ಹರಿಪ್ರಸಾದ್ ನಂದಳಿಕೆ ಕಾರ್ಕಳ
ಓಡಾಡಲು ಸರಿಯಾದ ರಸ್ತೆಯಿಲ್ಲ… ಕಲ್ಲು ಕೊಂಪೆಯಲ್ಲೇ ನಿತ್ಯ ಓಡಾಟ… ನದಿ ದಾಟಲು ಸೇತುವೆಯಂತೂ ಇಲ್ಲವೇ ಇಲ್ಲ… ಪಂಚಾಯಿತಿಯ ನೀರಿನ ಸಂಪರ್ಕವಿಲ್ಲ.. ಪರಿಶೀಲಿಸಲು ಹೊರಟರೆ ಸಮಸ್ಯೆಗಳ ಸರಮಾಲೆಯನ್ನೇ ಸುತ್ತಿಕೊಂಡಿದೆ ಕಾರ್ಕಳ ತಾಲೂಕಿನ ಈದು ಗ್ರಾಮ…
ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶವಾದ ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕುಗಳ ಗಡಿಭಾಗವಾದ ಈದು ಗ್ರಾಮದಲ್ಲಿ ಸುಮಾರು 65ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸುವರ್ಣ ಹಾಗೂ ಫಲ್ಗುಣಿ ನದಿ ಹರಿಯುತ್ತಿದ್ದು, ಮಳೆಗಾಲದ ಸಂದರ್ಭ ಇಲ್ಲಿನ ಸೇತುವೆ ಭರ್ತಿಯಾಗಿ ಆರು ತಿಂಗಳ ಕಾಲ ಈ ಕುಟುಂಬಗಳ ಜೀವನ ನರಕಯಾತನೆಯಂತಿರುತ್ತದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸುತ್ತು ಬಳಸಿ ಕಾಡುದಾರಿಯಲ್ಲೇ ಸಾಗಬೇಕಿದ್ದು, ಹಲವು ಮಕ್ಕಳು ಮಳೆಗಾಲ ಮುಗಿದ ಮೇಲೆ ಶಾಲೆಗಳಿಗೆ ತೆರಳುತ್ತಿದ್ದಾರೆ. ಮಠದಬೆಟ್ಟು ನಿವಾಸಿಗಳು ಅನೇಕ ಬಾರಿ ಸೌಕರ್ಯಗಳಿಗಾಗಿ ಮನವಿ ಮಾಡಿದ್ದರೂ ಪ್ರಯೋಜನವಿಲ್ಲದಾಗಿದೆ.
ಮೂಲಸೌಕರ್ಯಗಳದ್ದೇ ಕೊರತೆ
ಗಡಿಯಂಚಿನ ಈ ಪ್ರದೇಶದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕ್ರಮವಹಿಸಲೇಬೇಕಾದ ಅನಿವಾರ್ಯತೆ ಇದೆ. ಮೂಲಸೌಕರ್ಯಗಳ ಕಲ್ಪಿಸುವಿಕೆ ಉದ್ದೇಶದಿಂದ ಹೋರಾಟದ ಭಾಗವಾಗಿ 2003ರ ನ.17ರಂದು ಬೊಳ್ಳೆಟ್ಟುವಿನಲ್ಲಿ ನಕ್ಸಲ್ ಚಟುವಟಿಕೆ ಆರಂಭಗೊಂಡಿದ್ದು, ಬಳಿಕ ಸರ್ಕಾರ ಆ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಲಾಗಿತ್ತು. ಆದರೆ ಇಂದಿನ ತನಕ ಅದ್ಯಾವ ಬೇಡಿಕೆಗಳೂ ಈಡೇರಿಲ್ಲ ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.
ತುರ್ತು ಸಂದರ್ಭ ಸಮಸ್ಯೆ
ಈ ಭಾಗದ ರಸ್ತೆ ಕಿರಿದಾಗಿದ್ದು, ಬೃಹತ್ ಕಲ್ಲುಗಳಿಂದಲೇ ತುಂಬಿದೆ. ಅಲ್ಲಲ್ಲಿ ದೊಡ್ಡ ಹೊಂಡಗಳೂ ಇವೆ. ಹೆರಿಗೆ ಅಥವಾ ಗಂಭೀರ ಆರೋಗ್ಯ ಸಮಸ್ಯೆಯಂತಹ ತುರ್ತು ಪರಿಸ್ಥಿತಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಅಸಾಧ್ಯ. ಬೊಳ್ಳೆಟ್ಟು ಭಾಗ ಸಹಿತ ಬಟ್ಟಾಣಿ ಹಾಗೂ ಮಠದಬೆಟ್ಟು ಪರಿಸರದ ಜನತೆ ಪ್ರಮುಖ ಸೌಕರ್ಯಗಳನ್ನು ಪಡೆದುಕೊಳ್ಳಲು ಇಂದಿನವರೆಗೂ ಅಸಾಧ್ಯವಾಗಿದೆ.
