

| ಕಿರಣ್ ಮಾದರಹಳ್ಳಿ ಚಾಮರಾಜನಗರ
ಈ ‘ವಿಷ’ಮ ಕಾಲದಲ್ಲಿ ಅಡವಿಯ ಅಧಿಪತಿಯೇ ಅಧೀರನಾದಂತಿದೆ. ಕಾಡಿನ ಸಾರ್ವಭೌಮನೇ ಸವಾಲಿನ ಸುಳಿಯಲ್ಲಿ ಸಿಲುಕಿದಂತಾಗಿದೆ. ಪರಿಸರ ಸಮತೋಲನಕ್ಕಾಗಿ ಹೋರಾಡುತ್ತಿರುವ ಪರಾಕ್ರಮಿ ತನ್ನ ಪ್ರಾಣವನ್ನು ಪಣವಿಟ್ಟಂತಾಗಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ವಿಷಪ್ರಾಶನದಿಂದ 5 ಹುಲಿಗಳು ಜೀವತೆತ್ತ ಸೂತಕದ ಕಾಮೋಡ ಇನ್ನೂ ಸರಿದಿಲ್ಲ. ಈ ಸಂದರ್ಭದಲ್ಲಿ ಇಂದು (ಮಂಗಳವಾರ) ಆಚರಣೆ ಮಾಡುವ ವಿಶ್ವ ಹುಲಿ ದಿನ ಸಂಭ್ರಮದ ಬದಲು ವ್ಯಾಘ್ರಗಳ ಅಳಿವು-ಉಳಿವಿನ ಬಗ್ಗೆ ಕಳವಳ ಹುಟ್ಟಿಸಿ, ತನ್ನ ಸಂರಕ್ಷಣೆಗಾಗಿ ಕರೆಗಂಟೆ ಬಾರಿಸಿದೆ.
ಕಳ್ಳಬೇಟೆ, ಆವಾಸಸ್ಥಾನದ ನಾಶ, ಅರಣ್ಯದೊಳಗೆ ಮಾನವನ ಹಸ್ತಕ್ಷೇಪ, ಆಡಳಿತ ವ್ಯವಸ್ಥೆಯ ಲೋಪ, ಮಾಂಸಕ್ಕೆ ವಿಷ ಹಾಕಿ ಪ್ರತಿಕಾರದ ಹತ್ಯೆ ಮಾಡುವುದು ಚಾಲ್ತಿಯಲ್ಲಿವೆ. ತಪ್ಪಿತಸ್ಥರಿಗೆ ವನ್ಯಜೀವಿ ಕಾಯ್ದೆ ಪ್ರಕಾರ 7 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಮನುಷ್ಯರನ್ನು ಕಾಡುವಂತೆ ಹುಲಿಗಳಿಗೂ ಅನಾರೋಗ್ಯ ಬಂದು ಸಾಯುತ್ತಿವೆ. ಸರಹದ್ದಿಗಾಗಿ ಮತ್ತೊಂದು ಹುಲಿಯೊಂದಿಗೆ ನಡೆಯುವ ಕಾದಾಟ, ವಯಸ್ಸಹಜ ಸಾವುಗಳು ನಿರಂತರವಾಗಿವೆ.
ಆಹಾರ ಜಾಲದ ಶಿಖರ ಹುಲಿರಾಯ : ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯ ಕಾಪಾಡುವಲ್ಲಿ ಹುಲಿಯ ಪಾತ್ರ ದೊಡ್ಡದು. ಸಸ್ಯಾಹಾರಿ ಪ್ರಾಣಿಗಳನ್ನು ಬೇಟೆಯಾಡುವ ಹುಲಿ ಆಹಾರ ಸಮತೋಲನದ ಶಿಖರ. ಹುಲಿ ಇಲ್ಲದಿದ್ದರೆ ಸಸ್ಯಾಹಾರಿ ಪ್ರಾಣಿಗಳ ಸಂತತಿ ಹೆಚ್ಚಳವಾಗುತ್ತದೆ. ಹಸಿರನ್ನೆಲ್ಲ ತಿಂದು ಹಾಕುತ್ತವೆ. ಸಸ್ಯಗಳಿಲ್ಲದ ಕಾಡಿನಲ್ಲಿ ಮಳೆ ಮಣ್ಣಿನ ಸವಕಳಿ ಮಾಡುತ್ತದೆ. ಮಳೆ ನೀರು ಇಂಗುವಿಕೆ ಕಡಿಮೆಯಾಗುತ್ತದೆ. ಅರಣ್ಯಗಳು ಜಲಾನಯನ ಪ್ರದೇಶಗಳು. ಎಲ್ಲ ನದಿಗಳ ತಾಯಿಯಾದ ಕಾಡು ನಾಶವಾಗುತ್ತದೆ. ಇದರ ಪರಿಣಾಮ ನಾಡಿನ ಮೇಲೂ ಬೀರುತ್ತದೆ. ಹೀಗಾಗಿ ಜಲದ ಮೂಲ, ಹಸಿರು ಸಮೃದ್ಧಿಗೆ ಹುಲಿ ಕೊಡುಗೆ ಅಮೂಲ್ಯವಾಗಿದೆ.
