

ಹಳೆಯ ಜಾಡಿನಲ್ಲಿ ಸಾಗಿದ್ದ ಕರ್ನಾಟಕದ ರಾಜಕೀಯ ಮತ್ತು ಆಡಳಿತ ಎಪ್ಪತ್ತರ ದಶಕದಲ್ಲಿ ಒಂದು ಹೊಸ ಹಾದಿ ಕಂಡಿತು. ಅದು ರಾಜ್ಯದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಿತು. ಇಂಥದ್ದೊಂದು ಪರಿವರ್ತನೆಯ ಹರಿಕಾರರಾಗಿದ್ದವರು ಕರ್ನಾಟಕವನ್ನು 8 ವರ್ಷ ಮುಖ್ಯಮಂತ್ರಿಯಾಗಿ ಮುನ್ನಡೆಸಿದ ಡಿ.ದೇವರಾಜ ಅರಸು ಅವರು.
ಸಾಮಾಜಿಕ ನ್ಯಾಯದ ಹೋರಾಟಕ್ಕೆ ಕರ್ನಾಟಕದಲ್ಲಿ ದೀರ್ಘವಾದ ಪರಂಪರೆ ಇದೆ. ಅದು 12ನೇ ಶತಮಾನದಲ್ಲಿ ಬಸವಣ್ಣನವರಿಂದ ಪ್ರಾರಂಭಗೊಂಡಿತ್ತು. ಅದನ್ನು ನಂತರದ ದಿನಗಳಲ್ಲಿ ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂದುವರಿಸಿದರು. ಸ್ವತಂತ್ರ ಭಾರತದಲ್ಲಿ ಸಂವಿಧಾನದತ್ತ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಸಾಮಾಜಿಕ ನ್ಯಾಯದ ಬಂಡಿಯನ್ನು ಬಹುದೂರಕ್ಕೆ ಎಳೆದು ತಂದು ನಿಲ್ಲಿಸಿದವರು ನಿಸ್ಸಂಶಯವಾಗಿ ದೇವರಾಜ ಅರಸು.
ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದು ನನ್ನ ಹೃದಯಕ್ಕೆ ಸಮೀಪದ ಸಿದ್ಧಾಂತ. ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಚಲನಶೀಲತೆ ತಂದುಕೊಡುವುದು ಸುಲಭದ ಕೆಲಸ ಅಲ್ಲ. ಅಂದಿಗೂ ಇಂದಿಗೂ ಸಮಾಜದಲ್ಲಿ ಹಿಂದುಳಿದವರು, ದಲಿತರು, ಬಡವರು, ರೈತರು, ಕಾರ್ವಿುಕರು ಮೊದಲಾದ ದುರ್ಬಲ ವರ್ಗದವರೇ ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಇವರು ಬಾಯಿ ಬಲ ಇಲ್ಲದವರು. ಇವರು ತಮ್ಮ ವಿರುದ್ಧ ಇರುವ ವ್ಯವಸ್ಥೆಯನ್ನು ಸ್ವಯಂ ಬದಲಾವಣೆ ಮಾಡಲು ಸಾಧ್ಯವಿಲ್ಲದವರು. ತಮ್ಮ ಮೇಲಿನ ಶೋಷಣೆ, ದೌರ್ಜನ್ಯ, ಅನ್ಯಾಯಗಳ ವಿರುದ್ಧ ದನಿ ಎತ್ತುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಜಾತಿ ಮತ್ತು ವರ್ಗಗಳು ಸೃಷ್ಟಿಸಿದ ಸಾಮಾಜಿಕ ತಾರತಮ್ಯ ವ್ಯವಸ್ಥೆಪಟ್ಟಭದ್ರವಾಗಿ ಹೋಗಿದ್ದಾಗ ದುರ್ಬಲರ ಪರವಾಗಿ ನಿಲ್ಲುವುದು ಸುಲಭದ ಕೆಲಸ ಅಲ್ಲ. ನಿಜವಾದ ರಾಜಕೀಯ ನಾಯಕತ್ವ ಇಂತಹ ದುರ್ಬಲ ವರ್ಗಕ್ಕೆ ದನಿಯಾಗಬೇಕು. ದೇವರಾಜ ಅರಸು ಅವರು ಇತಿಹಾಸದ ಪುಟದಲ್ಲಿ ಅಜರಾಮರವಾಗಿರುವುದು ಈ ಕಾರಣಕ್ಕಾಗಿ.
