ಉತ್ತರಾಖಂಡ್​ ಚಾರಣಕ್ಕೆ ತೆರಳಿ ಬದುಕುಳಿದವರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್

kbg
Published on

ಬೆಂಗಳೂರು: ಉತ್ತರಾಖಂಡದ ಸಹಸ್ತ್ರತಾಲ್‌ ಶಿಖರ ಏರಲು ಹೋಗಿ ಟ್ರೆಕ್ಕಿಂಗ್‍ನಲ್ಲಿ ಸಿಲುಕಿ ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿವರು, ಇಂದು (ಗುರುವಾರ) ಸಂಜೆ 5.50ರ ವಿಮಾನದಲ್ಲಿ ಬದುಕುಳಿದ ಎಲ್ಲಾ 13 ಮಂದಿ ಚಾರಣಿಗರು ಬೆಂಗಳೂರಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಶಿಖರ ಏರಲು ಹೋಗಿ ಮೃತಪಟ್ಟಿರುವ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‍ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ಅಂಬ್ಯುಲೆನ್ಸ್​ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ. ಇನ್ನೂ ಟ್ರಕ್ಕಿಂಗ್​ನಲ್ಲಿ ಸಿಲುಕಿ ಬದುಕುಳಿದ 13 ಚಾರಣಿಗರು ಇಂದು ರಾತ್ರಿ 8:45ರ ಸಮಯಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಕರ್ನಾಟಕ ಮೌಂಟನೀರಿಂಗ್ ಇನ್ಸ್ಟಿಟ್ಯೂಟ್ ಮುಖಾಂತರ ಉತ್ತರಾಖಂಡದ ಸಹಸ್ತ್ರತಾಲ್‌ಗೆ ಮೇ 29ರಂದು ಕರ್ನಾಟಕದ 22 ಜನರ ಗುಂಪು ಚಾರಣಕ್ಕೆ ತೆರಳಿತ್ತು. 21 ಚಾರಣಿಗರು ಮತ್ತು ಒಬ್ಬರು ಗೈಡ್ ಅನ್ನೊಳಗೊಂಡ ಟೀಂ ಇದಾಗಿತ್ತು. ಅಲ್ಲಿನ ಕುಫ್ರಿ ಟಾಪ್‌ ಎಂಬ ಶಿಖರಕ್ಕೆ ಹತ್ತಿ ಮರಳುತ್ತಿದ್ದಾಗ ಹವಾಮಾನ ಕೆಟ್ಟು ವಿಪರೀತ ಹಿಮಗಾಳಿ ಬೀಸಲಾರಂಭಿಸಿದೆ. ಇಳಿಯುವ ದಾರಿ ಮುಚ್ಚಿಹೋಗಿದ್ದು, ಹಿಂದಿರುಗಲು ಗೊತ್ತಾಗಿಲ್ಲ. ಎಲ್ಲರೂ ಅಲ್ಲೇ ಬಂಡೆಗಳನ್ನು ಆಶ್ರಯಿಸಿ ಪಾರಾಗಲು ಯತ್ನಿಸಿದ್ದಾರೆ. ಆದರೆ 9 ಜನ ಮೃತಪಟ್ಟಿದ್ದಾರೆ. 9 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಇಂದು ಸಂಜೆ ಬೆಂಗಳೂರಿಗೆ ಮೃತದೇಹಗಳನ್ನು ತರುವ ಸಾಧ್ಯತೆ ಇದೆ. ವಿಶೇಷ ವಿಮಾನದಲ್ಲಿ ಮೃತ ದೇಹಗಳು ರವಾನೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net