ದೇಶದಲ್ಲಿ ಹುಲಿಗಳ ಸಂರಕ್ಷಣೆಯ ಉದ್ದೇಶದಿಂದ 1973ರ ಏಪ್ರಿಲ್ 9ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹುಲಿ ಯೋಜನೆ ಘೋಷಣೆ ಮಾಡಿದರು. ಇದರಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರವೂ ಒಂದಾಗಿತ್ತು. ಮೈಸೂರು ಮತ್ತು ಕೊಡಗಿನ ನಾಗರಹೊಳೆ, ಚಿಕ್ಕಮಗಳೂರಿನ ಭದ್ರ, ಉತ್ತರ ಕನ್ನಡ ಜಿಲ್ಲೆಯ ಕಾಳಿ, ಚಾಮರಾಜನಗರ ಜಿಲ್ಲೆಯ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. 2022ರ ಗಣತಿ ಪ್ರಕಾರ, ಬಂಡೀಪುರದಲ್ಲಿ 150, ನಾಗರಹೊಳೆಯಲ್ಲಿ 140, ಬಿಆರ್ಟಿಯಲ್ಲಿ 37, ಭದ್ರಾದಲ್ಲಿ 28, ಕಾಳಿಯಲ್ಲಿ 17 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಹಗಲಿರುಳೆನ್ನದೆ ಕಾಡನ್ನು ಕಾಯುತ್ತಿದೆ. ಸಂರಕ್ಷಣೆ ವೇಳೆಯಲ್ಲಿ ಕಾಡುಪ್ರಾಣಿಯ ದಾಳಿಗೆ ಬಲಿಯಾಗಿರುವ ಸಿಬ್ಬಂದಿ ತ್ಯಾಗ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಪರಿಶ್ರಮದಿಂದ ಹುಲಿ ಯೋಜನೆ ಸಾಕಾರಗೊಳ್ಳುತ್ತಿದೆ.
ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ. ಪ್ಯಾಂತೇರಾ ಟ್ರೖೆಗ್ರೀಸ್ ವೈಜ್ಞಾನಿಕ ಹೆಸರು. ಕಾಟಿ, ಕಡವೆ, ಜಿಂಕೆ, ಮರವಿ, ಕೊಂಡುಕುರಿ ಮತ್ತು ಇತರ ದೊಡ್ಡ ಸಸ್ಯಾಹಾರಿ ಬಲಿಪ್ರಾಣಿಗಳನ್ನು ಬೇಟೆಯಾಡುತ್ತದೆ. ವಾರಕ್ಕೆ 200 ಕೆಜಿ ಮಾಂಸ ತಿನ್ನುತ್ತದೆ. 3-4 ವರ್ಷಕ್ಕೆ ಲೈಂಗಿಕವಾಗಿ ಪ್ರಬುದ್ಧತೆ ಬರುತ್ತದೆ. ಹೆಣ್ಣು ಹುಲಿ ಗರ್ಭಾವಸ್ಥೆ 100-110 ದಿನಗಳಾಗಿವೆ. 2ರಿಂದ 5 ಮರಿಗಳಿಗೆ ಜನ್ಮ ನೀಡುತ್ತದೆ. 2ರಿಂದ 3 ವರ್ಷಗಳಿಗೆ ಮರಿಗಳು ತಮ್ಮ ನೆಲೆಯನ್ನು ಕಂಡುಕೊಳ್ಳುತ್ತವೆ. ದೇಹದ ಗಾತ್ರ ಮತ್ತು ರಚನೆಯಲ್ಲಿ ನೆಲದಿಂದ ಭುಜದ ಎತ್ತರ-0.911 ಮೀ.(2.9-3.6 ಅಡಿ), ಸಂಪೂರ್ಣ ಉದ್ದ-2.4-3.1 ಮೀ. (7.8-10.2 ಅಡಿ), ಬಾಲದ ಉದ್ದ-0.8-11 ಮೀ.(2.8-3.6 ಅಡಿ), ತೂಕ-100-260 ಕೆಜಿ ಇರುತ್ತದೆ. ಮರಕ್ಕೆ ಮೂತ್ರ ಚಿಮ್ಮಿಸಿ, ಉಗುರುಗಳಿಂದ ಪರಚಿ ಸರಹದ್ದು ಗುರುತಿಸಿಕೊಳ್ಳುತ್ತದೆ. ಅರಣ್ಯ ಇಲಾಖೆ ಗಣತಿ ವೇಳೆ ಹುಲಿಗಳ ಮೈ ಮೇಲಿರುವ ಪಟ್ಟೆಗಳ ಮಾದರಿಯಿಂದ ಪ್ರತಿಯೊಂದು ಹುಲಿಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುತ್ತಿದೆ.