ಸರ್ವರಿಗೂ ಸಮಪಾಲು ಸಿಗಬೇಕೆಂಬ ಚಿಂತನೆಯಲ್ಲಿ ನಂಬಿಕೆ ಇಟ್ಟಿದ್ದ ಅರಸು ಎಲ್ಲ ಜಾತಿಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯವೂ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಾತಿನಿಧ್ಯ ಸಿಗಬೇಕೆಂದು ಬಯಸಿದವರು. ಇದು ಎಲ್ಲ ಸಾಮಾಜಿಕ ಚಿಂತಕರು ಒಪ್ಪಿಕೊಂಡ ಅಭಿಪ್ರಾಯ ಕೂಡ ಆಗಿದೆ. ನಾನು ಈ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ.
ಅರಸು ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರು ಸಂಧಾನ ಮತ್ತು ಸಮನ್ವಯದ ದಾರಿ ಹಿಡಿದು ಸಾಗಿದ್ದರು. ಭೂಸುಧಾರಣೆ ಜಾರಿಗೆ ಬಂದಾಗ ರಾಜ್ಯದ ಕಂದಾಯ ಸಚಿವರಾಗಿದ್ದವರು ಹುಚ್ಚಮಾಸ್ತಿಗೌಡರು ಮತ್ತು ಭೂ ಸುಧಾರಣಾ ಸಚಿವರಾಗಿದ್ದವರು ಬಿ.ಸುಬ್ಬಯ್ಯ ಶೆಟ್ಟಿ. ಇವರಿಬ್ಬರೂ ಭೂಮಾಲೀಕ ಜಾತಿಗೆ ಸೇರಿದವರೆಂಬುದನ್ನು ಮರೆಯಬಾರದು. ಆದರೆ ತಮಗೊಪ್ಪಿಸಿದ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದ್ದ ಕಾರಣದಿಂದಾಗಿಯೇ ಭೂ ಸುಧಾರಣೆ ಯಶಸ್ವಿಯಾಗಿ ಜಾರಿಗೆ ಬರಲು ಸಾಧ್ಯವಾಯಿತು. ಇಂತಹ ಹಿರಿಯರನ್ನು ನೆನಪಿಸಿಕೊಂಡು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ.
ಪರಸ್ಪರ ಅರ್ಥಮಾಡಿಕೊಂಡ ಹೃದಯ ವೈಶಾಲ್ಯದ ಸಾಮರಸ್ಯದ ವಾತಾವರಣದಲ್ಲಿ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಇಂದಿಗೂ ಅಂತಹ ಉದಾರ ಮನಸ್ಸಿನ ಮತ್ತು ಪ್ರಜ್ಞಾವಂತ ಸಮುದಾಯ ನಮ್ಮ ನಡುವೆ ಇದೆ. ಅವರು ತಮ್ಮ ಪಾಡಿಗೆ ತಾವಿರದೆ ಸಾಮಾಜಿಕ ಬದಲಾವಣೆಯ ಸರ್ಕಾರದ ಕಾರ್ಯಕ್ರಮಗಳನ್ನು ಬಹಿರಂಗವಾಗಿ ಬೆಂಬಲಿಸಿದರೆ ಆ ದಾರಿಯಲ್ಲಿ ಇನ್ನಷ್ಟು ದೂರ ಮುನ್ನಡೆಯಲು ನಮಗೆ ಸಾಧ್ಯವಾಗುತ್ತದೆ.
