ರಾಜ್ಯದಲ್ಲಿ ತ್ರಿಭಾಷಾ ಸೂತ್ರವೇ ಇರಲಿ: ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಒತ್ತಾಯ

High school teacher
Published on

ಬೆಂಗಳೂರು: ರಾಜ್ಯದಲ್ಲಿ ದ್ವಿಭಾಷಾ ಸೂತ್ರದ ಅಳವಡಿಕೆಯ ಪ್ರಸ್ತಾಪ ಕೇಳಿಬರುತ್ತಿರುವುದನ್ನು ಪರಿಗಣಿಸದೇ ಪ್ರಸ್ತುತ ಇರುವ ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕು ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಒತ್ತಾಯಿಸಿದೆ.

ಭಾನುವಾರ ಶಿಕ್ಷಕರ ಸದನದಲ್ಲಿ ನಡೆದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ 2024ನೇ ಸಾಲಿನ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಸರ್ವಸದಸ್ಯರ ಮಹಾಸಭೆಯಲ್ಲಿ ಒಕ್ಕೊರಲ ಅಭಿಪ್ರಾಯವನ್ನು ಮಂಡಿಸಿತು.

ಪ್ರಸ್ತುತ ರಾಜ್ಯದಲ್ಲಿ 4,871 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಂಜೂರಾಗಿರುವ 5,060 ಹುದ್ದೆಗಳಲ್ಲಿ 3,532 ಹುದ್ದೆ ಮಾತ್ರ ಭರ್ತಿಯಾಗಿವೆ. 3,667 ಅನುದಾನಿತ ಪ್ರೌಢಶಾಲೆಗಳಲ್ಲಿ ಸುಮಾರು 2 ಸಾವಿರ ಹಿಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸ್ನಾತಕೋತ್ತರ ಪದವೀಧರ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪಿಯು ಕಾಲೇಜುಗಳಿಗೆ ಉಪನ್ಯಾಸಕರಾಗಿ ಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಬಡ್ತಿ ನೀಡಲು ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಯಾವುದೇ ಇಲಾಖೆಗೆ ಬಡ್ತಿ ನೀಡಲು ಇಲ್ಲದ ಪರೀಕ್ಷೆ ನಮಗೇಕೆ? ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲೆ ಬಡ್ತಿ ನೀಡಲು ಇಲ್ಲದ ನಿಯಮ ನಮಗೇಕೆ ಎಂದು ಸಂಘದ ಅಧ್ಯಕ್ಷ ಸಿದ್ಧಬಸಪ್ಪ ಪ್ರಶ್ನಿಸಿದರು.

ಆದ್ದರಿಂದ ಪರೀಕ್ಷೆಯನ್ನು ಕೈಬಿಡಬೇಕು ಹಾಗೂ ಬಡ್ತಿ ಪ್ರಕ್ರಿಯೆಯಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಶರಣಪ್ಪ ಮಟ್ಟೂರು, ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜೇಗೌಡ ಮತ್ತಿತರರಿದ್ದರು.

ಸಂಘದ ಪ್ರಮುಖ ಬೇಡಿಕೆಗಳು

  • * ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿ/ ಶಿಕ್ಷಕರ ಅನುಪಾತವನ್ನು 70:1ರಿಂದ 40:1ಕ್ಕೆ ಇಳಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನುಕೂಲ ಕಲ್ಪಿಸಬೇಕು (ಆದರ್ಶ, ಕೆಪಿಎಸ್, ಕಿತ್ತೂರು ರಾಣಿ ಚೆನ್ನಮ್ಮ, ನವೋದಯ, ಮೊರಾರ್ಜಿ ಶಾಲೆಗಳಲ್ಲಿ 40:1 ಅನುಪಾತವಿದೆ).
  • * ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪಿಯು ಕಾಲೇಜುಗಳಿಗೆ ಉಪನ್ಯಾಸಕಾರಗಿ ಬಡ್ತಿ ನೀಡಲು 50:50 ಅನುಪಾತ ಅನುಸರಿಸಬೇಕು.
  • * ಎಸ್‌ಎಸ್‌ಎಲ್‌ಸಿಯಲ್ಲಿ ಶೇ.60ಕ್ಕಿಂತ ಕಡಿಮೆ ಲಿತಾಂಶ ಪಡೆದ ವಿಸಯ ಶಿಕ್ಷಕರಿಗೆ ವಾರ್ಷಿಕ ಬಡ್ತಿಯನ್ನು ತಡೆಹಿಡಿಯುವ ಆದೇಶವನ್ನು ಹಿಂಪಡೆಯಬೇಕು.
  • * ಸರ್ಕಾರಿ ನೌಕರರಿಗೆ ಇರುವಂತೆ ಅನುದಾನಿತ ಶಾಲಾ ಶಿಕ್ಷಕರಿಗೆ 25 ಸಾವಿರ ರೂ. ಹಬ್ಬದ ಮುಂಗಡ ಸೌಲಭ್ಯವನ್ನು ಕಲ್ಪಿಸಬೇಕು.

ದ್ವಿಭಾಷಾ ಸೂತ್ರದಿಂದ ಹಿಂದಿ ಶಿಕ್ಷಕರಿಗೆ ಸಮಸ್ಯೆಯಾಗಲಿದೆ ಎನ್ನುವುದು ಶಿಕ್ಷಕರ ಬೇಡಿಕೆಯಾಗಿದೆ. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಎಸ್‌ಇಪಿ ವರದಿ ಪರಿಶೀಲಿಸುವ ವೇಳೆಯಲ್ಲಿ ಈ ವಿಷಯವಾಗಿ ಚರ್ಚಿಸಲಾಗುವುದು. -ಪುಟ್ಟಣ್ಣ, ವಿಧಾನಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net