ವಿಶ್ವದಲ್ಲೇ ಹೆಚ್ಚು ಹುಲಿಗಳಿರುವ ದೇಶ ಭಾರತ. ಅಧಿಕ ಹುಲಿಗಳಿರುವ ಮೊದಲ ರಾಜ್ಯ ಮಧ್ಯಪ್ರದೇಶ. ಅಂದಾಜು 563 ಹುಲಿಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಹುಲಿಗಳ ವೃದ್ಧಿಯ ಜತೆಗೆ ಸಾವಿನ ಪ್ರಮಾಣವೂ ಗಣನೀಯವಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 2021ರಲ್ಲಿ 15, 2022ರಲ್ಲಿ 19, 2023ರಲ್ಲಿ 12, 2024ರಲ್ಲಿ 13, 2025ರ 7 ತಿಂಗಳಲ್ಲಿ 10 ಹುಲಿಗಳು ಉಸಿರು ಚೆಲ್ಲಿವೆ. ಈ 10ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಒಂದೇ ಸಲ 5 ಹುಲಿಗಳು ಸತ್ತಿದ್ದು ದೊಡ್ಡ ದುರಂತ. 15 ಹುಲಿಗಳಿಗೆ ಆವಾಸ ಸ್ಥಾನವಾಗಿದ್ದ ಈ ವನ್ಯಜೀವಿಧಾಮ ರಾಜ್ಯದ 6ನೇ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿ ಘೋಷಣೆಯಾಗುವ ಬದಲು ತಾಯಿ ಮತ್ತು 4 ಹುಲಿ ಮರಿಗಳ ಸಾವಿನ ಸುದ್ದಿಯಿಂದ ಸೊರಗಿ ಹೋಯಿತು. ಕರ್ನಾಟಕದಲ್ಲಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಾಗಿರುವ ಕಾಳಿ, ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್ಟಿಗಳಲ್ಲಿ ಒಟ್ಟಾರೆ 2018ರಲ್ಲಿ 472, 2022ರಲ್ಲಿ 417, 2023ರಲ್ಲಿ 408, 2024ರಲ್ಲಿ 393 ಹುಲಿಗಳಿವೆ ಎಂಬ ಅಂಕಿ- ಅಂಶವಿದೆ. ಈ ಐದೂ ಹುಲಿ ಕಾಡುಗಳಲ್ಲಿ ವ್ಯಾಘ್ರಗಳ ಮರಣ ಸಂಭವಿಸುತ್ತಲೇ ಇವೆ. 2012-2024ರ ಸೆಪ್ಟೆಂಬರ್ವರೆಗಿನ ಎನ್ಟಿಸಿಎ ಮಾಹಿತಿ ಪ್ರಕಾರ, ದೇಶದಲ್ಲಿ ನಾಗರಹೊಳೆ ಅರಣ್ಯ ಹುಲಿಗಳ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. 2021ರಿಂದ 2025ರವರೆಗಿನ ಕರ್ನಾಟಕದ ಅಂಕಿ-ಅಂಶಗಳಲ್ಲೂ ಮೊದಲ ಸ್ಥಾನದಲ್ಲಿದೆ. ಬಂಡೀಪುರ ನಂತರದಲ್ಲಿದೆ. ಉಳಿದ ಕಡೆಗಳಲ್ಲೂ ಹುಲಿಗಳ ಸಾವುಗಳಾಗಿವೆ.
