ಬಾಳಿಗೆ ಪ್ರೇರಣೆಯಾಗುವ ಹಿರಿಯರ ಸ್ಮರಣೆ

Dharma Darshana
Published on

ಯಾವುದೇ ವಿಷಯ ಇರಲಿ ಕೆಟ್ಟದಾಗಿ ಬಿಂಬಿಸಲು ಯಾರಿಗೂ ಬಹಳಷ್ಟು ಕಷ್ಟವಾಗಲಾರದು. ಒಳ್ಳೆಯದನ್ನು ಗುಣಗ್ರಾಹ್ಯ ಮಾಡಿಕೊಂಡು ಹೇಳಬೇಕಾದರೆ ಕೆಲವೇ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಒಳ್ಳೆಯದನ್ನು ಗುರುತಿಸುವ, ಅದನ್ನು ಗಟ್ಟಿದನಿಯಲ್ಲಿ ಹೇಳುವ ವ್ಯಕ್ತಿತ್ವ ಬೆಳೆಯಬೇಕು. ಆಗಲೇ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಲು ಸಾಧ್ಯ.

ನಮ್ಮ ಬದುಕಿನಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ, ಪರಂಪರೆ, ಪದ್ಧತಿ, ರೀತಿ- ನೀತಿಗಳನ್ನು ಆಚರಿಸುತ್ತೇವೆ. ಪ್ರತಿಯೊಂದು ಕೂಡ ತನ್ನದೇ ಆದ ಹಿನ್ನೆಲೆ ಹಾಗೂ ಮಹತ್ವವನ್ನು ಹೊಂದಿವೆ. ನಮ್ಮ ಪೂರ್ವಜರನ್ನು, ಹಿರಿಯರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸುವಂಥ, ನಮ್ಮನ್ನು ಅಗಲಿದ ಅವರಿಗೆ ಗೌರವ ಸಲ್ಲಿಸುವಂಥ ಆಚರಣೆಗಳು ನಮ್ಮಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಇರು ವುದು ನಮಗೆಲ್ಲ ತಿಳಿದಿರುವಂಥದ್ದು. ನಾವು ಕೂಡ ಮಹಾಲಯ ಆಚರಣೆ ಸಮಯದಲ್ಲಿ, ಇನ್ನು ಕೆಲವರು ದೀಪಾವಳಿಯ ಪಾಡ್ಯ ದಿನ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಅವರನ್ನು ಸ್ಮರಿಸಿಕೊಳ್ಳುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಮ್ಮನ್ನಗಲಿದ ಹಿರಿಯರಿಂದ ಪಡೆದ ಬಳುವಳಿಯೆಂದರೆ ಅವರನ್ನು ಮಾತ್ರವಲ್ಲದೆ ಅವರು ತೋರಿದ ಮಾರ್ಗದರ್ಶನ, ಅವರ ಯೋಚನೆಗಳು, ಚಿಂತನೆಗಳು ಮಾರ್ಗದರ್ಶನಗಳನ್ನೆಲ್ಲ ಸ್ಮರಿಸಿಕೊಳ್ಳಬೇಕಾದ ಅಗತ್ಯವೂ ಇದೆ.

ನಮ್ಮ ತಂದೆಯವರಾದ ಪೂಜ್ಯ ರತ್ನವರ್ಮ ಹೆಗ್ಗಡೆಯವರನ್ನು ಇತ್ತೀಚೆಗೆ ಸ್ಮರಿಸಿಕೊಂಡೆವು. ಅವರು ನಿಧನರಾದ ದಿನದಂದು ಕ್ಷೇತ್ರದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆಯನ್ನು ಮಾಡುತ್ತೇವೆ. ಈ ವೇಳೆ ಅವರ ಅನೇಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದೆನಿಸಿತು.

