ಕೌತುಕಮಯಚೌಕಟ್ಟಿನಲ್ಲಿ ಪ್ರೇಕ್ಷಕರ ಮನಮುಟ್ಟಿದ'ನಟರಾಜ'

Drama
Published on

ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಇತ್ತೀಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ‘ನಟರಾಜ’ ನಾಟಕವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತನ್ನ 18ನೇ ವಾರ್ಷಿಕೋತ್ಸವದ ಅಂಗವಾಗಿ ಸಂಘವು ಈ ನಾಟಕವನ್ನು ಪ್ರದರ್ಶನ ಮಾಡಿತು.

ಚೊಚ್ಚಲ ಪ್ರಯತ್ನದಲ್ಲೇ ನಾಟಕಕಾರ ಆರ್.ವೆಂಕಟರಾಜು ರಂಗಭೂಮಿಯಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ್ದು, ಸ್ವತಃ ನಿರ್ದೇಶಕರಾಗಿಯೂ ನಾಟಕವನ್ನು ಉತ್ತಮವಾಗಿ ಮೂಡಿಬರುವಂತೆ ಮಾಡಿದ್ದಾರೆ ಎಂದು ರಂಗವಿಮರ್ಶಕ ಡಾ.ಎಚ್.ಎ.ಪಾರ್ಶ್ವನಾಥ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಟಕವು ಕೌತುಕಮಯ ಕಥಾವಸ್ತುವಾದರೂ ಸಮಾಜದ ಪ್ರಚಲಿತ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಚಿತ್ತಹರಿಸುವಂತೆ ಮಾಡಿದೆ ಎಂಬುದು ಅವರ ಅಭಿಪ್ರಾಯ. ಮುಂದುವರೆದು ಅನೇಕ ಸಮಸ್ಯೆಗಳತ್ತ ಬೊಟ್ಟು ಮಾಡಿ ಪರಿಹಾರೋಪಾಧಿಯ ದಾರಿಯಲ್ಲಿ ದಿಟ್ಟ ನಿರ್ದಿಷ್ಟ ಹೆಜ್ಜೆಗಳನ್ನು ಸೂಚಿಸಿ ವಿಕೃತ ಸಾಮುದಾಯಿಕ ಸಮಕಾಲೀನ ರಾಜಕೀಯ, ಆಡಳಿತಾತ್ಮಕ, ಬೋಧನಾತ್ಮಕ ಹಾಗೂ ಪ್ರಚೋದನಾತ್ಮಕ ವ್ಯವಸ್ಥೆಗಳ ಸ್ಥಿತ್ಯಂತರಗಳ ನಡುವೆ ಮೂರ್ತಗೊಂಡ ಅನೇಕ ಸಂಗತಿ-ವಿಸಂಗತಿಗಳಿಂದ ನಾಟಕ ಗಮನ ಸೆಳೆಯಿತು.

