ಶಾಲೆಬಿಟ್ಟ 8 ಮಕ್ಕಳ ವಾಪಸ್ ಕರೆತಂದ ಶಿಕ್ಷಕರು

mkg1d
Published on

ಚನ್ನಗಿರಿ: ತಾಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಶುಕ್ರವಾರ ಶಾಲೆ ತೊರೆದು ಮನೆಯಲ್ಲಿ ಉಳಿದ 8 ವಿದ್ಯಾರ್ಥಿಗಳನ್ನು ಗುರುತಿಸಿ ಮತ್ತೆ ವಾಪಸ್ ಶಾಲೆಗೆ ಕರೆತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಸಹಶಿಕ್ಷಕ ಜಿ.ಪಿ. ಲಿಂಗೇಶ್‌ಮೂರ್ತಿ, ಮಗುವೊಂದು ಕಲಿತರೆ ಗ್ರಾಮವೊಂದು ಕಲಿತಂತೆ ಎನ್ನುವ ಮಾತು ಮಾತಾಗಿ ಉಳಿಯಬಾರದು ಎನ್ನುವ ಕಾರಣಕ್ಕೆ ಶಾಲೆ ಪ್ರಾರಂಭದಲ್ಲಿ ದಾಖಲಾತಿ ಪಡೆದು ಸ್ವಲ್ಪ ಸಮಯ ಶಾಲೆಗೆ ಬಂದು ಮನೆಯಲ್ಲಿ ಇರುವಂತಹ ಮಕ್ಕಳ ಪಟ್ಟಿ ತಯಾರಿಸಿ, ಅವರ ಪಾಲಕರ ಮನವೊಲಿಸಿ 8 ಮಕ್ಕಳನ್ನು ವಾಪಸ್ ಕರೆತರಲಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಜಮೀನಿಗೆ ಕರೆದುಕೊಂಡು ಹೋಗುತ್ತಾರೆ. ಅಂತಹ ಮಕ್ಕಳನ್ನು ಅವರ ಪಾಲಕರ ಮನವೊಲಿಸಿ ಕರೆತರುವುದು ಕಷ್ಟ. ಆದರೂ, ಛಲಬಿಡದೇ ಇಂದು ಕೆಲ ಮಕ್ಕಳನ್ನು ಕರೆತರಲಾಗಿದೆ ಎಂದರು.

ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನಕುಮಾರ್, ಹಿರಿಯ ಸಹಶಿಕ್ಷಕ ಗವಿ ರಂಗಸ್ವಾಮಿ, ಶಾಲಾಭಿವೃದ್ಧ್ದಿ ಸಮಿತಿ ಸದಸ್ಯರು, ಸಹ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net