ಮೊದಲನೆಯದಾಗಿ ಅವರು ಯಾವಾಗಲೂ ಹೇಳುತ್ತಿದ್ದ ಮಾತೆಂದರೆ, ‘ಧರ್ಮಸ್ಥಳಕ್ಕೆ ನಿತ್ಯವೂ ಭಕ್ತಜನರು ಬರುತ್ತಿರುತ್ತಾರೆ. ಶ್ರೀಸ್ವಾಮಿಯ ದರ್ಶನ ಮಾಡುವುದರ ಜೊತೆಗೆ ಬೀಡಿಗೆ ಬಂದು ಭೇಟಿಯಾಗುತ್ತಾರೆ. ಬರುವವರಲ್ಲಿ ಅನೇಕ ರೀತಿಯ ಹಿನ್ನೆಲೆಗಳನ್ನು ಹೊಂದಿದವರು ಇರುತ್ತಾರೆ. ಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಆರ್ತ, ಅರ್ಥಾರ್ಥಿ, ಜಿಜ್ಞಾಸು ಮತ್ತು ಜ್ಞಾನಿ ಎಂಬ ನಾಲ್ಕು ತರಹದವರು ಇರುತ್ತಾರೆ. ಆರ್ತನು ಸಂಕಟವನ್ನು ಹೊಂದಿ ಪರಿಹಾರಕ್ಕಾಗಿ ಬರುವವನು. ಅರ್ಥಾರ್ಥಿಯು ಸಂಪತ್ತು ಹಾಗೂ ಇತರ ಲೌಕಿಕ ಭೋಗಭಾಗ್ಯಗಳನ್ನು ಪಡೆಯಲು ಇಚ್ಛಿಸುವವನು. ಜಿಜ್ಞಾಸು ತಾನು ತಿಳಿದುಕೊಂಡದ್ದು ಅಥವಾ ಪಡೆದುಕೊಂಡದ್ದು ಸಾಲದು, ಇನ್ನಷ್ಟು ತಿಳಿಯಬೇಕೆಂಬ ಉತ್ಸಾಹವುಳ್ಳವನು, ಜ್ಞಾನಿಯು ಆಸೆಗಳಿಂದ ಮುಕ್ತನಾಗಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಭಕ್ತಿಯಿಂದ ವಿಚಾರವಂತನಾಗಿರುವವನು. ಯಾರೇ ಬಂದರೂ ಅವರನ್ನು ತಿರಸ್ಕರಿಸದಿರು’ ಎಂಬುದು ಅವರ ಮಾತು.

ಅವರ ಸಮಸ್ಯೆಗಳಿಗೆ ನಮ್ಮಲ್ಲಿ ಸ್ಪಂದಿಸುವ ಗುಣವಿದ್ದಲ್ಲಿ, ಆರ್ಥಿಕವಾಗಿ ಸ್ಪಂದಿಸುವ ಶಕ್ತಿ ಇದ್ದಲ್ಲಿ ಅವರು ಕೇಳಿಕೊಂಡು ಸಹಾಯ ಪಡೆದುಕೊಳ್ಳಲು ಬರುತ್ತಾರೆ. ಧಾರ್ವಿುಕ ವಿಚಾರ, ಶ್ರದ್ಧೆ, ಸಾಮಾಜಿಕ ಸ್ಪಂದನೆ, ಜ್ಞಾನ ಹೀಗೆ ಒಂದಲ್ಲ ಒಂದು ವಿಷಯಕ್ಕಾಗಿ ಕ್ಷೇತ್ರಕ್ಕೆ ಬರುತ್ತಾರೆ. ಆದರೆ ಬರುವವರೆಲ್ಲ ಸ್ವಾರ್ಥಕ್ಕಾಗಿ ಬರುತ್ತಾರೆ ಎಂಬ ಭಾವನೆಯನ್ನು ಖಂಡಿತ ಹೊಂದಿರಬಾರದು. ಯಾಕೆಂದರೆ ಬೆಲ್ಲ ಇದ್ದ ಕಡೆ ಮಾತ್ರ ಇರುವೆ ಹುಡುಕಿಕೊಂಡು ಬರುವಂತೆ, ಇನ್ನೊಬ್ಬರಿಗೆ ಸಹಾಯ, ನೆರವನ್ನು ಮಾಡಲು ಶಕ್ತಿ ಹಾಗೂ ಯೋಗ್ಯತೆ ಇದ್ದಲ್ಲಿ ಮಾತ್ರ ಸಹಾಯ ಮಾಡಬಹುದು. ಹಾಗೆಯೇ ದೈವಿಚ್ಛೆಯಂತೆ ಒಬ್ಬರು ಇನ್ನೊಬ್ಬರನ್ನು ಸಂಧಿಸುತ್ತಾರೆ ಎಂಬುದು ಅವರು ನೀಡಿದ ದೊಡ್ಡ ಸಂದೇಶ.