ಹುಲಿ ಎಂದರೆ ಭಯವಾದರೂ ನಿರಾತಂಕವಾಗಿ ಜನರ ಬದುಕಿನೊಂದಿಗೆ ಬೆಸೆದುಕೊಂಡಿದೆ. ಬಾಲ್ಯದಲ್ಲಿ ಹುಲಿ-ಕುರಿ, ಹುಲಿ ಮನೆ ಆಟ, ಹಬ್ಬಗಳಲ್ಲಿ ತೊಡುವ ಹುಲಿ ವೇಷ, ಹುಲಿ ಕುಣಿತ ಕಲೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ದೇವಾನುದೇವತೆಗಳಿಗೆ ಹುಲಿ ವಾಹನವಾಗಿ ಪೂಜಿಸಲ್ಪಡುತ್ತಿದೆ. ಶೌರ್ಯದ ಬಿರುದಿಗೆ, ಸಾಹಿತ್ಯದಲ್ಲಿ ಗತ್ತಿಗೆ ಹುಲಿ ಪದ ಇರಲೇಬೇಕಾಗಿದೆ. ಕಾಡಿನಲ್ಲಿ ಸಫಾರಿಗೆ ಬಂದು ಹುಲಿ ಕಾಣಬೇಕೆಂಬುದು ಹೆಬ್ಬಯಕೆಯಾಗಿರುತ್ತದೆ.
ರಷ್ಯಾದ ಸೇಂಟ್ ಪೀಟರ್ಬರ್ಗ್ನಲ್ಲಿ 2010ರ ಜುಲೈ 29ರಂದು ಗ್ಲೋಬಲ್ ಟೈಗರ್ ಇನಿಶಿಯೇಟಿವ್ ಆಯೋಜಿಸಲಾಗಿತ್ತು. ಹುಲಿಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಅಂತಾರಾಷ್ಟ್ರೀಯ ಹುಲಿ ದಿನ ಆಚರಣೆ ಮಾಡುವ ಘೋಷಣೆ ಯಾಯಿತು. ಅಂದಿನಿಂದ ಜುಲೈ 29, ಅಂತಾರಾಷ್ಟ್ರೀಯ ಹುಲಿ ದಿನ ಆಚರಣೆ ಮಾಡಲಾಗುತ್ತಿದೆ.
ಹುಲಿಗಳ ರಕ್ಷಣೆ ನಮ್ಮ ಜವಾಬ್ದಾರಿ. ಪ್ರಕೃತಿಯ ನಿಯಮವನ್ನು ಎಲ್ಲರೂ ಪಾಲಿಸಲೇಬೇಕು. ನಶಿಸುತ್ತಿರುವ ಜೀವಗಳನ್ನು ಸಂರಕ್ಷಿಸಬೇಕು. ಮನುಷ್ಯರು ಬುದ್ಧಿಯಿಂದ ಮಾತ್ರ ಬಲಶಾಲಿ. ಉಳಿದಿದ್ದರಲ್ಲಿ ನಾವು ಪ್ರಾಣಿಗಳಿಗಿಂತ ಬಲಹೀನರು. ಹಾಗಾಗಿ ಬುದ್ಧಿಯಿಂದ ಬೆಳೆದಿರುವ ಮನುಷ್ಯ ಎಲ್ಲ ಪ್ರಾಣಿಗಳ ಸಂರಕ್ಷಣೆ ಮಾಡಬೇಕು. ಮುಂದಿನ ಪೀಳಿಗೆಗಾಗಿ ಉಳಿಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಕೃತಿಗೆ ಹುಲಿಗಳ ಅವಶ್ಯಕತೆ ಇದೆ. ಆದ್ದರಿಂದ ಹುಲಿಗಳ ಸಂರಕ್ಷಣೆಯಾಗಬೇಕು. | ಅನಿರುದ್ಧ್ ಚಿತ್ರನಟ ಹುಲಿಯನ್ನು ದೇವರೆಂದು ಪೂಜಿಸುತ್ತೇವೆ. ಜನಪದ ಹಾಡುಗಳನ್ನು ಹಾಡುತ್ತೇವೆ ಮತ್ತು ಹುಲಿಯೊಟ್ಟಿಗೆ ಸಹಬಾಳ್ವೆ ನಡೆಸುತ್ತಿದ್ದೇವೆ. ನಮಗೆ ಹುಲಿ ಬಗ್ಗೆ ಇರುವ ಜ್ಞಾನವನ್ನು ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಮತ್ತು ಸಂಶೋಧಕರು ಬಳಸಿಕೊಳಬೇಕು. | ಡಾ.ಸಿ.ಮಾದೇಗೌಡ ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಬಿಳಿಗಿರಿರಂಗನಬೆಟ್ಟ