"ಪ್ರಜಾಪ್ರಭುತ್ವ” ವ್ಯವಸ್ಥೆಯಲ್ಲಿ ಜಯಕಾರ ಕೂಗೋದು ದುರ್ಬಲ ಮನಸ್ಥಿತಿ, ಕೈಕಟ್ಟಿ ನಿಲ್ಲೋದು ಗುಲಾಮಗಿರಿ, ತಲೆ ಎತ್ತಿ ನಿಲ್ಲೋದು ಸ್ವಾಭಿಮಾನ" ಇದು ರಾಜ ಧರ್ಮ, ಗುರು ಪಾಂಡುರಂಗರಾಯ ರಿಂದ ಕಲಿತ ಸಿದ್ದಾಂತ ಎಂಬ ರಾಜು ಪಾತ್ರಧಾರಿಯ ಮಾತುಗಳು ಜಾಗೃತಿಯನ್ನು ಮೂಡಿಸಿದವರು. ಪ್ರಸ್ತುತ ರಾಜಕೀಯ ಸನ್ನಿವೇಶಗಳಲ್ಲಿನ ಏರಿಳಿತಗಳು ಮತ್ತು ಹೊಯ್ದಾಟ, ತೊಯ್ದಾಟಗಳ ಬಿಡುಬೀಸಿನ ವಿದ್ಯಾಮಾನ ಅಲ್ಲದೆ ಧರ್ಮಾಧರ್ಮಗಳ ತಾಕಲಾಟದ ಸೆಳೆತವು ಪ್ರೇಕ್ಷಕ ಗಣದಲ್ಲಿ ಅಗಣಿತ ಕುತೂಹಲದೊಂದಿಗೆ ನೆಮ್ಮದಿಯತ್ತಲಿನ ಆಸೆ, ಆಕಾಂಕ್ಷೆಗಳನ್ನು ಪ್ರಚುರಪಡಿಸಿತು. ಇಡೀ ನಾಟಕವನ್ನು ನಿರ್ದೇಶಕರು ಪ್ಲಾಶ್ ಬ್ಯಾಕ್ ತಂತ್ರ ವಿಧಾನದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅಂತೆಯೇ ಪ್ರಯೋಗವು ಪ್ರಾರಂಭದಿಂದ ಕೊನೆಯವರೆಗೆ ಕುತೂಹಲ ಮೂಡಿಸುತ್ತದೆ.

ಗಮನ ಸೆಳೆದ ಪಾತ್ರಗಳು, ತಂತ್ರಜ್ಞರು

ಪಾತ್ರ ವರ್ಗದಲ್ಲಿ ರಾಜಕಾರಣಿಯಾಗಿ ಮಂತ್ರಿ ಮಾನೇಶಯ್ಯ (ಜಿ.ಸಂತೋಷ್) ಪರಿವರ್ತನೆ ಗೊಳ್ಳುವ ಜಿಲ್ಲಾಧಿಕಾರಿ (ಶಂಕರ ಭಟ್) ಆದರ್ಶ ಶಿಕ್ಷಕ ಪಾಂಡುರಂಗರಾವ್ (ಪುರುಶೋತ್ತಮ ಕಾಚೋಹಳ್ಳಿ) ರಾಜಕಾರಣಿ ಚೇಲಾಗಳಾಗಿ ಸಿಂಗಾರಿ(ಸದಾ ಬುದ್ಧಿ) ಬಂಗಾರಿ(ರಾಕೇಶ್) ಪ್ರಹ್ಲಾದ (ಮಾಸ್ಟರ್ ಯದುವೀರ್) ನರ್ಸ್ (ಲಲಿತಾ ಶ್ರೀಧರ್). ಪಾತ್ರಗಳ ಗುಣಧರ್ಮ ಅರಿತು ಅಭಿನಯಿಸಿದ್ದಾರೆ. ಗ್ರಾಮಸ್ಥರಾಗಿ ಮೂರ್ತಿ, ರತ್ನ, ಸುಮಿತ್ರಾ, ಮುರುಳಿ, ಜಾಹ್ನವಿ, ತಿಪ್ಪೇಸ್ವಾಮಿ ಗಮನ ಸೆಳೆಯುತ್ತಾರೆ.

ಬೆಳಕು ನಿರ್ವಹಣೆಯಲ್ಲಿ ಎಸ್.ಮಹದೇವಸ್ವಾಮಿ. ಪ್ರಸಾದನ ನ್ಯಾಷನಲ್ ದೇವು, ಕಲೆ ಶಿವ ನಾಯಕದೊರೆ, ರಂಗ ಪರಿಕರ ಕೇಶವ, ರಂಗ ನಿರ್ವಹಣೆ ಇತಿಹಾಸ ಶಂಕರ ಮಾಡಿದರು. ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಹೊಸ ನಾಟಕವು ರಚನೆಗೊಳ್ಳುತ್ತಿಲ್ಲ ಎಂಬ ಕೊರತೆಯನ್ನು ತುಸು ನೀಗಿಸಿದೆ ಎಂಬುದು ನಾಟಕ ನೋಡಿದವರ ಅಭಿಮತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net