

ಬೆಂಗಳೂರು: ರಾಜ್ಯದಲ್ಲಿ ವಹಿವಾಟು ನಡೆಸುವ ರಾಜ್ಯದ ಎಲ್ಲ ಸರ್ಕಾರಿ, ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಗಳು ನಾಮಫಲಕದಲ್ಲಿ ಶೇ.60 ಕನ್ನಡ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ)ಅಧಿನಿಯಮ 2024 ರ 17ನೇ ಪ್ರಕರಣದಲ್ಲಿನ 6ನೇ ಉಪಪ್ರಕರಣದ ಅನ್ವ್ವಯ ಇನ್ನು ಮುಂದೆ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸುವುದು ರಾಜ್ಯಾದ್ಯಂತ ಕಡ್ಡಾಯವಾಗಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್ಗಳು, ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಪ್ರಾಧಿಕಾರಗಳ ಅನುಮೋದನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ, ವ್ಯಾಪಾರ ಸಂಸ್ಥೆಗಳು, ಪ್ರಯೋಗಾಲಯಗಳು, ಮನರಂಜನ ಕೇಂದ್ರ, ಹೋಟೆಲ್ ಮುಂತಾದವುಗಳ ಹೆಸರುಗಳನ್ನು ಪ್ರದರ್ಶಿಸಲು ನಾಮಫಲಕದ ಮೇಲ್ಭಾಗದಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯವಾಗಿ ಇರಬೇಕು.
ಉಳಿದಂತೆ ಕನ್ನಡದ ಹೊರತಾಗಿ ಬೇರೊಂದು ಭಾಷೆೆಯನ್ನು ನಾಮಫಲಕದಲ್ಲಿ ಬಳಸಲು ಅಪೇಕ್ಷಿಸಿದರೆ ಕನ್ನಡ ಭಾಷೆಯ ಬಳಕೆಯ ನಂತರ, ಇತರೆ ಭಾಷೆಯನ್ನು ಶೇ. 40 ರಷ್ಟು ಬಳಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ಹೊಸ ಆದೇಶದ ಪ್ರಕಾರ ನಾಮಫಲಕಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು ಎಂಬುದಾಗಿದೆ.
ರಾಜ್ಯಾದ್ಯಂತ ಪ್ರಸ್ತುತ ಕೆಲವು ಅಂಗಡಿ ಮಾಲೀಕರು, ವ್ಯಾಪಾರ ಸಂಸ್ಥೆಗಳು, ಸಾರ್ವಜನಿಕರು ನಾಮಫಲಕಗಳಲ್ಲಿ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬಳಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸರ್ಕಾರಕ್ಕೆ ಮತ್ತು ಪ್ರಾಧಿಕಾರಕ್ಕೆ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಡ್ಡಾಯವಾಗಿ, ತಪ್ಪಿಲ್ಲದೆ ಸರಿಯಾದ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಿದೆ.
ತಪ್ಪಿಲ್ಲದಂತೆ ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸಲು ಸಹಾಯದ ಅಗತ್ಯವಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಾಯ ಮತ್ತು ಮಾರ್ಗದರ್ಶನ ಮಾಡಲು ಸಿದ್ಧವಿದ್ದು, ದೂ: 080-22286773 ಅಥವಾ 22256365 ಈ ಸಂಖ್ಯೆಗೆ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಸಂಪರ್ಕಿಸಬಹುದು. ಅಥವಾ ಇಮೇಲ್ chairman.kanpra@gmail.comಮತ್ತು secretary.kanpra@gmail.com ಗೆ ಸಂಪರ್ಕಿಸಬಹುದು ಎಂದು ಪ್ರಾಧಿಕಾರವು ತಿಳಿಸಿದೆ.