

ಬಳ್ಳಾರಿ: ರಾಜ್ಯ ಸರ್ಕಾರ ಮಾಜಿ ದೇವದಾಸಿಯರಿಗಾಗಿ ಕಲ್ಪಿಸಿದ ಎರಡು ಎಕರೆ ಜಮೀನನ್ನು ಮತ್ತೆ ಕಸಿದುಕೊಂಡಿದ್ದು, ಇದರಿಂದಾಗಿ ಅವರ ಬದುಕು ಅತಂತ್ರ ಸ್ಥಿತಿಗೆ ಸಾಗಿದೆ.
ಕಳೆದ ಎರಡು ದಶಕಗಳ ಹಿಂದೆ ರಾಜ್ಯ ಸರ್ಕಾರ ಮಾಜಿ ದೇವದಾಸಿಯರಿಗೆ ತಲಾ ಎರಡು ಎಕರೆಯಂತೆ ಜಮೀನ ನೀಡಿತ್ತು. ಆದರೆ ಕೈಗಾರಿಕೆ ಪ್ರದೇಶ ನಿರ್ಮಾಣದ ಹೆಸರಿನಲ್ಲಿ ವಾಪಸ್ ಸ್ವಾಧೀನಪಡಿಸಿಕೊಂಡಿದ್ದು, ಇದರಿಂದ ಅವರ ಬದುಕು ಅಯೋಮಯವಾಗಿದೆ.
ಬಳ್ಳಾರಿ ತಾಲೂಕಿನ ಕುಡತಿನಿ, ಹರಗಿನ ಡೋಣಿ, ಸಿದ್ದಮ್ಮನಹಳ್ಳಿ, ಕೊಳಗಲ್ಲು, ಜಾನೆಕುಂಟೆ ಮುಂತಾದ ಗ್ರಾಮಗಳ ಪುನರ್ವಸತಿ ಕಲ್ಪಿತ ದೇವದಾಸಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆರ್ಸೆಲ್ಲಾರ ಮಿತ್ತಲ್, ಬ್ರಹ್ಮಣಿ ಸ್ಟೀಲ್ಸ್ ಮತ್ತು ಎನ್‌ಎಂಡಿಸಿ ಕಂಪನಿಗಳಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 2009ರಲ್ಲಿ 12,500 ಎಕರೆ ಕೃಷಿ ಜಮೀನನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಪುನರ್ವಸತಿಕಲ್ಪಿತ ದೇವದಾಸಿಯರ ಜಮೀನುಗಳೂ ಇವೆ.
‘ಸರ್ಕಾರ ನಮಗೆ ಜಮೀನು ಕೊಟ್ಟು ಕಸಿದುಕೊಂಡಿದ್ದು, ಜಮೀನಿಗೆ ಪುಡಿಗಾಸು ಪರಿಹಾರ ನೀಡಿದೆ. ಅದರಲ್ಲಿ ದಲ್ಲಾಳಿಗಳೇ ಪರಿಹಾರವನ್ನು ನುಂಗಿ ನೀರು ಕುಡಿದಿದ್ದಾರೆ. ನಮಗೀಗ ದಿಕ್ಕು ತೋಚದಂತಾಗಿದೆ. ಕುಟುಂಬ ಹೇಗೆ ನಿರ್ವಹಿಸಬೇಕು? ಮಕ್ಕಳ ಮದುವೆ ಹೇಗೆ ಮಾಡಬೇಕು? ಜಮೀನಿದ್ದರೆ, ಯಾರಾದರೂ ಮದುವೆಯಾಗಲು ಬರುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಮಾಜಿ ದೇವಸಾಸಿಯೊಬ್ಬರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಕುಡತಿನಿಯಲ್ಲಿ ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ಮಂಜೂರಾದ ಜಮೀನು ಸೇರಿ 56 ಎಕರೆ 89 ಗುಂಟೆ ಕೃಷಿ ಜಮೀನು ವಶಪಡಿಸಿಕೊಳ್ಳಲಾಗಿದೆ. ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. 2011ರ ಫೆಬ್ರುವರಿ 14ರಿಂದ ಮಾ.19ರವರೆಗೆ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ನ್ಯಾಯಯುತವಾದ ಬೆಲೆಯನ್ನು ನಿಗದಿಪಡಿಸಿ ಭೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸುತ್ತಾರೆ.
ಕುಡತಿನಿ ಸುತ್ತಮುತ್ತಲ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಪುನರ್ವಸತಿ ಕಲ್ಪಿತ ದೇವದಾಸಿಯರ ಜಮೀನುಗಳನ್ನು ಉದ್ಯಮಗಳಿಗೆ ಕಸಿದುಕೊಳ್ಳಲಾಗಿದೆ. ‘ಬ್ರಹ್ಮಣಿ ಸ್ಟೀಲ್ಸ್’ ನವರು ಉತ್ತಮ್ ಗಾಲ್ವಾಗೆ ಜಮೀನು ಮಾರಾಟ ಮಾಡಿದ್ದಾರೆ. ಪುನರ್ವಸತಿ ಕಲ್ಪಿತ ದೇವದಾಸಿಯರು ಅತಂತ್ರರಾಗಿದ್ದಾರೆ’ ಎಂದು ಕುಡತಿನಿ ಭೂ ಸಂತ್ರಸ್ತ ಹೋರಾಟ ಸಮಿತಿ ಸದಸ್ಯ ತಿಪ್ಪೇಸ್ವಾಮಿ ತಿಳಿಸುತ್ತಾರೆ.
ಕೈಗಾರಿಕೆಗಳನ್ನು ಸ್ಥಾಪಿಸಬೇಕು ಇಲ್ಲವೇ ಇಲ್ಲವೆ ಜಮೀನು ಹಿಂತಿರುಗಿಸಬೇಕು. ಸ್ವಾಧೀನಪಡಿಸಿಕೊಂಡ ಜಮೀನಿಗೆ ನ್ಯಾಯಸಮ್ಮತ ಪರಿಹಾರ ಕೊಡಬೇಕು. ಜಮೀನನ್ನು ಕಳೆದುಕೊಂಡ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.
385ನೇ ದಿನಕ್ಕೆ ಕಾಲಿಟ್ಟ ಧರಣಿ
ಕುಡತಿನಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೈಗಾರಿಕೆ ಪ್ರದೇಶಗಳಿಗಾಗಿ ಜಮೀನು ಸ್ವಾಧೀನ ಪಡೆಸಿಕೊಂಡಿದ್ದು, ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕುಡತಿನಿಯಲ್ಲಿ ನಡೆಯುತ್ತಿರುವ ಭೂ ಸಂತ್ರಸ್ತರ ಧರಣಿ 385ನೇ ದಿನಕ್ಕೆ ಕಾಲಿಟ್ಟಿದೆ. 2022ರ ಡಿ.18ರಂದು ಆರಂಭಗೊಂಡ ಧರಣಿಯಲ್ಲಿ ಕುಡತಿನಿ, ಹರಗಿನ ಡೋಣಿ, ಸಿದ್ದಮ್ಮನಹಳ್ಳಿ, ಕೊಳಗಲ್ಲು, ಜಾನೆಕುಂಟೆ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ವರೆಗೂ ಅವರಿಗೆ ಸರ್ಕಾರದಿಂದ ಇನ್ನು ಉತ್ತಮ ಸ್ಪಂದನೆ ಸಿಕ್ಕಿಲ್ಲ.