ಹಾಗೆಯೇ ಒಳ್ಳೆಯ ವ್ಯಕ್ತಿಯಾಗಬೇಕಾದರೆ ಬಹಳ ಕಷ್ಟ ಇದೆ. ಕೆಟ್ಟವನಾಗಬೇಕಾದರೆ ಕ್ಷಣಾರ್ಧಲ್ಲಿ ಆಗಬಹುದು. ಮಾತನಾಡುವಾಗಲೂ ಅಷ್ಟೇ, ಒಳ್ಳೆಯ ಮಾತನ್ನು ಹೇಳಬೇಕಾದರೆ ಬಹಳ ಕಷ್ಟ ಇದೆ. ಕೆಟ್ಟ ಮಾತನ್ನು ಬಹಳ ಸುಲಭವಾಗಿ ಹೇಳಬಹುದು. ಉದಾಹರಣೆಗೆ ಯಾರಾದರೂ ಇನ್ನೊಬ್ಬರನ್ನು ಕೆಟ್ಟ ಶಬ್ದ ಬಳಸಿ ನಿಂದನೆ ಮಾಡಬೇಕಾದರೆ ಸರಾಗವಾಗಿ ಪದಗಳು ಸಿಗುತ್ತವೆ. ಆದರೆ, ಒಳ್ಳೆಯ ವಿಚಾರಗಳನ್ನು ಹೇಳಲಾಗದೆ ಪದಗಳಿಗಾಗಿ ತಡಕಾಡಬೇಕಾಗುತ್ತದೆ.

60-70 ವರ್ಷಗಳ ಹಿಂದೆಯೇ ಶ್ರೀಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಮಯದಲ್ಲಿ ನಡೆಯುತ್ತಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಗೌರವಾನ್ವಿತರಿಗೆ ಸನ್ಮಾನ ಪತ್ರ ಕೊಡುವಂಥ ಪರಿಪಾಠವಿತ್ತು. ಈಗಲೂ ನಾವದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೆವೆ. ಇತ್ತೀಚೆಗೆ ಮಾನಪತ್ರ ಅಥವಾ ಗೌರವ ಸನ್ಮಾನ ಪತ್ರದಲ್ಲಿ ಸಂಕ್ಷಿಪ್ತವಾಗಿ ಗೌರವಸೂಚಕ ಪದಗಳನ್ನು ಬಳಸಿಕೊಂಡು ವ್ಯಕ್ತಿಯ ಸಾಧನೆಯನ್ನು ತಿಳಿಸಲಾಗುತ್ತದೆ. ನಾವು ಕೂಡ ಅನೇಕ ಕಡೆಗಳಲ್ಲಿ ಗೌರವಕ್ಕೆ ಪಾತ್ರರಾದಾಗ ಮಾನ್ಯರೇ, ವಿದ್ವಾಂಸರೇ, ದಾನಿಗಳೇ, ಪೂಜ್ಯರೇ ಗೌರವವಾಚಕ ಪದಗಳನ್ನು ಬಳಸಿ ಗುಣಗಾನ ಮಾಡುತ್ತಾರೆ. ಹೀಗೆ ಗುಣವಾಚಕಗಳನ್ನು ಬಳಸಿ ಒಳ್ಳೆಯ ಪದಗಳನ್ನು ಬರೆದು ಅವರಿಗೆ ಗೌರವ ಕೊಡಲು ಎಲ್ಲರಿಗೂ ಆಗುವುದಿಲ್ಲ. ಆಗ ಸನ್ಮಾನ ಪತ್ರ ಬರೆಯಲು ಕೆ.ಎಸ್. ಧರಣೇಂದ್ರಯ್ಯ ಎಂಬ ಹಿರಿಯರಿದ್ದರು. ಅವರಿಗೆ ಅಪ್ಪಾಜಿಯವರು ಹೇಳುತ್ತಿದ್ದರು. ‘ಧರಣೇಂದ್ರಯ್ಯ, ಇಬ್ಬರು ಮುಖ್ಯ ಅತಿಥಿಗಳು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಅವರಿಗೆ ಮಾನ ಪತ್ರ ಬರೆದುಕೊಡಿ’, ಎಂದು. ಉಜಿರೆ ಕಾಲೇಜಿನಲ್ಲಿ ನಾಗರಾಜ ಪೂವಣಿ ಎಂಬುವರು ನೆರವಾಗುತ್ತಿದ್ದರು. ಯಾವುದೇ ಇರಲಿ ಕೆಟ್ಟದಾಗಿ ಬಿಂಬಿಸಲು ಯಾರಿಗೂ ಬಹಳಷ್ಟು ಕಷ್ಟವಾಗಲಾರದು. ಒಳ್ಳೆಯದನ್ನು ಗುಣಗ್ರಾಹ್ಯ ಮಾಡಿಕೊಂಡು ಹೇಳ ಬೇಕಾದರೆ ಕೆಲವೇ ವ್ಯಕ್ತಿಗಳಿಂದ ಮಾತ್ರ ಸಾಧ್ಯ.

