ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವವನೇ ನಾಯಕ...

Shivanna
Published on

ಬೆಂಗಳೂರು: ‘ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಆಗಲೇ ನಾಯಕ ಆಗೋದು. ಇನ್ನು ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ ...’ ಹಾಗಂತ ಹೇಳಿದ್ದು ಶಿವರಾಜಕುಮಾರ್. ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಎಂಬ ಮಾತು ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ.

ಈ ಹಿಂದೆ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದಾಗ, ಅದನ್ನು ಬಗೆಹರಿಸುವುದಕ್ಕೆ ಡಾ. ರಾಜಕುಮಾರ್ ಇದ್ದರು. ಅವರ ನಂತರ ವಿಷ್ಣುವರ್ಧನ್ ಮತ್ತು ಅಂಬರೀಷ್ ಆ ಕೆಲಸ ಮಾಡುತ್ತಿದ್ದರು. ಅವರ ನಂತರ ಯಾರು ಎಂಬ ಪ್ರಶ್ನೆ ಬಂದಾಗ, ಚಿತ್ರರಂಗ ಶಿವರಾಜಕುಮಾರ್ ಅವರತ್ತ ನೋಡುತ್ತಿತ್ತು. ಈಗ ಕರೊನಾದಿಂದ ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಚಿತ್ರ ಪ್ರದರ್ಶನ ರದ್ದಾಗಿದೆ, ಚಿತ್ರೀಕರಣ ಚಟುವಟಿಕೆಗಳು ನಿಂತಿವೆ, ಕಲಾವಿದರು ಮತ್ತು ಕಾರ್ವಿುಕರು ಕೆಲಸ ಇಲ್ಲದೆ ಕಷ್ಟಪಡುತ್ತಿದ್ದಾರೆ ... ಇಂತಹ ಹೊತ್ತಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪುನಶ್ಚೇತನ ತುಂಬುವುದರ ಜತೆಗೆ, ಚಿತ್ರರಂಗದ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಚಿತ್ರರಂಗದ ಹಲವು ಗಣ್ಯರು ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿ, ಸಭೆ ನಡೆಸಿದ್ದಾರೆ.

ಪ್ರಮುಖವಾಗಿ, ಬಿಕ್ಕಟ್ಟು ನಿರ್ವಹಣೆ ಸಮಿತಿಯೊಂದನ್ನು ರಚಿಸುವುದಕ್ಕೆ ಈ ಸಂದರ್ಭದಲ್ಲಿ ತೀರ್ವನಿಸಲಾಗಿದೆ. ಕರೊನಾ ತಂದಿರುವ ಸಂಕಷ್ಟದಿಂದ ಯಾರೆಲ್ಲ ಸಮಸ್ಯೆ ಅನುಭವಿಸುತ್ತಿದ್ದಾರೆ, ಅವರ ಸಮಸ್ಯೆಗೆ ಪರಿಹಾರ ಏನು ಎಂದು ಈ ಸಮಿತಿ ಮೊದಲು ರ್ಚಚಿಸಿ, ರೂಪುರೇಷೆ ಸಿದ್ಧಪಡಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಭೆಯ ನಂತರ ಮಾತನಾಡಿರುವ ಶಿವರಾಜಕುಮಾರ್, ‘ಚಿತ್ರರಂಗದ ಎಲ್ಲ ವಲಯಗಳಿಂದ ಒಗ್ಗಟ್ಟಾಗಿ ಬಂದಿರುವುದು ಖುಷಿ ತಂದಿದೆ. ಎಲ್ಲ್ಲ ವಲಯದವರು ಸಾಕಷ್ಟು ಸಮಸ್ಯೆಗಳನ್ನು ನನ್ನ ಜತೆ ಹಂಚಿಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಚರ್ಚೆ ಆಗಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಸರ್ಕಾರದ ಬಳಿಗೆ ಹೋಗುವುದಕ್ಕೆ ಮುನ್ನ ನಾವೇನು ಮಾಡಬೇಕು ಎಂಬುದು ಚರ್ಚೆ ಆಗಬೇಕಿದೆ’ ಎಂದು ಹೇಳಿದ್ದಾರೆ. ಇನ್ನು ನಾಯಕತ್ವ ವಹಿಸಿಕೊಳ್ಳುವ ವಿಚಾರದ ಬಗ್ಗೆ ಮಾತನಾಡಿದ ಅವರು, ‘ತಾನು ಮುಂದೆ ಹೋಗಿ, ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗುವುದಿಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಆಗಲೇ ನಾಯಕ ಆಗೋದಕ್ಕೆ ಸಾಧ್ಯ. ಇವರೆಲ್ಲ ನನಗೆ ನಾಯಕತ್ವ ವಹಿಸಿ ಅಂತ ಹೇಳುತ್ತಿರುವುದರಿಂದ ಒಪ್ಪಿಕೊಳ್ಳುತ್ತಿದ್ದೀನಿ. ಹಾಗಂತ ಲೀಡರ್ ಅಂದಾಕ್ಷಣ ನಾನು ಮುಂದೆ ಹೋಗಬೇಕು ಎಂಬ ದುರಹಂಕಾರ ಇಲ್ಲ. ಎಲ್ಲರೂ ಜತೆಯಾಗಿ ಹೋಗೋಣ’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net