂದ ಸಾಮಾಝಿಕ ಜಾಗೃತಿ ಜತೆಗೆ ಕ್ಯಾನ್ಸರ್ ಪೀಡಿತರ ಆರೈಕೆಗೂ ಸಹಾಯವಾಗಲಿದೆ ಎಂದು ತಪಸ್ಯ ಫೌಂಡೇಶನ್ ಫೌಂಡರ್ ಸಬಿತಾ ಆರ್.ಶೆಟ್ಟಿ ಹೇಳಿದರು.