ಸುಮಾರು 60 ವರ್ಷಗಳ ಹಿಂದಿನ ಕಾಲ. ಆಗ ಧರ್ಮಸ್ಥಳದ ಸುತ್ತಮುತ್ತ ಬಹಳ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ಇತ್ತು. ಆಟಿ (ಆಷಾಢ) ತಿಂಗಳಲ್ಲಂತೂ ಜೀವನ ಮಾಡಲು ಕಷ್ಟವಿತ್ತು. ಅನೇಕರಿಗೆ ಒಂದು ಊಟ ಮಾಡಲೂ ಸಾಧ್ಯವಿರಲಿಲ್ಲ. ಕೆಲಸ ಮಾಡೋಣವೆಂದರೆ ಕೆಲಸ ಇಲ್ಲ, ವ್ಯಾಪಾರ, ವಹಿವಾಟಿಗೆ ಮಾರುಕಟ್ಟೆಗಳೂ ನಡೆಯುತ್ತಿರಲಿಲ್ಲ. ಆ ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮೂರು ತಿಂಗಳ ಕಾಲ ಯಾರೇ ಬಂದರೂ ಛತ್ರದಲ್ಲಿ ಊಟ ನೀಡುವಂತೆ ತಿಳಿಸಲಾಗಿತ್ತು.

