ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಕಾಡುತ್ತಿರುವ ಜಿಎಸ್‌ಟಿ ಭೂತ; ಮೆಂಟೆನೆನ್ಸ್ ಪಾವತಿ ಮೇಲೆ ತೆರಿಗೆ ಬರೆ ?

apartment
Published on

ಬೆಂಗಳೂರು;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ನಾಗರೀಕರಿಗೆ ಜಿಎಸ್‌ಟಿ ಭೂತ ಕಾಡಲಾರಂಭಿಸಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಪಾವತಿಸುವ ಮಾಸಿಕ ನಿರ್ವಹಣಾ ಮೊತ್ತದ ಮೇಲೂ ಸರ್ಕಾರ ಜಿಎಸ್‌ಟಿ ವಿಧಿಸಲಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

ನಗರ ಪ್ರದೇಶಗಳಲ್ಲಿರುವ ಜನರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವುದು ಸಾಮಾನ್ಯ. ಅದರಲ್ಲೂ ಬೆಂಗಳೂರಿನಲ್ಲಿ ಆ ಪ್ರಮಾಣ ಶೇ.35ರಷ್ಟಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿ ವಸತಿ ಸಮುಚ್ಛಯಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದ ಎರಡನೇ ಹಂತದ ನಗರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳಲ್ಲಿ ಒಟು 30 ಲಕ್ಷಕ್ಕೂ ಹೆಚ್ಚು ಜನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರತಿ ತಿಂಗಳು ನಿರ್ವಹಣೆಗಾಗಿ ಹಣ ಪಾವತಿಸಬೇಕಿರುವುದು ನಿಯಮ. ಸಣ್ಣ ಸಣ್ಣ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ಸದ್ಯ ಈ ತಲೆನೋವು ಅನ್ವಯವಾಗುವುದಿಲ್ಲ ಎನ್ನಲಾಗಿದ್ದು, ಲಕ್ಸುರಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿ ತಿಂಗಳಿಗೆ 7.5 ಸಾವಿರಕ್ಕೂ ಹೆಚ್ಚಿನ ಮೆಂಟೆನೆನ್ಸ್ ಹಣ ಪಾವತಿಸುವವರಿಗೆ ಶೇ.18 ಜಿಎಸ್‌ಟಿ ಕಟ್ಟಬೇಕೆಂಬ ನಿಯಮ ಸದ್ಯದಲ್ಲಿ ಜಾರಿ ಬರಲಿದೆ ಎಂಬ ಮಾತು ತೆರಿಗೆ ಇಲಾಖೆ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಕೆಲವರು ಕೇವಲ ಶೇ.5 ತೆರಿಗೆ ಎಂದು ಹೇಳಿ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರೆ; ಇನ್ನು ಕೆಲವರು ಸ್ಪಷ್ಟತೆ ಇಲ್ಲದೆ ಗೊಂದಲದಲ್ಲಿ ಮುಳುಗಿದ್ದಾರೆ.

ನಿವಾಸಿಗಳ ಸಂಘದ ಖಾತೆಗೆ ತೆರಿಗೆ

ಅಪಾರ್ಟ್‌ಮೆಂಟ್ ನಿಯಮಾವಳಿಯ ಪ್ರಕಾರ, ನಿವಾಸಿಗಳ ಅಸೋಸಿಯೇಷನ್ ರೂಪಿಸಿಕೊಂಡು ಅದನ್ನು ಸಹಕಾರ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಅದರ ಮೂಲಕವೇ ಎಲ್ಲ ಹಣಕಾಸಿನ ವಹಿವಾಟು ನಡೆಸಬೇಕು. ಕಟ್ಟಡಕ್ಕೆ ಬಣ್ಣ ಬಳಿಯುವುದು, ಸ್ವಚ್ಛತೆ, ನೀರಿನ ಬಿಲ್ ಪಾವತಿ, ಕಾಮನ್ ಏರಿಯಾದ ವಿದ್ಯುತ್ ಬಿಲ್ ಪಾವತಿ, ಸೆಕ್ಯುರಿಟಿ ಇತ್ಯಾದಿ ಕೆಲಸಗಾರರ ಸಂಬಳ, ಲ್‌ಟಿ, ಮೋಟಾರ್, ಈಜುಕೊಳ, ಉದ್ಯಾನವ ಇತ್ಯಾದಿ ನಿರ್ವಹಣೆ ಹೀಗೆ ಎಲ್ಲವೂ ಸೇರಿ ಸಂಘದ ವಾರ್ಷಿಕ ವಹಿವಾಟು 20 ಲಕ್ಷ ಮೀರಿದರೆ ಆಗ ಶೇ.18 ಜಿಎಸ್‌ಟಿ ಅನ್ವಯವಾಗಲಿದ್ದು, 3.6ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ.

ಸಂಘದ ಖಾತೆಯ ಮೇಲೆ ತೆರಿಗೆ ಬೀಳುತ್ತದೆ ಎಂದು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಕಾರಣ ತೆರಿಗೆ ಪಾಲಿನ ಹಣ ಕಟ್ ಆಗುವುದರಿಂದ ಕಡಿಮೆಯಾಗುವ ಹಣವನ್ನು ನಿವಾಸಿಗಳೇ ಭರಿಸಬೇಕಾಗುವುದರಿಂದ ಇದು ನೇರವಾಗಿ ನಿವಾಸಿಗಳ ಜೇಬಿಗೆ ಕತ್ತರಿಯಾಗಲಿದೆ.

ಈ ಎಲ್ಲ ಅಂಶಗಳ ಬಗ್ಗೆ ಇನ್ನೂ ಸಾಕಷ್ಟು ಗೊಂದಲವಿದ್ದು, ಸ್ಪಷ್ಟತೆ ಇಲ್ಲ. ತಮ್ಮ ಅಪಾರ್ಟ್‌ಮೆಂಟ್ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತದೆಯೋ ಇಲ್ಲವೋ ಎಂಬುದನ್ನು ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಖಚಿತ ಪಡಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net