

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ನಗರದ ಪ್ರೆಸ್‌ಕ್ಲಬ್ ಜಂಕ್ಷನ್‌ನಿಂದ ಚಂದ್ರಗಿರಿ ಸೇತುವೆ ವರೆಗಿನ ಕೆಎಸ್‌ಟಿಪಿ ರಾಜ್ಯ ಹೆದ್ದಾರಿಯನ್ನು 26 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿನಡೆಸಿದ ಒಂದೇ ದಿನದಲ್ಲಿ ರಸ್ತೆ ಮತ್ತೆ ಶಿಥಿಲಾವಸ್ಥೆ ತಲುಪಿದೆ.
ಲೋಕೋಪಯೋಗಿ ಇಲಾಖೆ ರಸ್ತೆಯ ದುರಸ್ತಿಗಾಗಿ 25 ಲಕ್ಷ ರೂ. ಬಿಡುಗಡೆಗೊಳಿಸಿ, ಈ ಹಾದಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ಸೆ.19ರಿಂದ ಕಾಮಗಾರಿ ಆರಂಭಿಸಿತ್ತು. ಅ.5ರಂದು ಬೆಳಗ್ಗೆ ಕಾಮಗಾರಿ ಪೂರ್ತಿಗೊಳಿಸಿ, ವಾಹನಗಳನ್ನು ರಸ್ತೆಯಲ್ಲಿ ಬಿಟ್ಟುಕೊಡುತ್ತಿದ್ದಂತೆ ಭಾರಿ ವಾಹನಗಳ ಸಂಚರಿಸುವಾಗ ರಸ್ತೆಗೆ ಅಳವಡಿಸಿದ್ದ ಇಂಟರ್‌ಲಾಕ್ ಕಳಚಿ ಮೇಲೆದ್ದು ಕಳಪೆ ಕಾಮಗಾರಿಯ ಪ್ರತ್ಯಕ್ಷ ದರ್ಶನವಾಗಿದೆ.
ಹದಿನಾರು ದಿವಸ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ನಡೆಸಲಾಗಿದ್ದು, ಇವೆಲ್ಲವೂ ಒಂದೇ ದಿನದಲ್ಲಿ ಮಣ್ಣುಪಾಲಾಗಿದೆ. ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಚಂದ್ರಗಿರಿ ರಸ್ತೆ ನಿದರ್ಶನವಾಗಿದೆ. ಪ್ರಸಕ್ತ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದರೂ, ಇಂಟರ್‌ಲಾಕ್ ಅಳವಡಿಸುವ ಮೂಲಕ ಸರ್ಕಾರದ ಖಜಾನೆಗೆ ಮತ್ತಷ್ಟು ನಷ್ಟ ಮಾಡಲಾಗಿದೆ ಎಂಬ ದೂರು ವ್ಯಾಪಕಗೊಂಡಿದೆ.
ರಸ್ತೆ ವಾಹನ ಸಂಚಾರಕ್ಕೆ ತೆರವುಗೊಳಿಸಿದ ಕೆಲವೇ ತಾಸುಗಳ ಒಳಗೆ ಹಾಳಾಗಿರುವುದು ನಾಗರಿಕರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಕಳಪೆ ಕಾಮಗಾರಿ ಪ್ರತಿಭಟಿಸಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ಇಂಜಿನಿಯರ್ ಕಚೇರಿಗೆ ಮುತ್ತಿಗೆ ನಡೆಸಿ ಪ್ರತಿಭಟಿಸಿದರು.
ಕೆಎಸ್‌ಟಿಪಿ ರಸ್ತೆ ನಿರ್ಮಾಣಗೊಂಡಂದಿನಿಂದ ಈ ಪ್ರದೇಶದಲ್ಲಿ ನಿರಂತರ ಹಾಳಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಸ್ತೆ ದುರಸ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆಯಾಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.