ಆಗೊಮ್ಮೆ ತಂದೆಯವರು ಚಾವಡಿಯ ಒಳಗಡೆಯಿಂದ ಕಿಟಕಿಯಲ್ಲಿ ಹೊರಗಡೆ ನೋಡುತ್ತಿದ್ದಾಗ ವೃದ್ಧೆಯೊಬ್ಬಳು ತೋಟ, ಗದ್ದೆ ಬದಿಗಳಲ್ಲಿ ಬೆಳೆಯುವ ಕೆಸುವನ್ನು ಹೊತ್ತುಕೊಂಡು ಅನ್ನಛತ್ರದ ಕಡೆ ಸಾಗುವುದನ್ನು ಕಂಡರು. ಅದನ್ನು ವೃದ್ಧೆ ಯಾಕಾಗಿ ಹೊತ್ತುಕೊಂಡು ಬಂದಳು? ಏನು ವಿಷಯ ಎಂದು ವಿಚಾರಿಸಿದರು. ಆಗ ವೃದ್ಧೆಯು, ‘ಸ್ವಾಮೀ... ಅನ್ನಛತ್ರಕ್ಕೆ ಊಟಕ್ಕೆ ಬರುವಾಗ ಬರಿಗೈಲಿ ಬರಬಾರದು. ಏನಾದರೂ ತರಕಾರಿ ತೆಗೆದುಕೊಂಡು ಬನ್ನಿ ಎಂದು ಛತ್ರದ ಪಾರುಪತ್ಯಾಗಾರರು (ಮುಖ್ಯಸ್ಥರು) ತಿಳಿಸಿ ದ್ದಾರೆ. ಹಾಗಾಗಿ ಇದನ್ನು ತಂದಿದ್ದೇನೆ’ ಎಂದಾಗ ತಂದೆಯವರು ಬಹಳ ಸಿಡಿಮಿಡಿ ಗೊಂಡಿದ್ದರು. ‘ಅನ್ನ ಹಾಕುವಾಗ, ಪರೋಪಕಾರ ಮಾಡುವಾಗ ಪ್ರತಿಫಲಾ ಪೇಕ್ಷೆ ಇಲ್ಲದೆ ಮಾಡಬೇಕು. ಅಂಥದರಲ್ಲಿ ಅನ್ನದಾಸೋಹ ಮಾಡುವಾಗ ತರಕಾರಿ ತರಬೇಕೆಂದು ಕಡ್ಡಾಯ ಮಾಡುವುದು ತಪ್ಪು. ಅದನ್ನು ಕೂಡಲೇ ನಿಲ್ಲಿಸಿ ಬಿಡಿ’ ಎಂದು ಪಾರುಪತ್ಯಗಾರರಿಗೆ ಸೂಚಿಸಿದರು. ಹಾಗೆಯೇ ಅನೇಕ ಮಂದಿಗೆ ದಿನವೂ ಛತ್ರಕ್ಕೆ ಊಟಕ್ಕೆ ಹೋಗುವಾಗ ನಾವು ಸರಿಯಾದವಸ್ತುಗಳನ್ನು ಕೊಂಡುಹೋಗದಿದ್ದರೆ ನಮಗೆ ಊಟ ಹಾಕುತ್ತಾರೋ ಇಲ್ಲವೋ ಎಂದು ಸಂಕೋಚ ಇರುತ್ತಿತ್ತು ಮತ್ತು ಅರೆಮನಸ್ಕರಾಗಿ ಬರುತ್ತಿದ್ದರು. ಅದರ ಬದಲು ತಲೆಎತ್ತಿಕೊಂಡು ಬಂದು ಊಟ ಮಾಡುವಂಥ ವ್ಯವಸ್ಥೆಯನ್ನು ಅವರು ಕಲ್ಪಿಸಿದರು. ಅವರ ಪ್ರೇರಣೆಯಂತೆ ಅಂದಿನಿಂದ ಎಲ್ಲರಿಗೂ ಅನ್ನದಾಸೋಹದ ವ್ಯವಸ್ಥೆಯನ್ನು ಉತ್ತಮವಾಗಿ ಮಾಡುವ ಬಗ್ಗೆ ನಿಗಾ ವಹಿಸಲಾಯಿತು. ಜೊತೆಗೆ ಕ್ಷೇತ್ರಕ್ಕೆ ದಾನವಾಗಿ ಬರುವ ಅಕ್ಕಿ, ಫಲವಸ್ತುಗಳನ್ನು ಬಳಸಿಕೊಂಡು ಅನ್ನದಾಸೋಹವನ್ನು ನಡೆಸಿಕೊಂಡು ಬರಲು ಸಾಧ್ಯವಾಯಿತು.

ರತ್ನವರ್ಮ ಹೆಗ್ಗಡೆಯವರು ಕೌಟುಂಬಿಕ ಜೀವನಕ್ಕೆ ಮಹತ್ವ ಕೊಡುತ್ತಿದ್ದರು. ವರ್ಷಕ್ಕೊಮ್ಮೆ ಉತ್ತರ ಭಾರತದ ಕಡೆ, ಮುಂಬೈ, ಬಿಹಾರ ಮುಂತಾದ ಕಡೆಗಳಿಗೆಲ್ಲ ಕುಟುಂಬದೊಂದಿಗೆ ಯಾತ್ರೆ ಮಾಡುತ್ತಿದ್ದರು. ಆಗ ಎಲ್ಲರೂ ಒಟ್ಟಾಗಿ ಯಾತ್ರೆಗೆ ಹೋಗುತ್ತಿದ್ದೆವು. ‘ಬನ್ನಿ ಯಾತ್ರೆಗೆ ಹೋಗುವ’ ಎಂದು ದೂರದೂರದ ಬಂಧುಗಳನ್ನೂ ಕರೆಯುತ್ತಿದ್ದರು. ಯಾತ್ರೆ ಎಂದರೆ, ಅದು ಸಕುಟುಂಬ ಯಾತ್ರೆ. ಮುಂಬೈ ಯಾತ್ರೆಯ ಸಂದರ್ಭ ಅವರಿಗೆ ಅನಾರೋಗ್ಯದ ಲಕ್ಷಣಗಳು ಕಂಡು ಹಿಂದಿರುಗಬೇಕಾಯಿತು. ಅವರ ಯಾತ್ರೆಯ ಪರಿಪಾಠವನ್ನು ನಾನೂ ಮುಂದುವರಿಸಿದೆ. ಆದರೆ ಎಲ್ಲರನ್ನೂ ಒಟ್ಟು ಮಾಡಿಕೊಂಡು ಹೋಗುವುದು ಈಗಿನ ಬಿಜಿ ಬದುಕಿನಲ್ಲಿ ಕಷ್ಟಸಾಧ್ಯ ವಾದ್ದರಿಂದ ಸಾಧ್ಯವಾಗುವ ಕೆಲವರಷ್ಟೇ ಜೊತೆಯಾಗಿ ಹೋಗುತ್ತೇವೆ.

