ಕರೊನಾ ಸೋಂಕಿತ ಪತ್ನಿಯನ್ನೇ ಕೊಲೆ ಮಾಡಿದ ಪತಿ: ಆರೋಪಿ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ಪೊಲೀಸರು!

AP Man
Published on

ವಿಜಯವಾಡ: ಮಹಾಮಾರಿ ಕರೊನಾ ವೈರಸ್​ ಸೃಷ್ಟಿಸಿರುವ ಭೀಕರತೆಗೆ ಆಂಧ್ರ ಪ್ರದೇಶದಲ್ಲಿ ನಡೆದಿರುವ ಈ ಒಂದು ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಕರೊನಾ ಸೋಂಕಿತ ಪತ್ನಿಯನ್ನು ಪತಿ ಕೊಲೆ ಮಾಡಿರುವ ಅಮಾನವೀಯ ಘಟನೆ ನೆಲ್ಲೂರು ಜಿಲ್ಲೆಯ ಕಾವಲಿಯಲ್ಲಿ ನಡೆದಿದೆ.

ಆರೋಪಿ ಪತಿ ಮಲ್ಯಾದ್ರಿ ತನ್ನ ಪತ್ನಿಯೊಂದಿಗೆ ಕಾವಲಿ ಪೊಲೀಸ್​ ಠಾಣೆ ಬಳಿಯ ವಯನಂದನಾ ಪ್ರೆಸ್​ ರಸ್ತೆಯಲ್ಲಿ ಸಣ್ಣ ಹೋಟೆಲ್​ ತೆರೆದು ನೆಲೆಸಿದ್ದರು. 10 ದಿನಗಳ ಹಿಂದೆ ಮಲ್ಯಾದ್ರಿ ಹಾಗೂ ಆತನ ಪತ್ನಿ ಅನುರಾಧಗೆ ಕರೊನಾ ಸೋಂಕು ತಗುಲಿತ್ತು. ಇಬ್ಬರು ಸಹ 10 ದಿನಗಳ ಕಾಲ ಪ್ರತ್ಯೇಕವಾಗಿದ್ದರು. ಆದಾಗ್ಯು ಅನುರಾಧ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿ ಉಸಿರಾಡಲು ತೊಂದರೆ ಶರುವಾಗಿತ್ತು.

ಇದಾದ ಬಳಿಕ ಮಲಗಿರುವ ಸಮಯದಲ್ಲಿ ಪತ್ನಿಯ ಕೈ ಕುಯ್ದಿದ್ದಾನೆ. ಮೊದಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅನುರಾಧನ ಆರೋಗ್ಯ ಸ್ಥಿತಿ ತೀವ್ರ ರಕ್ತಸ್ರಾವದಿಂದ ಮತ್ತಷ್ಟು ಹದಗೆಡತೊಡಗಿತು. ಕೊನೆಗೆ ಆಕೆ ಮರಣ ಹೊಂದಿದಳು.

ಈ ಬಗ್ಗೆ ಪೊಲೀಸ್​ ವಿಚಾರಣೆ ವೇಳೆ ಮಾತನಾಡಿರುವ ಮಲ್ಯಾದ್ರಿ, ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆವು. ಮೊದಲು ಪತ್ನಿ ಕೈ ಕುಯ್ದುಕೊಂಡಳು. ಬಳಿಕ ನಾನು ವಿಷ ಕುಡಿಯಲು ಮುಂದಾದೆ. ಆದರೆ, ಧೈರ್ಯ ಸಾಕಾಗಲಿಲ್ಲ ಎಂದಿದ್ದಾರೆ. ಘಟನೆ ನಡೆದ ಮಾರನೇ ದಿನ ಆತನೇ ಪೊಲೀಸ್​ ಠಾಣೆಗೆ ಬಂದು ನಡೆದಿದ್ದೆಲ್ಲವನ್ನು ವಿವರಿಸಿ ಶರಣಾಗಿದ್ದಾನೆ.

ಸದ್ಯ ಮಲ್ಯಾದ್ರಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net