

ಮಾನ್ವಿ: ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯಿಂದಾಗಿ ಸಹಕಾರ ಚಳವಳಿಯಲ್ಲಿ ಜನಸಾಮಾನ್ಯರು, ಮಹಿಳೆಯರು, ಯುವ ಸಮುದಾಯ ಭಾಗವಹಿಸಲು ಅನುಕೂಲವಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.
ಪಟ್ಟಣದ ಕೆಪಿಎಸ್‌ವಿಎಸ್ ಆಯುರ್ವೇದಿಕ್ ಕಾಲೇಜು ಆವರಣದ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ಬೆಂಗಳೂರು, ಕಲಬುರಗಿ ಪ್ರಾಂತೀಯ ಕಚೇರಿ ವತಿಯಿಂದ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಸಂಘ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಅಂಗವಾಗಿ ವಿವಿಧ ಕಾರ್ಯಕ್ರಮ, ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಸಂಯುಕ್ತ ಸಹಕಾರಿಯ 24ನೇ ವಾರ್ಷಿಕ ಸಾಮಾನ್ಯ ಸಭೆಗೆ ರಾಯಚೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿಗಳು ಭಾಗವಹಿಸುವಂತೆ ಕೋರಿದರು.
ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಆರ್. ತಿಮ್ಮಯ್ಯ ಶೆಟ್ಟಿ ಮಾತನಾಡಿ, ಪ್ರತಿಯೊಂದು ಸಹಕಾರಿ ಸಹಕಾರ ಕ್ಷೇತ್ರದಲ್ಲಿನ ಕಾಯ್ದೆ ಮತ್ತು ನಿಯಮಗಳನ್ನು ಪಾಲನೆ ಮಾಡುವ ಮೂಲಕ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ರಾಯಚೂರು ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ದೊಡ್ಡ ಬಸವರಾಜ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ, ಮಲ್ಲನಗೌಡ ನಕ್ಕುಂದಿ, ಒಕ್ಕೂಟದ ನಿರ್ದೇಶಕರಾದ ನಾಗರತ್ನಮ್ಮ ಪಾಟೀಲ್, ವಿಭಾಗೀಯ ಅಧಿಕಾರಿ ಸೂರ್ಯಕಾಂತ್ ರಾಕಲೆ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಟರಾಜ್ ಸೇರಿದಂತೆ ಜಿಲ್ಲೆಯ ವಿವಿಧ ಸಹಕಾರಿಗಳಿಂದ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.