ಲಕ್ಷದೀಪೋತ್ಸವದ ಸಂದರ್ಭದಲ್ಲಿಯೂ ಅನೇಕ ಗೌರವಾನ್ವಿತ ವ್ಯಕ್ತಿಗಳನ್ನು ಗುರುತಿಸಿ, ‘ನೀವು ಬನ್ನಿ’ ಎಂದು ಆಮಂತ್ರಿಸುತ್ತಿದ್ದರು. ಆಗಿನ ಕಾಲದಲ್ಲಿ ಪ್ರಯಾಣ ಬಹಳ ಕಷ್ಟ. ಬಸ್ಸುಗಳು ಕಡಿಮೆ. ವಾಹನಗಳೂ ಕಡಿಮೆ. ಆದರೆ ಹತ್ತಿರದ ಸಂಬಂಧಿಕರಿಗೆ ಕ್ಷೇತ್ರದಿಂದ ವಾಹನಗಳನ್ನು ಕಳುಹಿಸಿ ‘ನೀವು ಬನ್ನಿ’ ಎಂದು ಆಮಂತ್ರಿಸುತ್ತಿದ್ದರು. ಆಗೆಲ್ಲ ಅವರಿಗೆ ವಸತಿ-ಊಟೋಪಚಾರದ ವ್ಯವಸ್ಥೆಯನ್ನು ಸಿದ್ಧವನ ಗುರುಕುಲದಲ್ಲಿ ಕಲ್ಪಿಸಲಾಗುತ್ತಿತ್ತು.