ಮೊದಲ ನಕ್ಸಲ್ ಎನ್‌ಕೌಂಟರ್‌ನ ಸ್ಥಳ
ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದದ್ದು ಈದು ಗ್ರಾಮದಲ್ಲಿ. 2003ರಲ್ಲಿ ಮೌಲಸೌಕರ್ಯ ಬೇಡಿಕೆ ಮುಂದಿಟ್ಟು ನಕ್ಸಲ್ ಹೋರಾಟ ನಡೆಯುತ್ತಿತ್ತು. ಬೊಳ್ಕೊಟ್ಟು ರಾಮಪ್ಪ ಪೂಜಾರಿ ಎಂಬುವರ ಮನೆ ಮೇಲೆ ನಡೆದ ಎನ್‌ಕೌಂಟರ್ ದಾಳಿಯಲ್ಲಿ ನಕ್ಸಲ್ ಯುವತಿಯರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದರು. ಈ ಘಟನೆ ನಡೆದು 21 ವರ್ಷಗಳೇ ಕಳೆದರೂ ಮೂಲಸೌಕರ್ಯ, ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ. ನಕ್ಸಲ್ ನಿಗ್ರಹ ಕಾರ್ಯಾಚರಣೆಯಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದ ಈ ಗ್ರಾಮದಲ್ಲಿ ದಶಕಗಳಿಂದ ಅಭಿವೃದ್ಧಿಯ ಕೂಗಷ್ಟೇ ಕೇಳಿಬರುತ್ತಿದೆ.
ಹಲವು ವರ್ಷಗಳ ಬೇಡಿಕೆಯ ಬೊಳ್ಳೆಟ್ಟು- ಮಠದಬೆಟ್ಟು, ಮುಗೆರಡ್ಕ ಸಂಪರ್ಕ ಸೇತುವೆಗೆ ಈಗಾಗಲೇ ಸುಮಾರು 4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಆರಂಭಗೊಳ್ಳಲಿದೆ.
-ವಿ.ಸುನೀಲ್ ಕುಮಾರ್, ಕಾರ್ಕಳ ಶಾಸಕನಕ್ಸಲ್ ಪ್ರದೇಶವೆನ್ನುವ ಹಣೆಪಟ್ಟಿ ಇರುವ ಈ ಗ್ರಾಮದ ಅಭಿವೃದ್ಧಿ ಮರಿಚಿಕೆಯಾಗಿದೆ. ಸೇತುವೆ ಸಹಿತ ರಸ್ತೆಯ ನಿರ್ಮಾಣದ ಬೇಡಿಕೆ ದಶಕಗಳಿಂದ ಇದೆ.
-ಪ್ರಶಾಂತ್ ಗ್ರಾಮಸ್ಥನದಿ ದಾಟಲು ಸೇತುವೆ ಅಗತ್ಯವಿದೆ. ಸಾಕಷ್ಟು ಕುಟುಂಬಗಳು ಮಳೆಗಾಲದಲ್ಲಿ ಹೊರಪ್ರಪಂಚದ ಸಂಪರ್ಕ ಪಡೆಯಲು ಹರಸಾಹಸಪಡುತ್ತಾರೆ. ತುರ್ತು ಸಂದರ್ಭ ಇಲ್ಲಿನ ರಸ್ತೆಯಲ್ಲಿ ಓಡಾಡುವಂತಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಕುಗ್ರಾಮದ ಅಭಿವೃದ್ದಿಗೆ ಮನಸ್ಸು ಮಾಡಬೇಕು.
-ಜ್ಯೋತಿ ಸ್ಥಳೀಯ ನಿವಾಸಿhttps://www.vijayavani.net/accused-who-came-for-trial-died-in-the-police-station-transfer-of-case-to-cid-investigation