

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಈ ಪ್ರಪಂಚವೇ ವರ್ಣಮಯ, ವಿಶಿಷ್ಟ. ಒಬ್ಬರಲ್ಲಿ ಇರುವ ಗುಣ, ಕಲೆ ಇನ್ನೊಬ್ಬರಲ್ಲಿ ಇರುವುದಿಲ್ಲ. ಎಲ್ಲವೂ ಭಗವಂತನ ಕೈಚಳಕ. ಭಗವಂತನ ಕೆಲ ಅಂಶವಾದರೂ ನಮ್ಮಲ್ಲಿ ಇರುತ್ತದೆ. ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆ ಇರುತ್ತದೆ. ಇಂತಹ ವೇದಿಕೆ ನಮ್ಮ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರ ತರಲು ಸಹಕಾರಿ. ಎಲ್ಲ ಸಂದರ್ಭದಲ್ಲಿ ಧನಾತ್ಮಕವಾಗಿರುವುದು ಮುಖ್ಯ ಎಂದು ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.
ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿ ವತಿಯಿಂದ ಭಾನುವಾರ ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ನಡೆದ ಉಚಿತ ಚಿತ್ರಕಲಾ ಕಾರ್ಯಾಗಾರ, ‘ನಮ್ ಕುಂದಾಪ್ರ, ಚಿತ್ರಕಲಾ ಪ್ರದರ್ಶನದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಯಾಗಿದ್ದ ವ್ಯಂಗ್ಯ ಚಿತ್ರಕಾರ ಕೆ.ಚಂದ್ರಶೇಖರ ಶೆಟ್ಟಿ ಶುಭ ಹಾರೈಸಿದರು. ಬೆಸ್ಟ್ ಆರ್ಟ್ ವರ್ಕ್ ಪ್ರಶಸ್ತಿಯನ್ನು ಕೃತಿ ಕೆ.ದೇವಾಡಿಗ, ಜನರ ಆಯ್ಕೆಯ ಉತ್ತಮ ಕಲಾಕೃತಿ ಪ್ರಶಸ್ತಿಯನ್ನು ನಿಶ್ಚಿತಾ ಪಡೆದುಕೊಂಡರು. ಇದರೊಂದಿಗೆ ಐವರಿಗೆ ಅದೃಷ್ಟಶಾಲಿ ಬಹುಮಾನ ನೀಡಲಾಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಜೆಸಿಐ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಮತ್ತಿತರರು ಉಪಸ್ಥಿತರಿದ್ದರು.
ತ್ರಿವರ್ಣ ಕಲಾ ಗ್ಯಾಲರಿಯ ಮಾರ್ದದರ್ಶಕ ಹರೀಶ್ ಸಾಗಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೃತಿ ಕೆ.ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ನಿರೀಕ್ಷಾ ಎಸ್.ದೇವಾಡಿಗ ವಂದಿಸಿದರು.