ವಿದ್ಯೆಗೆ ಅವರು ಪ್ರಾಶಸ್ತ್ಯ ಕೊಡುತ್ತಿದ್ದರು. ‘ವಿದ್ಯಾಹೀನಂ ಪಶು ಸಮಾನಂ’. ಹಾಗಾಗಿ ನನ್ನ ತಾಯಿಯ ಸಹೋದರ ಡಾ. ನಾಗಕುಮಾರ್ ಶೆಟ್ಟಿಯವರು ವೈದ್ಯಕೀಯ ಡಿಗ್ರಿ ಪಡೆದಾಗ ನಮ್ಮ ಕುಟುಂಬದಲ್ಲಿ ಒಬ್ಬ ವೈದ್ಯನಾಗುತ್ತಿದ್ದಾನೆ ಎಂದು ತುಂಬ ಸಂತೋಷಪಟ್ಟರು. ಅವರು ಮನೆಗೆ ಬಂದಾಗ ಕೈಯಲ್ಲಿದ್ದ ವಾಚನ್ನೂ ಮತ್ತು ಅನೇಕ ಉಡುಗೊರೆಯನ್ನು ಕೊಟ್ಟರು. ಹಾಗೆಯೇ ವೈದ್ಯರಾಗಿ ಅವರು ವಿದೇಶಕ್ಕೆ ಹೊರಟಾಗ ಅವರಿಗೆ ತುಂಬ ಖುಷಿಯಾಗಿತ್ತು, 1945ರಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲವನ್ನು ಪೂಜ್ಯ ಮಂಜಯ್ಯ ಹೆಗ್ಗಡೆಯವರು ಸಂಸ್ಥಾಪಿಸಿದರು. ಆಗ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಇತ್ತು. ಮುಂದೆ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸಬೇಕು ಎಂದು ತಂದೆಯವರಿಗೆ ಆಸೆಯಾಗಿ, ನಮ್ಮ ಹಳ್ಳಿಯಲ್ಲಿ ಕಾಲೇಜು ಶಿಕ್ಷಣ ಬೇಕು, ಅದಕ್ಕೊಂದು ಟ್ರಸ್ಟ್ ಮಾಡಬೇಕು ಎಂದು ಕಾರ್ಯೋನ್ಮುಖರಾದರು. ತಂದೆಯವರದ್ದು ಶೀಘ್ರವಾದ ತೀರ್ವನ. ಅತೀ ಒತ್ತಡದಲ್ಲಿ ಮಾಡುತ್ತಿದ್ದ ಕಾರ್ಯಗಳು. ಮೂಡುಬಿದರೆಯಲ್ಲಿ ಗೋಪಾಲ್ ಪೈಯವರಿದ್ದರು. ಅವರು ಟ್ರಸ್ಟ್ ಡೀಡ್ ಮಾಡುವುದರಲ್ಲಿ ತಜ್ಞರು ಎಂದು ಹೆಗ್ಗಡೆಯವರಿಗೆ ತಿಳಿಯಿತು. ತಕ್ಷಣ ನಾರಾಯಣ ಕಾಮತ್ ಎನ್ನುವ ಡ್ರೖೆವರ್​ನಲ್ಲಿ ‘ಈಗಿಂದೀಗಲೇ ಹೋಗಿ ಅವರನ್ನು ಕರೆದುಕೊಂಡು ಬಾ’ ಅಂದರು. ‘ನಾಳೆ ಹೋಗಬಹುದೇ?’ ಎಂದು ಚಾಲಕ ಕೇಳಿದಾಗ, ‘ನಾಳೆ ಅಲ್ಲ ಇವತ್ತೇ ಹೋಗಬೇಕು’ ಎಂದು ಅಂದೇ ಕಾರು ಕಳುಹಿಸಿ ಅವರನ್ನು ಕರೆಯಿಸಿ, ‘ಪೈಯವರೇ ಉಜಿರೆಯಲ್ಲಿ ಕಾಲೇಜು ಪ್ರಾರಂಭಿಸಬೇಕು ಎಂದುಕೊಂಡಿದ್ದೇನೆ. ಅದಕ್ಕೊಂದು ಟ್ರಸ್ಟ್ ಡೀಡ್ ಮಾಡಿಕೊಡಿ’ ಎಂದರು. ಒಂದು ಕಾಲೇಜಿಗೆ ಟ್ರಸ್ಟ್ ಡೀಡ್ ಮಾಡಲಾಯಿತು. ಅಂದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಅದಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಅವರ ಹಂಬಲವಾಗಿತ್ತು ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ನಿರತರಾದರು.

ಬಹಳಷ್ಟು ಜನ ಉಜಿರೆಯಂತಹ ಸಣ್ಣ ಊರಿನಲ್ಲಿ ಕಾಲೇಜು ಮಾಡಲು ಸಾಧ್ಯವೇ, ಇಲ್ಲಿ ಯಾರು ಶಿಕ್ಷಣಕ್ಕೆ ಬರುತ್ತಾರೆ, ಯಾರು ಓದಲಿಕ್ಕೆ ಬರುತ್ತಾರೆ, ವಸತಿ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳನ್ನು ಹೇಳುವಾಗ ಅವರು ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಶಿಕ್ಷಣಕ್ಕೆ ಪ್ರಾಧಾನ್ಯ ಕೊಡಬೇಕು, ಗ್ರಾಮೀಣ ವಿದ್ಯಾರ್ಥಿಗಳು ಒಳ್ಳೆಯ ಅವಕಾಶ ಪಡೆದು ಒಳ್ಳೆಯ ಜೀವನ ಮಾಡಬೇಕು ಎಂಬ ತೀರ್ಮಾನ ಅಂದು ಕೈಗೊಂಡಿದ್ದರಿಂದ ಇಂದು ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ.

