ಉಕ್ಕಿ ಹರಿದ ಹಳ್ಳ, ಕೋಡಿಬಿದ್ದ ಎರೇಶೀಗಮ್ಮದೇವಿ ಕೆರೆ

RONA RAIN
ರೋಣ ತಾಲ್ಲೂಕಿನ ಸವಡಿ ಗ್ರಾಮ ಮತ್ತು ಎರೇಶೀಗಮ್ಮದೇವಿ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಮಳೆ ಸುರಿಯಿತು.
Published on

ರೋಣ: ತಾಲ್ಲೂಕಿನ ಸವಡಿ ಗ್ರಾಮ ಮತ್ತು ಎರೇಶೀಗಮ್ಮದೇವಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಎರಡು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದಿದೆ. ಮಳೆಯ ಅಬ್ಬರದಿಂದ ಅಬ್ಬಿಗೇರಿಯ ಕಂಠಿ ಬಸವೇಶ್ವರ ಹಳ್ಳವು ತುಂಬಿ ಹರಿದಿದೆ. ಎರೇಶೀಗಮ್ಮ ದೇವಿಯ ದೊಡ್ಡ ಕೆರೆಯು ಕೋಡಿಬಿದ್ದಿದೆ. ನೀರಿನ ರಭಸಕ್ಕೆ ಹೊಲದಲ್ಲಿ ನಿರ್ಮಾಣ ಮಾಡಲಾಗಿದ್ದ ಒಡ್ಡುಗಳು ಒಡೆದಿವೆ. ಅಮವಾಸ್ಯೆಗಾಗಿ ದೇವಿ ದರ್ಶನಕ್ಕೆ ಬಂದಿದ್ದ ಜನರು ಮರಳಿ ಊರಿಗೆ ಹೋಗಲು ಪರದಾಡಿದರು.

ಮುಂಗಾರು ಮಳೆ ಕೈಕೊಟ್ಟ ಕಾರಣ ಚಿಂತೆಯಲ್ಲಿದ್ದ ರೈತರ ಮುಖದಲ್ಲಿ ಅಮಾವಾಸ್ಯೆ ಮಳೆ ಮಂದಹಾಸ ಮೂಡಿಸಿದೆ. ಅನೇಕ ರೈತರು ಹೆಸರು ಬೆತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದರು. ಉಳಿದ ರೈತರು ಮಳೆ ಬರಲಿ ಎಂದು ಬಿತ್ತನೆ ಸ್ಥಗಿತಗೊಳಿಸಿದ್ದರು. ಆದರೆ ಭಾನುವಾರದ ಮಳೆ ಮತ್ತೆ ಕೃಷಿ ಚಟುವಟಿಕೆಯತ್ತ ಮುಖ ಮಾಡುವಂತೆ ಮಾಡಿದೆ ಎಂದು ಸವಡಿ ಗ್ರಾಮದ ರೈತ ಶ್ರೀಶೈಲ ಇಟಗಿ ಹೇಳಿದರು.

ತಾಲೂಕಿನ ರೋಣ, ಸವಡಿ, ಅಬ್ಬಿಗೇರಿ, ಕೊತಬಾಳ, ಮುಗಳಿ, ತಳ್ಳಿಹಾಳ, ಸವಡಿ, ಚಿಕ್ಕ ಮಣ್ಣೂರ, ಹಿರೇಮಣ್ಣೂರ ಸೇರಿ ವಿವಿಧ ಗ್ರಾಮಗಳಲ್ಲಿ ಕೆಲಕಾಲ ಸಾಧಾರಣ ಮಳೆ ಸುರಿದಿದೆ. ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಬೆಳೆಗಳೆಲ್ಲವೂ ಮಳೆ ಸುರಿಯದೆ ಬಾಡುತ್ತಿದ್ದವು. ರೈತರು ಕೈಚೆಲ್ಲಿ ಕುಳಿತಿದ್ದರು. ನಿರೀಕ್ಷೆಯಂತೆ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಳೆಗಳು ನಲಿದಾಡುವಂತಾಗಿದೆ. ರೈತರು ನಿಟ್ಟುಸಿರು ಬಿಡುವಂತಾಗಿದೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಹೆಸರು 37,750 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 7,507 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲೂಕಿನಾದ್ಯಂತ ಬಿತ್ತನೆಯಲ್ಲಿ ತೊಡಗಿರುವ ರೈತರು ಈಗ ಖುಷಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net