ನಮ್ಮ ಮನಸ್ಸಿನಲ್ಲಿ ನೂರಾರು ಕನಸುಗಳಿರುತ್ತವೆ. ಆದರೆ ನಾವಿರುವ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲವನ್ನೂ ಅಂದುಕೊಂಡ ಹಾಗೆ ಮಾಡಲಾಗುವುದಿಲ್ಲ. ಇಂತಹ ಅಸಹಾಯಕತೆ ನನ್ನನ್ನೂ ಒಮ್ಮೊಮ್ಮೆ ಕಾಡುತ್ತದೆ. ಇಂತಹ ಆಲೋಚನೆಗಳು ಬಂದಾಗೆಲ್ಲ ನನಗೆ ದೇವರಾಜ ಅರಸು ನೆನಪಾಗುತ್ತಾರೆ. ಸಾಮಾಜಿಕ ಬದಲಾವಣೆಯ ಪ್ರಯತ್ನವೆಂದರೆ ಪ್ರವಾಹದ ಎದುರು ಈಜುವುದೇ ಆಗಿದೆ. ಈ ರೀತಿ ಬದಲಾವಣೆಯನ್ನು ತರಲು ಹೊರಟವರು ಬದುಕಿದ್ದಾಗ ಬಹಳ ಜನಪ್ರಿಯರಾಗಿರುವುದಿಲ್ಲ. ಅವರ ಸಾಧನೆಗಳನ್ನು ಗುರುತಿಸಿ ಬೆನ್ನುತಟ್ಟುವವರಿಗಿಂತಲೂ, ಟೀಕಿಸಿ ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ಅಂತಹವರ ಬಗ್ಗೆ ವರ್ತಮಾನ ಬಹಳ ಕ್ರೂರವಾಗಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಅವರಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿವರೆಗೂ ಇದು ಸತ್ಯ. ಇದು ದೇವರಾಜ ಅರಸು ಅವರ ವಿಷಯದಲ್ಲಿಯೂ ಸತ್ಯ.
ಹಲವಾರು ಸಂದರ್ಭಗಳಲ್ಲಿ ನನ್ನ ವಿರುದ್ಧ ಅನಗತ್ಯ ಟೀಕಾಪ್ರಹಾರಗಳು ನಡೆದಾಗ ದೇವರಾಜ ಅರಸು ಅವರು ಇದೇ ರೀತಿ ದೂಷಣೆ-ಭತ್ಸನೆಗೀಡಾಗಿ, ಸುಳ್ಳು ಆರೋಪಗಳಿಗೆ ಬಲಿಯಾಗಿ ನೊಂದುಕೊಂಡಿರುವುದನ್ನು ನೆನಪಿಸಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇನೆ. ರಾಗ-ದ್ವೇಷಗಳಿಂದ ಮುಕ್ತವಾದ ಇತಿಹಾಸ ಮಾತ್ರ ಎಲ್ಲವನ್ನೂ ನಿಷ್ಪಕ್ಷಪಾತವಾಗಿ ದಾಖಲಿಸುತ್ತದೆ. ಇಂದು ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಎಲ್ಲರೂ ಸ್ಮರಿಸುತ್ತಾರೆ. ಅದೇ ರೀತಿ ದೇವರಾಜ ಅರಸು ಅವರನ್ನು ಒಂದು ರೀತಿಯಲ್ಲಿ ಪಶ್ಚಾತ್ತಾಪದ ದನಿಯಲ್ಲಿ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.
ದೇವರಾಜ ಅರಸು ಕೇವಲ ರಾಜಕಾರಣಿಯಾಗಿರಲಿಲ್ಲ. ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿ ಕಾಣಲು ಅಸಾಧ್ಯ ಎಂಬುದನ್ನು ಅರಸು ಅಚಲವಾಗಿ ನಂಬಿದ್ದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯದಿಂದ ಸರ್ವರನ್ನೊಳಗೊಂಡ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಇದಕ್ಕಾಗಿಯೇ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ನಾಯಕರನ್ನು ಗುರುತಿಸಿ ಅವಕಾಶ ಕೊಟ್ಟು ರಾಜಕೀಯವಾಗಿ ಬೆಳೆಸಿದರು. ಪರಿಪೂರ್ಣವಾದ ಅಭಿವೃದ್ಧಿ ಎಂದರೆ ರಸ್ತೆ-ಸೇತುವೆಗಳು, ನೀರಾವರಿ ಯೋಜನೆಗಳು, ಉದ್ಯಮಗಳ ಜತೆ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದೂ ಆಗಿದೆ. ಇಂತಹದ್ದೊಂದು ಅಭಿವೃದ್ಧಿಯ ಮಾದರಿಯನ್ನು ಕರ್ನಾಟಕದಲ್ಲಿ ಮಾಡಿ ತೋರಿಸಿದವರು ದೇವರಾಜ ಅರಸು.
