

ಮಂಗಳೂರು: ಸಮಗ್ರ ವ್ಯಕ್ತಿತ್ವದ ಪ್ರಗತಿ ಹಾಗೂ ಜ್ಞಾನದಾಹ ತಣಿಸುವುದು ಪುಸ್ತಕದ ಓದಿನಿಂದ ಮಾತ್ರ ಸಾಧ್ಯ. ಓದುವ ಹವ್ಯಾಸ ನಶಿಸುತ್ತಿದ್ದು, ಓದಿನಿಂದ ಜ್ಞಾನ ಗಳಿಕೆಗೆ ಗ್ರಂಥಾಲಯಗಳ ಸದ್ಭಳಕೆ ಆಗಬೇಕು. ಜ್ಞಾನಾರ್ಜನೆಗಾಗಿ ಪೂರಕವಾದ ಗ್ರಂಥಾಲಯದ ಉಪಯೋಗದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನ ಯೆಯ್ಯಡಿ ಕೈಗಾರಿಕಾ ಪ್ರದೇಶದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಓದುವ ಹವ್ಯಾಸ ವ್ಯಕ್ತಿತ್ವ ರೂಪಿಸುವುದರೊಂದಿಗೆ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಜ್ಞಾನದ ಹಸಿವು ತಣಿಸುವುದರೊಂದಿಗೆ ಮನೋವಿಕಾಸಕ್ಕೆ ಓದುವ ಹವ್ಯಾಸ ನೆರವು ನೀಡುತ್ತದೆ. ಆದರೆ ಯುವ ಸಮೂಹದಲ್ಲಿ ಪುಸ್ತಕ ಓದುವ ಹವ್ಯಾಸ ಕುಸಿಯುತ್ತಿದೆ. ಓದುವ ಹವ್ಯಾಸ ಬೆಳೆದಂತೆ ವಿಮರ್ಶೆ ಮನೋಭಾವ ವಿಕಸಿತಗೊಂಡು ಸರಿ-ತಪ್ಪುಗಳ ಅರಿವು ಮೂಡಿಸುತ್ತದೆ. ಪುಸ್ತಕ ಜ್ಞಾನ ನೀಡುವ ಮೂಲ. ಓದುವುದರಿಂದ ಜಗತ್ತಿನೊಂದಿಗೆ ನಮ್ಮ ಸಂಬಂಧ ಏನು ಎಂಬುದು ತಿಳಿಯುತ್ತದೆ. ವಿಷಯವನ್ನು ಇದ್ದಂತೆ ಅರಿವಿಗೆ ತಂದುಕೊಳ್ಳುವುದೇ ಜ್ಞಾನ. ಪರಂಪರಾಗತವಾಗಿ ಭಗವಂತ ನೀಡಿದ ಜ್ಞಾನವನ್ನು ಇತರರಿಗೆ ತಿಳಿಸುವವನೇ ಗುರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಗ್ರಂಥಾಲಯದಲ್ಲಿ ಲಭ್ಯವಿರುವ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಭಾಷೆ, ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ನಿಯತಕಾಲಿಕೆಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಸಂದರ್ಶನ, ಮನೋಸಾಮರ್ಥ್ಯಕ್ಕೆ ಸಂಬಂಧಿಸಿದ ಪುಸ್ತಕ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆ ಜತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ನೀರು, ರಸ್ತೆ ನಿರ್ಮಿಸಿದರೆ ಸಾಕು ಎನ್ನುವ ಭಾವನೆಯನ್ನು ಮಾತ್ರ ಜನಪ್ರತಿನಿಧಿಗಳು ಹೊಂದಿರದೆ ಕ್ಷೇತ್ರದಲ್ಲಿ ಮೂಲಸೌಕರ್ಯದೊಂದಿಗೆ ಜನಸಾಮಾನ್ಯರ ಜ್ಞಾನ ಹೆಚ್ಚಿಸುವ ಕಾರ್ಯಕ್ಕೆ ಮುಂದಾದರೆ ಸಮಾಜದಲ್ಲಿ ಸೌಹಾರ್ದತೆ ಸ್ಥಾಪಿಸಲು ಸಾಧ್ಯ ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರಾದ ಜಯ ವಿಭವ ಸ್ವಾಮಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರುನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಕಾರಿ ಗಾಯತ್ರಿ, ಎಂಎಲ್‌ಸಿ ಐವನ್ ಡಿಸೋಜಾ, ಪಾಲಿಕೆ ಸದಸ್ಯರಾದ ಶಕಿಲಾ ಕಾವ ಮತ್ತು ಎಸಿ ವಿನಯರಾಜ್ ಮತ್ತಿತರರು ಉಪಸ್ಥಿತರಿದ್ದರು.
------------------
ಜಿಲ್ಲಾ ಕೇಂದ್ರ ಗ್ರಂಥಾಲಯದ ಆಡಳಿತ ಕಚೇರಿ ಯೆಯ್ಯಡಿಯ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ, ಮಕ್ಕಳ ಓದುವಿಕೆಗೆ ಮತ್ತು ಹಿರಿಯ ನಾಗರಿಕರಿಗೆ ಬಂದು ಓದಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕೇಂದ್ರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ, ಉಚಿತವಾಗಿ ತರಬೇತಿ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲು ಉದ್ದೇಶಿಸಲಾಗಿದೆ.
- ಗಾಯತ್ರಿ
ಮುಖ್ಯ ಗ್ರಂಥಾಲಯಾಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ
------------------
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಿನ ಚಕಮುಖಿ
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದು ಮುಖ್ಯವಲ್ಲ, ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವುದೂ ಮುಖ್ಯ. ಜಿಲ್ಲಾ ಗ್ರಂಥಾಲಯ ಕೇಂದ್ರ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ, ನೀವು ಕೂಡ ಮುಂದಿನ ದಿನಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವ ಅವಕಾಶ ಸಿಗಲಿ ಎಂಬ ಶಾಸಕ ವೇದವ್ಯಾಸ ಕಾಮತ್ ಹೇಳಿಕೆಗೆ ಎಂಎಲ್‌ಸಿ ಐವನ್ ಡಿಸೋಜಾ, ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ದ್ವನಿಗೂಡಿಸಿದ ಪಾಲಿಕೆ ಸದಸ್ಯ ಎಸಿ ವಿನಯರಾಜ್‌ಗೆ ಶಾಸಕ ವೇದವ್ಯಾಸ ಕಾಮತ್ ಅವರು ‘ಏ..ನಿನ್ನಲ್ಲಿ ನಾನು ಮಾತಾಡಿಲ್ಲ, ನೀನ್ಯಾಕೆ ಇದಕ್ಕೆಲ್ಲ ಮೂಗುತುರಿಸುತ್ತಿಯಾ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.