ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣದ ಅವಕಾಶ ನೀಡುವ ರಾಷ್ಟ್ರೋತ್ಥಾನ ಪರಿಷತ್‌ನ ತಪಸ್, ಸಾಧನಾ

Published on

ಬೆಂಗಳೂರು: ಐಐಟಿ, ಎಂಜಿನಿಯರಿಂಗ್, ಡಾಕ್ಟರ್ ಸೀಟ್ ಪಡೆದು ವಿದ್ಯಾಭ್ಯಾಸ ಮಾಡುವುದು ಆರ್ಥಿಕ ದುರ್ಬಲರಿಗೆ ಅಸಾಧ್ಯ. ಅಂತಹ ಆರ್ಥಿಕ ದುರ್ಬಲ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂಬ ಕಾರಣಕ್ಕೆ ರಾಷ್ಟ್ರೋತ್ಥಾನ ಪರಿಷತ್ ಆರಂಭಿಸಿರುವ ತಪಸ್ - ಸಾಧನಾ ಯೋಜನೆ ಹಲವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ.

ಗ್ರಾಮೀಣಭಾಗದ ಆರ್ಥಿಕವಾಗಿ ಸಬಲರಲ್ಲದ ಗಂಡುಮಕ್ಕಳಿಗೆ ಪಿಯು ಶಿಕ್ಷಣದೊಟ್ಟಿಗೆ ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ತಪಸ್‌ನಲ್ಲಿ, ಹಾಗೂ ಸಾಧನಾದಲ್ಲಿ ಹೆಣ್ಣುಮಕ್ಕಳಿಗೆ ಪಿಯು ಶಿಕ್ಷಣದೊಟ್ಟಿಗೆ ನೀಟ್ ಹಾಗೂ ಸಿಇಟಿ ಪರೀಕ್ಷೆಗೆ ತರಬೇತಿಯನ್ನೂ ನೀಡಲಾಗುತ್ತಿದೆ.

ವರ್ಷಕ್ಕೆ ಕೇವಲ 45 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಈ ಯೋಜನೆಯು ಬೆಂಗಳೂರಿನ ಬನಶಂಕರಿಯಲ್ಲಿರುವ ತಪಸ್ ಕ್ಯಾಂಪಸ್‌ನಲ್ಲಿ, ಬೇಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ 2 ವರ್ಷದ ಪಿಯು ಶಿಕ್ಷಣ ಹಾಗೂ ಐಐಟಿ-ಜೆಇಇ ತರಬೇತಿ, ಹಾಸ್ಟೆಲ್, ಊಟ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.

ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳ ಮೂಲಕ, ಯಾವುದೇ ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೇ, ವಿದ್ಯಾರ್ಥಿನಿಯರ ಆರ್ಥಿಕ ಪರಿಸ್ಥಿತಿ, ಗ್ರಹಣಶಕ್ತಿ, ಆಸಕ್ತಿ, ಬದ್ಧತೆ, ನಡವಳಿಕೆ, ಸಮಯದ ಸದುಪಯೋಗ ಮತ್ತು ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ 60 ವಿದ್ಯಾರ್ಥಿನಿಯರನ್ನು ಸಾಧನಾ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆಯ್ಕೆಯಾಗಿರುವ ಹೆಣ್ಣುಮಕ್ಕಳಿಗೆ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ನೀಟ್ ಹಾಗೂ ಸಿಇಟಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿಯೂ ಹಾಸ್ಟೆಲ್, ಭೋಜನ, ಕಾಲೇಜುಶುಲ್ಕ, ಅಧ್ಯಯನ ಸಾಮಗ್ರಿ, ತರಬೇತಿ, ಎಲ್ಲವೂ ಉಚಿತವಾಗಿದ್ದು, ರಾಜ್ಯದ ಪ್ರತಿಷ್ಠಿತ ಬೇಸ್ ಸಂಸ್ಥೆಯ ಶೈಕ್ಷಣಿಕ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ವಿದ್ಯಾರ್ಥಿಗಳ ಆಯ್ಕೆಯ ಮಾನದಂಡ

ಮಕ್ಕಳು ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರಬೇಕು. 9ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 85%ಗಿಂತ ಹೆಚ್ಚು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷದ ಒಳಗೆ ಇರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೇ ದಿನಾಂಕ ಸೆ.30.

ಕಳೆದ 12 ವರ್ಷದಲ್ಲಿ 433 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ ಸೇರಿದಂತೆ ವಿವಿಧ ಪದವಿಗಳಿಗೆ ಸೀಟು ಪಡೆದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: tapassaadhana.rashtrotthana.org  ದೂ: 9481201144, 9844602529, 7975913828

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net