ಅಭಿವೃದ್ಧಿಯ ಹೊಸ ಮಾದರಿಯ ಭಾಗವಾಗಿಯೇ ಅರಸು ಅವರು ಭೂ ಸುಧಾರಣೆ ಕಾನೂನು, ಮೀಸಲಾತಿ ನೀತಿ, ಮಲಹೊರುವ ಪದ್ಧತಿ ನಿಷೇಧ, ಜೀತಪದ್ಧತಿಯ ನಿಮೂಲನೆ, ಋಣ ಪರಿಹಾರದಂತಹ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು. ಅರಸು ಅವರ ಅನೇಕ ಕಾರ್ಯಕ್ರಮಗಳನ್ನು ನಂತರದ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿರುವುದನ್ನು ಕಾಣಬಹುದು. ಉದಾಹರಣೆಗೆ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಉದ್ಯೋಗ ಭರವಸೆ ಯೋಜನೆ ಇಂದು ರಾಷ್ಟ್ರಮಟ್ಟದ ಯೋಜನೆಯಾಗಿದೆ.
ಇದೇ ರೀತಿ ಜನತಾ ಮನೆಗಳ ನಿರ್ವಣ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಸ್ಥಾಪನೆ, ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ವಿತರಣೆ, ನಿರುದ್ಯೋಗಿಗಳಿಗೆ ಸ್ಟೈಪೆಂಡರಿ, ಲಿಡ್ಕರ್ ಸಂಸ್ಥೆ ಸ್ಥಾಪನೆ, ಭಿಕ್ಷುಕರ ಪುನರ್ವಸತಿ ಕೇಂದ್ರ, ಅಂಗವಿಕಲರಿಗೆ ಮಾಸಾಶನ ಇತ್ಯಾದಿ ಯೋಜನೆಗಳನ್ನು ಅರಸು ಜಾರಿಗೆ ತಂದಿರುವುದನ್ನು ನೋಡಿದರೆ ಅವರಿಗಿದ್ದ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯ ಅರಿವಾಗುತ್ತದೆ.
ಬೆಂಗಳೂರು ನಗರ ಇಂದು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿದೆ. ಮೊದಲಿಗೆ ಇಂತಹದ್ದೊಂದು ಕನಸು ಕಂಡವರು ದೇವರಾಜ ಅರಸು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿರ್ವಣಗೊಂಡಿರುವುದು ದೇವರಾಜ ಅರಸು ಅವರ ಕಾಲದಲ್ಲಿ ಎನ್ನುವುದು ಇಂದಿನ ಪೀಳಿಗೆಯ ಬಹಳ ಮಂದಿಗೆ ತಿಳಿದಿಲ್ಲ. ಈ ರೀತಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಸಾಧಿಸಿದ್ದು ದೇವರಾಜ ಅರಸು ಅವರ ಹಿರಿಮೆಯಾಗಿದೆ.
