

ಜಗದೀಶ್ ಟಿ.ಎನ್. ಚನ್ನಗಿರಿ
ಮಕ್ಕಳ ದಾಖಲಾತಿ ಕೊರತೆಯಿಂದ ಕಳೆದ ಏಳು ವರ್ಷಗಳ ಹಿಂದೆ ಬಾಗಿಲು ಹಾಕಿದ್ದ ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯ ಸ್ವಾತಂತ್ರೃ ಪೂರ್ವದ ಸರ್ಕಾರಿ ಶಾಲೆ ಗುರುವಾರ ಪುನಾರಂಭ ಆಗಿದೆ.
ಹೀಗಾಗಿ ಶಾಲೆಯಲ್ಲೀಗ ಗಂಟೆಯ ಸದ್ದು ಕೇಳುತ್ತಿದೆ. ತರಗತಿಗಳಲ್ಲಿ ಪಾಠ ಪ್ರವಚನದ ಕಲರವವಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವೂ ಲಭ್ಯವಿದೆ. ಈ ಖುಷಿಗೆ ಇಡೀ ಗ್ರಾಮ ಸಡಗರದಲ್ಲಿ ಮೀಯುತ್ತಿದೆ.
ಅಂದ ಹಾಗೆ ಈ ಅಕ್ಷರ ದೇಗುಲ ಆರಂಭದ ಹಿಂದೆ ಊರಿನ ಹಿರಿಯರ ಶ್ರಮವಿದೆ. ತಾವು ಓದಿ, ಬೆಳೆದ ಶಾಲೆ ತಮ್ಮ ಕಣ್ಣೇದುರೇ ಮುಚ್ಚಬಾರದೆಂಬ ದೃಢ ಸಂಕಲ್ಪವಿದೆ. ಅದೀಗ ಫಲ ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಶಾಲಾರಂಭಕ್ಕೆ ಪಣ ತೊಟ್ಟ ಗ್ರಾಮಸ್ಥರು ಆ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗೆ ಫಲ ದೊರೆತು ಒಂದು ಸರ್ಕಾರಿ ಶಾಲೆಗೆ ಮರುಜೀವ ಬಂದಿದೆ.
ನಾರಶೆಟ್ಟಿಹಳ್ಳಿ ಶಾಲೆ ಆರಂಭವಾಗಿದ್ದು ಸ್ವಾತಂತ್ರೃಪೂರ್ವದಲ್ಲಿ ಅಂದರೆ ಈಗ್ಗೆ 90 ವರ್ಷಗಳ ಹಿಂದೆ ಪಕ್ಕದ ಹೊನ್ನನಾಯಕನಹಳ್ಳಿ, ಹೊನ್ನೆಬಾಗಿಯ ಮಕ್ಕಳು ಇದೇ ಶಾಲೆಗೆ ಬಂದು ಹೋಗುತ್ತಿದ್ದರು.
ಕಳೆದ 10 ವರ್ಷಗಳಿಂದೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲಾರಂಭಿಸಿತ್ತು. 2016- 17ರಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 25 ಮಕ್ಕಳು ದಾಖಲಾಗಿದ್ದರು. 2017-18 ರಲ್ಲಿ ಈ ಸಂಖ್ಯೆ 4ಕ್ಕೆ ಇಳಿಯಿತು.
ಇಲಾಖೆ ನಿಯಮಗಳ ಪ್ರಕಾರ ಶಿಕ್ಷಣ ಇಲಾಖೆ 2017ರಲ್ಲಿ ಶಾಲೆ ಮುಚ್ಚುವ ಆದೇಶ ಹೊರಡಿಸಿ ಅಲ್ಲಿದ್ದ ಐವರು ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿತು. ಮಕ್ಕಳು 3 ಕಿ.ಮೀ ದೂರದ ಚನ್ನಗಿರಿಯ ಖಾಸಗಿ ಶಾಲೆಗಳ ದಾರಿ ಹಿಡಿದರು.
ಸರ್ಕಾರಿ ಶಾಲೆಯೊಂದು ಮುಚ್ಚಿಹೋಗಿದ್ದು ಗ್ರಾಮಸ್ಥರನ್ನು ಹಾಗೂ ಅಲ್ಲಿ ಓದಿದ ಹಿರಿಯ ರನ್ನು ಚಿಂತೆಗೀಡುಮಾಡಿತು. ಹೀಗಾಗಿ ಎಲ್ಲರೂ ಒಂದೆಡೆ ಕಲೆತರು. ಹೇಗಾದರೂ ಮಾಡಿ ಶಾಲೆ ತೆರೆಸಲು ಪಣ ತೊಟ್ಟರು.
ಮೂರ‌್ನಾಲ್ಕು ವರ್ಷಗಳಿಂದ ಸ್ಥಳೀಯ ಪಾಲಕರ ಮನೆಗೆ ತೆರಳಿ ಮಕ್ಕಳನ್ನು ಖಾಸಗಿ ಶಾಲೆಯ ಬದಲು ನಮ್ಮೂರಿನ ಸರ್ಕಾರಿ ಶಾಲೆಗೆ ದಾಖಲಿಸಿ ಎಂದು ಪಟ್ಟು ಹಿಡಿದರು. ಯಶಸ್ವಿಯೂ ಆದರು.
ಇದರ ಪರಿಣಾಮ 2024-25ನೇ ಸಾಲಿಗೆ 1ರಿಂದ 7ನೇ ತರಗತಿಗೆ ಗ್ರಾಮದ 6 ಮಕ್ಕಳು ದಾಖಲಾಗಿದ್ದಾರೆ. ಸದ್ಯಕ್ಕೆ ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಕಾಯಂ ಶಿಕ್ಷಕರ ನೇಮಕಕ್ಕೆ ಅವಕಾಶ ಇರದ ಕಾರಣ ಒಬ್ಬ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
ಮಕ್ಕಳ ಸಂಖ್ಯೆ ಹಂತ, ಹಂತವಾಗಿ ಹೆಚ್ಚಾದಂತೆ ಕಾಯಂ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾಹಿತಿ ನೀಡಿದರು.
ಬೇರೆಡೆ ಹೋಗುವ ವಿದ್ಯಾರ್ಥಿಗಳ ಮನವೊಲಿಸಿ ಸರ್ಕಾರಿ ಶಾಲೆಯಲ್ಲೇ ಓದಿಸಲು ಪಾಲಕರು ಮುಂದಾದ ಕಾರಣ ಶಾಲೆ ಆರಂಭಿಸಲಾಗಿದೆ. ಶಾಲೆಗೆ ಇಲಾಖೆಯಿಂದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮಕ್ಕಳ ಸಂಖ್ಯೆ 12ಕ್ಕಿಂತ ಹೆಚ್ಚಾದರೆ ಕಾಯಂ ಶಿಕ್ಷಕರನ್ನು ನೇಮಿಸಲಾಗುವುದು. ಇರುವ ಮಕ್ಕಳಿಗೆ ಸುಸಜ್ಜಿತ ಕೊಠಡಿ, ಶೌಚಗೃಹ, ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ.
-ಎಲ್. ಜಯಪ್ಪ , ಕ್ಷೇತ್ರ ಶಿಕ್ಷಣಾಧಿಕಾರಿ