ರಾಜ್ಯದಲ್ಲಿಯೇ ಅತೀ ಹೆಚ್ಚು ಬಿಸಿಲು, ಗರಿಷ್ಠ 42.3ಡಿಗ್ರಿ ಸೆಲ್ಸಿಯಸ್ ದಾಖಲು, ಬಿಸಿಲೂರಿನಲ್ಲಿ ದಾಖಲೆ ಬರೆದ ತಾಪಮಾನ

Heat waves
Published on

ವಿಜಯಪುರ: ಬಿಸಿಲೂರು ಖ್ಯಾತಿಯ ವಿಜಯಪುರದಲ್ಲಿ ಗರಿಷ್ಠ ತಾಪಮಾನ 42.3 ಡಿಗ್ರಿ ಸೆಲ್ಸಿಯಸ್ ತಲುಪುವ ಮೂಲಕ ರಾಜ್ಯದಲ್ಲಿಯೇ ದಾಖಲೆ ಬರೆದಿದೆ !

ಮಾ. 19 ರಂದು ಬೆಳಗ್ಗೆ 8.30ರಿಂದ ಮಾ. 20 ರಂದು ಬೆಳಗ್ಗೆ 8.30ರವರೆಗಿನ ಮಾಹಿತಿ ಪ್ರಕಾರ ವಿಜಯಪುರದಲ್ಲಿ 42.3, ರಾಯಚೂರು-42.0, ಬಾಗಲಕೋಟೆ-41.5, ಬೀದರ್-41.4, ಬೆಳಗಾವಿ-41.3, ಕಲಬುರಗಿ-41.1, ಯಾದಗಿರಿ-40.7, ಗದಗ-40.5, ತುಮಕೂರು-40.3 ಹಾಗೂ ಚಿತ್ರದುರ್ಗದಲ್ಲಿ 40.2 ರಷ್ಟು ತಾಪಮಾನ ದಾಖಲಾಗಿದೆ.

ವಿಜಯಪುರದಲ್ಲಿ ಗರಿಷ್ಠಿ ತಾಪಮಾನ 42.3 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ ಕನಿಷ್ಠ ತಾಪಮಾನ 21.7 ರಷ್ಟಾಗಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಜನ-ಜಾನುವಾರು ಬಸವಳಿಸಿದ್ದು, ಮಧ್ಯಾಹ್ನ ಅಸಹನೀಯವೆನ್ನಿಸುತ್ತಿದೆ. ರಸ್ತೆಗಳು ಬಿಕೋ ಎನ್ನುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನ ಜಮೀನುಗಳಲ್ಲಿರುವ ಮರ-ಗಿಡಗಳನ್ನಾಶ್ರಯಿಸುತ್ತಿದ್ದಾರೆ. ತೋಟದ ಬಾವಿ, ಕಾಲುವೆಗಳಲ್ಲಿ ಈಜಲು ತೆರಳುತ್ತಿದ್ದಾರೆ. ಬಿಸಿಗಾಳಿಗೆ ವೃದ್ಧರು ಹಾಗೂ ಮಕ್ಕಳು ಹೈರಾಣಾಗಿದ್ದು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ರಾತ್ರಿ ಅಂಗಳ ಹಾಗೂ ಮಾಳಿಗೆಗಳನ್ನು ಆಶ್ರಯಿಸುವ ಸ್ಥಿತಿ ನಿರ್ಮಾಣವಾಗಿದೆ.

ಆರೋಗ್ಯ ಇಲಾಖೆಯಿಂದ ಮುಂಜಾಗೃತ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಬಿಸಿಲಿನಿಂದ ರಕ್ಷಣೆ ಪಡೆಯುವುದರ ಜೊತೆಗೆ ಹವಾಮಾನ ಬದಲಾವಣೆಯಿಂದಾಗಿ ಉಂಟಾಗುವ ಕಾಯಿಲೆಗಳ ಕುರಿತು ಮುಂಜಾಗೃತೆ ವಹಿಸಲು ಸಲಹೆ ನೀಡಲಾಗುತ್ತಿದೆ. ಮಧ್ಯಾಹ್ನ ಹೊರಬರದಂತೆ, ಬಂದರೂ ಕೊಡೆ ಆಶ್ರಯಿಸುವಂತೆ ತಿಳಿಸಲಾಗುತ್ತಿದೆ. ತಾಪಮಾನ ಇನ್ನೂ ಹೆಚ್ಚಾಗಲಿದ್ದು, ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net