ಗಡಿ ಘರ್ಷಣೆ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಕಲಾಪ ವ್ಯರ್ಥ; ರಾಜ್ಯಸಭೆಯಲ್ಲಿ ಸಭಾತ್ಯಾಗ ಮುಂದುವರಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲ

87521
Published on

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಬಳಿ ಚೀನಾ ಸೈನಿಕರ ಜೊತೆಗಿನ ಘರ್ಷಣೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟುಹಿಡಿದಿರುವುದರಿಂದ ಗುರುವಾರ ಸಂಸತ್ ಕಲಾಪದ ಬಹುಪಾಲು ಸಮಯ ವ್ಯರ್ಥವಾಯಿತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಭಾತ್ಯಾಗ ಮುಂದುವರಿದರೆ, ಲೋಕಸಭೆಯಲ್ಲಿ ಗದ್ದಲದ ಕಾರಣ ಕಲಾಪವನ್ನು ಐದು ಬಾರಿ ಮುಂದೂಡಬೇಕಾಯಿತು.

ರಾಜ್ಯಸಭೆ ಸಮಾವೇಶ ಗೊಳ್ಳುತ್ತಿದಂತೆ ಗಡಿ ಘರ್ಷಣೆ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಒಕ್ಕೊರಲಿಂದ ಒತ್ತಾಯಿಸಿದವು. ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರ ನಡೆಯಿತು. ಆಗ ಸಭಾಧ್ಯಕ್ಷ ಉಪರಾಷ್ಟ್ರಪತಿ ಜಗದೀಪ್ ಧನಕರ್, ಸಮಾಧಾನ ಪಡಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸುವಂತೆ ಸಲ್ಲಿಕೆಯಾದ 12 ಮನವಿಯನ್ನು ಸಭಾಧ್ಯಕ್ಷರು ತಿರಸ್ಕರಿಸಿದ್ದಾರೆಂದು ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತ ಸದನದಿಂದ ಹೊರನಡೆದರು. ನಂತರ ಪ್ರಶ್ನೋತ್ತರ ಅವಧಿಯ ವೇಳೆಗೆ ಆಪ್, ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ಮಾತ್ರ ಹಾಜರಾದರು.

ಸಂಸತ್​ಗೆ ಸರ್ಕಾರದ ಉತ್ತರ

  • 2021ರಲ್ಲಿ 4.12 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆ. 2020ರಲ್ಲಿ ಈ ಸಂಖ್ಯೆ 3.66 ಲಕ್ಷ ಇತ್ತು. ರಸ್ತೆ ಸುರಕ್ಷತೆ ಹೆಚ್ಚಿಸಲು ಹೊಸ ವಿಧಾನಗಳ ಅಳವಡಿಕೆ ಸಹಿತ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
  • ಪಿಎಫ್​ಒ ಕಾರ್ವಿುಕರ ಪಿಂಚಣಿ ಯೋಜನೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಪರಿಶೀಲಿಸಲಾಗುತ್ತಿದೆ. ಅಧಿಕ ಪಿಂಚಣಿ ಯೋಜನೆ ಅಳವಡಿಸಿಕೊಳ್ಳುವ ಆಯ್ಕೆಯನ್ನು ನೀಡಬೇಕು. ನಾಲ್ಕು ತಿಂಗಳಲ್ಲಿ ಈ ಕುರಿತ ಅಗತ್ಯ ತಿದ್ದುಪಡಿ ತರಬೇಕು ಎಂದು ಸುಪ್ರೀಂಕೋರ್ಟ್ ನ. 4ರಂದು ಸೂಚಿಸಿದೆ.

ಜನ ವಿಶ್ವಾಸ ತಿದ್ದುಪಡಿ ಮಂಡನೆ

ಸಣ್ಣಪುಟ್ಟ ಉಲ್ಲಂಘನೆಯನ್ನು ಕ್ರಿಮಿನಲ್ ಸ್ವರೂಪದ ಪ್ರಕರಣದಿಂದ ಕೈಬಿಡುವ ಪ್ರಸ್ತಾವನೆ ಒಳಗೊಂಡ ಜನ ವಿಶ್ವಾಸ ತಿದ್ದುಪಡಿ ಮಸೂದೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಂಡಿಸಿದರು. ಇದರಿಂದ ವ್ಯಾಪಾರ-ವಹಿವಾಟು ಸುಗಮಗೊಳ್ಳಲಿದೆ ಜತೆಗೆ ಅಪರಾಧಕ್ಕೆ ವಿಧಿಸುವ ದಂಡವನ್ನು ತರ್ಕಬದ್ಧಗೊಳಿಸುವಿಕೆ ಅಂಶವನ್ನು ಈ ಮಸೂದೆ ಒಳಗೊಂಡಿದೆ ಎಂದರು. ಈ ಮಸೂದೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು.

ವಿರೋಧ ಪಕ್ಷಗಳ ವಿರುದ್ಧ ಜೋಶಿ ಕಿಡಿ

ಗಡಿ ಘರ್ಷಣೆ ಕುರಿತಂತೆ ಚರ್ಚೆಗೆ ಆಗ್ರಹಿಸಿ ಚಳಿಗಾಲದ ಅಧಿವೇಶನವನ್ನು ವಿರೋಧ ಪಕ್ಷಗಳು ಹಾಳು ಮಾಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ಸಂಸತ್ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಚೀನಾಕ್ಕೆ ದೇಶದ ಭೂಮಿಯನ್ನು ಬಳುವಳಿಯಾಗಿ ನೀಡಿದ ಪಕ್ಷದವರು ಈಗ ರಾಜ್ಯಸಭಾ ಅಧ್ಯಕ್ಷರಿಗೆ ಅಸಹಕಾರ ತೋರುತ್ತಿದ್ದಾರೆ. ಬಿಕ್ಕಟ್ಟನ್ನು ಪರಿಹರಿಸಲು ಉಪರಾಷ್ಟ್ರಪತಿ ಧನಕರ್ ಅವರು ತಮ್ಮ ಕಚೇರಿಗೆ ಬರುವಂತೆ ಕೈಮುಗಿದು ಕರೆದರೂ ವಿರೋಧ ಪಕ್ಷಗಳ ನಾಯಕರು ಬರುವುದಿಲ್ಲೆಂದು ಮೊಂಡು ಹಟ ಹಿಡಿದಿದ್ದಾರೆ. ಇದು ವಿರೋಧ ಪಕ್ಷಗಳ ಧೋರಣೆ ಎಂದು ಟೀಕಿಸಿದರು.

  • ರಾಜಕೀಯ ಪಕ್ಷಗಳು ಅನಾಮಧೇಯ ಮೂಲಗಳಿಂದ ಸ್ವೀಕರಿಸುವ ನಗದು ದೇಣಿಗೆಯನ್ನು 20 ಸಾವಿರ ರೂ.ನಿಂದ ಎರಡು ಸಾವಿರ ರೂ.ಗೆ ತಗ್ಗಿಸುವ ಪ್ರಸ್ತಾಪವು ಪರಿಶೀಲನೆಯಲ್ಲಿ ಇದೆ.
  • ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ. ವಸ್ತುನಿಷ್ಠತೆ ಮತ್ತು ಸಾಮಾಜಿಕ ವೈವಿಧ್ಯ ಇಲ್ಲವಾಗಿದೆ. ಹೀಗಾಗಿ ಅದನ್ನು ಬದಲಿಸಲು ಸರ್ಕಾರ ಬಯಸಿದೆ ಎಂದು ಸಚಿವ ಕಿರಣ್ ರಿಜಿಜು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net