ಒಂದೇ ತಿಂಗಳಲ್ಲಿ ಬಿರುಕು ಬಿಟ್ಟಿತು ಸಿಎಂ ಉದ್ಘಾಟಿಸಿದ 'ರ‍್ಯಾಪಿಡ್‌ ರೋಡ್’

Rapid Road
Published on

ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ದಟ್ಟಣೆ ತಡೆಗೆ ಹಾಗೂ ಗುಣಮಟ್ಟ ರಸ್ತೆ ನಿರ್ಮಾಣದ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಬಿಬಿಎಂಪಿಯಿಂದ 'ರ‍್ಯಾಪಿಡ್‌ ರೋಡ್’ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ ರಸ್ತೆ ಬಿರುಕು ಬಿಟ್ಟಿದೆ. ಇದರಿಂದ, ಮೊದಲೇ ಕಳಪೆ ಕಾಮಗಾರಿಗಳ ವಿಚಾರದಲ್ಲಿ ಅಪಖ್ಯಾತಿ ಹೊಂದಿರುವ ಬಿಬಿಎಂಪಿಗೆ, ಮತ್ತೊಂದು ‘ರ‍್ಯಾಪಿಡ್‌ ಕಳಪೆ’ ಎಂಬ ಹಣೆಪಟ್ಟಿ ಸಿಕ್ಕಿದಂತಾಗಿದೆ. ಜತೆಗೆ, 'ರ‍್ಯಾಪಿಡ್‌ ರೋಡ್’ ತಂತ್ರಜ್ಞಾನದಲ್ಲಿ ಪಾಲಿಕೆ ಫೇಲ್ ಆಗಿದೆ.

ನಗರದ ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ಪ್ರಾಯೋಗಿಕವಾಗಿ ಈ ತಂತ್ರಜ್ಞಾನದಡಿ ನಿರ್ಮಿಸಿದ್ದ 500 ಮೀಟರ್ ಉದ್ದದ ರ‍್ಯಾಪಿಡ್‌ ರಸ್ತೆಯನ್ನು ಡಿ.8ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಉದ್ಘಾಟನೆಗೊಂಡು ತಿಂಗಳು ಕಳೆಯುವಷ್ಟರಲ್ಲೇ ಈ ರಸ್ತೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಬಗ್ಗೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ, ಕೋಟ್ಯಂತರ ರೂಪಾಯಿ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಆದಿತ್ಯ ಬಿರ್ಲಾ, ಅಲ್ಟ್ರಾ ಟೆಕ್ ಸಂಸ್ಥೆ ಸಹಯೋಗದೊಂದಿಗೆ ಬಿಬಿಎಂಪಿ, ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿತ್ತು. ಈ ತಂತ್ರಜ್ಞಾನದಡಿ ನಿರ್ಮಿಸಿದ್ದ ರಸ್ತೆಯು ದೀರ್ಘಕಾಲ ಬಾಳಿಕೆ ಬರಲಿದೆ ಎಂದು ಪಾಲಿಕೆ ಹೇಳಿಕೊಂಡಿತ್ತು. ರಸ್ತೆಗಳು ಡಾಂಬರೀಕರಣ, ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿ ವೆಚ್ಚಗಿಂತ ಶೇ.25 ಹೆಚ್ಚಿದೆ. ಅಮೆರಿಕದಲ್ಲಿ ಇದೇ ಮಾದರಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅದೇ ಮಾದರಿ ರಸ್ತೆಗಳನ್ನು ನಗರದಲ್ಲಿ ನಿರ್ಮಾಣ ಮಾಡುವುದರಿಂದ ಹಲವು ಅನುಕೂಲಗಳಿವೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಲವು ಬಾರಿ ಹೇಳಿದ್ದರು.

ತುಷಾರ್ ಗಿರಿನಾಥ್ ಹೇಳೋದೇನು?
ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ಪ್ರಾಯೋಗಿಕವಾಗಿ ‘ರ‍್ಯಾಪಿಡ್‌ ರೋಡ್’ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ ರಸ್ತೆಯ ಮಧ್ಯದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ವರದಿ ನೀಡಲಿದೆ. ಈ ವರದಿಯಲ್ಲಿ ರಸ್ತೆ ಬಿರುಕು ಬಿಡಲು ಕಾರಣವೇನು? ಇತ್ಯಾದಿ ಮಾಹಿತಿಗಳನ್ನು ನೀಡಲಿದ್ದಾರೆ. ಇದಕ್ಕೆ ತಗುಲುವ ವೆಚ್ಚ ಬಗ್ಗೆ ಅಧ್ಯಯನ ನಡೆಸಿ ಮುಂದೆ ತಂತ್ರಜ್ಞಾನದಡಿ ರಸ್ತೆಯನ್ನು ನಿರ್ಮಿಸಬೇಕಾ ಅಥವಾ ಬೇಡ್ವೆ ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಅತಿಕ್ರಮಣ ಬಗ್ಗೆ ಈಗಾಗಲೇ ಸಭೆ ನಡೆಸಲಾಗಿದೆ. ಕಂದಾಯ ಇಲಾಖೆಯವರು ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ 382 ಕಡೆಗಳಲ್ಲಿ ಸರ್ವೇ ನಡೆಸಿ ನಮಗೆ ವರದಿ ಕೊಟ್ಟಿದ್ದಾರೆ. 148 ಕಡೆಗಳಲ್ಲಿ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಬಳಿಕ, ಒತ್ತುವರಿ ಕಾರ್ಯಾಚರಣೆಯನ್ನು ನಡೆಸಲಾಗುವುದು. ಬೊಮ್ಮನಹಳ್ಳಿ, ಮಹದೇವಪುರ ಮತ್ತು ಯಲಹಂಕ ವಲಯದಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಲಾಗುವುದು. ರಾಜಕಾಲುವೆ ಮತ್ತು ಕೆರೆಗಳ ಮಾಲೀಕತ್ವವನ್ನು ಕಂದಾಯ ಇಲಾಖೆಗೆ ಹೊಂದಿದೆ. ಒಂದು ವೇಳೆ ಈ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೋರ್‌ವೇಲ್ ಹಗರಣ ಬಗ್ಗೆ ಸದ್ಯ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಮಾತನಾಡುವಂತಿಲ್ಲ. ವಸತಿ ನಕ್ಷೆ ಪಡೆದು ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರಿಂದ ಆಸ್ತಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net