ಆಗ ಬ್ಯಾಂಕ್ ಮತ್ತು ಇನ್ಶೂರೆನ್ಸ್ ಕ್ಷೇತ್ರ ಬಿಟ್ಟರೆ ಬೇರೆಲ್ಲೂ ಉದ್ಯೋಗಕ್ಕೆ ಅವಕಾಶ ಇರಲಿಲ್ಲ. ಬ್ಯಾಂಕುಗಳಿಗೆ ಮತ್ತು ಬೇರೆ-ಬೇರೆ ಸಂಸ್ಥೆಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿ ಎಂದು ತಿಳಿಸುತ್ತಿದ್ದರು. ನಾವೀಗ ಏನು ಪ್ಲೇಸ್ಮೆಂಟ್ ಎಂದು ಹೇಳುತ್ತೇವೆ ಅದನ್ನು ಅವರು ಆಗಿನ ಕಾಲದಲ್ಲೇ ಮಾಡಿದ್ದರು. ಪೊ›. ಎಸ್. ಪ್ರಭಾಕರ್ ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದರು. ಅವರನ್ನು ಸರ್ಕಾರಿ ಉದ್ಯೋಗದಿಂದ ರಾಜೀನಾಮೆ ನೀಡಲು ತಿಳಿಸಿ, ಅವರನ್ನು ಉಜಿರೆ ಎಸ್​ಡಿಎಂ ಕಾಲೇಜಿನ ಪ್ರಾಂಶುಪಾಲರನ್ನಾಗಿಸಿದರು. ಹೀಗಾಗಿ ಅವರು ಶಿಕ್ಷಣಕ್ಕೆ ಕೊಟ್ಟ ಪ್ರಾಶಸ್ತ್ಯ ನನಗೆ ಹೆಚ್ಚಿನ ಸ್ಪೂರ್ತಿಯನ್ನು ನೀಡಿತು. ಮುಂದೆ ನಾನೇನಾದರೂ ಸಾಧನೆ ಮಾಡಿ ಹೊಸ ಸಂಸ್ಥೆಗಳನ್ನು ತೆರೆದಿದ್ದರೆ ಅದಕ್ಕೆ ಅವರ ಸ್ಪೂರ್ತಿ, ಉತ್ಸಾಹ, ಅಚಲವಾದ ಶ್ರದ್ಧೆ, ನಂಬಿಕೆಗಳಿಂದಲೇ ಪ್ರೇರಣೆಯಾಯಿತು.

ಹೀಗೆ ಅದೆಷ್ಟೋ ಸಂಗತಿಗಳು ನಮ್ಮ ಹಿರಿಯರ ಬದುಕಿನ ಅಂಶಗಳು ನಮ್ಮ ಬದುಕಿಗೂ ಪ್ರೇರಣೆ ಹಾಗೂ ಮಾರ್ಗದರ್ಶನವನ್ನು ನೀಡುತ್ತವೆ. ವರ್ಷದಲ್ಲೊಮ್ಮೆ ಅವರನ್ನು ಸ್ಮರಿಸುವುದು ಧಾರ್ವಿುಕ ಕಾರ್ಯವಾದರೂ ಅವರು ತೋರಿದ ಪಥದಲ್ಲಿ ಮುನ್ನಡೆದಾಗ ನಾವು ಅವರನ್ನು ಸದಾ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಹಾಗೆಯೇ ಅವರ ಆಸೆ-ಆಕಾಂಕ್ಷೆಗಳಂತೆ ನಾವು ಉತ್ತಮ ಜೀವನವನ್ನು ಕಂಡುಕೊಂಡಾಗ ಅವರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ. ಇಂದು ನಮ್ಮೊಡನಿರುವ ಹಿರಿಜೀವಗಳೂ ಅಮೂಲ್ಯ ರತ್ನವಿದ್ದಂತೆ. ಅವರಲ್ಲಿ ಸಾಕಷ್ಟು ಜೀವನಾನುಭವಗಳಿರುತ್ತವೆ. ಅವರ ಅನುಭವದ ಮಾರ್ಗದರ್ಶನವನ್ನು ಪಡೆದು ನಮ್ಮ ಬದುಕಿನ ಸಾರ್ಥಕತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net