ಕೊನೆಯ ದಿನಗಳಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ನಿಂದ, ಅವರ ನೆಚ್ಚಿನ ನಾಯಕಿಯಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಂದ ಅವರು ದೂರವಾದರೂ ಅರಸು ಆಡಳಿತದಲ್ಲಿ ಗುಪ್ತಗಾಮಿನಿಯಾಗಿದ್ದದ್ದು ಕಾಂಗ್ರೆಸ್ ಆಶಯಗಳೇ ಎಂಬುದನ್ನು ಮರೆಯಬಾರದು. ಇಂದಿರಾ ಗಾಂಧಿಯವರ ‘ಗರೀಬಿ ಹಟಾವೋ’ ಕರೆಯನ್ನು ಬಹುಬೇಗ ಅರ್ಥಮಾಡಿಕೊಂಡು ಆ ಘೊಷಣೆಗೆ ಸಾಧನೆಯ ರೂಪ ನೀಡಿದವರು ಅರಸು. ಬಹುಶಃ ದೇವರಾಜ ಅರಸು ಅವರಂತೆಯೇ ಆ ಕಾಲದ ಕಾಂಗ್ರೆಸ್ ಮುಖ್ಯಮಂತ್ರಿಗಳೆಲ್ಲರೂ ನಡೆದುಕೊಂಡಿದ್ದರೆ ಭಾರತದ ಚಿತ್ರಣವೇ ಬದಲಾಗಿಬಿಡುತ್ತಿತ್ತು. ದೇವರಾಜ ಅರಸು ಕಾಲದಲ್ಲಿ ಪರಿವರ್ತನೆಗೆ ಒಳಗಾಗಿದ್ದು ಕೇವಲ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲ. ಸಾಂಸ್ಕೃತಿಕ ಕ್ಷೇತ್ರವನ್ನು ಮುರಿದು ಕಟ್ಟುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದೂ ಅರಸು ಕಾಲದಲ್ಲಿ. ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲ ಬಗೆಯ ಅನುಭವಲೋಕಗಳ ದನಿಗಳು ಕೇಳಿಬಂದದ್ದು ಅವರ ಕಾಲದಲ್ಲಿ. ಸಾಂಸ್ಕೃತಿಕವಾಗಿ ಅಲಕ್ಷ್ಯಕ್ಕೀಡಾಗಿದ್ದ ತಳಸಮುದಾಯ ತನ್ನ ಅನುಭವಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ದಾಖಲಿಸಲು ಮುಂದಾಗಿದ್ದು ಇದೇ ಕಾಲದಲ್ಲಿ. ಈ ಬದಲಾವಣೆಯೇ ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯ ಪಂಥವಾಗಿ ಬೆಳೆಯಿತು. ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಜಾತಿ, ಧರ್ಮ ಮತ್ತು ವರ್ಗಗಳಿಗೆ ಸೇರಿದವರು ಬರವಣಿಗೆಯಲ್ಲಿ ತೊಡಗಿಸಿಕೊಂಡರು.
‘ಮಾತು ಬಾರದ ಜನರಿಗೆ ಮಾತು ಕೊಟ್ಟಿದ್ದೇನೆ, ಅವರು ನಿದ್ರೆಯಿಂದ ಎಚ್ಚೆತ್ತಿದ್ದಾರೆ. ಈಗ ಅವರನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಅಧಿಕಾರ ಹೋಗಬಹುದು, ಸಾಯಲೂಬಹುದು. ನನ್ನ ಕೆಲಸ ನೆಮ್ಮದಿ ನೀಡಿದೆ, ತೃಪ್ತಿ ಕೊಟ್ಟಿದೆ’ ಎಂದು ದೇವರಾಜ ಅರಸು ಅವರು ಕೊನೆಯ ದಿನಗಳಲ್ಲಿ ತಮ್ಮ ಬಂಧು ಚದುರಂಗರ ಜತೆ ಹೇಳಿದ್ದರಂತೆ. ಹಾಗೆಂದು ಚದುರಂಗ ಅವರೇ ಬರೆದುಕೊಂಡಿದ್ದಾರೆ. ದನಿ ಇಲ್ಲದವರಿಗೆ ದನಿಕೊಟ್ಟವರನ್ನು, ನಿದ್ರೆಯಿಂದ ಎಬ್ಬಿಸಿದವರನ್ನು ಜನ ಮರೆಯಬಾರದು. ಇತಿಹಾಸದ ಈ ಪಾಠವನ್ನು ಮರೆತರೆ ಭವಿಷ್ಯದ ದಾರಿ ಮುಂದಕ್ಕೆ ಕ್ರಮಿಸಲಾಗದಷ್ಟು ದುರ್ಗಮವಾಗುತ್ತದೆ.