ಅಪ್ಪನಂತೆ ಮಗಳು… ಜನರಿಂದ ಭೇಷ್ ಎನ್ನಿಸಿಕೊಂಡ ಪೊಲೀಸ್ ಪುತ್ರಿ…!

Police Daughter
Published on

ಶಿವಮೊಗ್ಗ: ಅಪ್ಪನಂತೆ ಮಗಳು ಎಂಬ ಮಾತಿಗೆ ಸಾಕ್ಷಿಯೆಂಬಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಪ್ಪ ಪೊಲೀಸ್. ಮಗಳು ನಾಲ್ಕನೇ ತರಗತಿ ವಿದ್ಯಾರ್ಥಿನಿ. ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ಪರ್ಸ್​ ಸಿಕ್ಕಿದೆ. ಈ ವೇಳೆ ಬಾಲಕಿ ಕೂಡಲೇ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ.

ವಿದ್ಯಾರ್ಥಿನಿ ನಾಗಲಕ್ಷ್ಮೀ ತಂದೆ ನಾಗರಾಜಪ್ಪ ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಹೆಡ್​ ಕಾನ್​​ಸ್ಟೇಬಲ್. ದಾರಿ ಮಧ್ಯೆ ಪರ್ಸ್​ ಬಿದ್ದು ಸಿಕ್ಕುತ್ತಿದ್ದಂತೆ, ಕೈಗೆತ್ತಿಕೊಂಡು ಮನೆಗೆ ಬಂದಿದ್ದಾಳೆ. ನಂತರ ಅಮ್ಮನ ಸಹಾಯದಿಂದ ಬೆಂಗಳೂರಿನಲ್ಲಿದ್ದ ಅಪ್ಪನಿಗೆ ಕರೆ ಮಾಡಿ, ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಪೊಲೀಸ್ ಕೆಲಸದಲ್ಲಿದ್ದ ನಾಗರಾಜಪ್ಪ, ತನ್ನ ಅನುಭವದಂತೆ ಪರ್ಸ್​ನ ಒಳಗೆ ಏನೆಲ್ಲಾ ಇದೆ ಪರೀಕ್ಷಿಸಲು ಹೇಳಿದ್ದಾರೆ. ಈ ವೇಳೆ ಪರ್ಸ್​ನಲ್ಲಿ ಗೌರಿ ಎಂಬ ಹೆಸರು ಬರೆದಿರುವ ಸ್ಕೂಲ್ ಫೀಸ್ ರಿಸಿಪ್ಟ್ ಸಿಕ್ಕಿದೆ. ಇದರ ಸಹಾಯದಿಂದ ಸೈಂಟ್ ಜೋಸೆಫ್ ಸ್ಕೂಲಿಗೆ ಕರೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿ ಗೌರಿಯ ಪೋಷಕರಾದ ಮಂಜುಳಾ ಎಂಬರಿಗೆ ಕರೆ ಮಾಡಿ ಕಳೆದುಕೊಂಡಿದ್ದ ಪರ್ಸ್ ಸಿಕ್ಕಿರುವ ಬಗ್ಗೆ ಪೊಲೀಸ್​ ನಾಗರಾಜಪ್ಪ ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ದಾರಿ ಮಧ್ಯೆ ಸಿಕ್ಕಿದ ಪರ್ಸ್​​ನಲ್ಲಿ ಮೂರು ಹೆಲ್ತ್ ಕಾರ್ಡ್, ಎರಡು ಎಟಿಎಂ ಕಾರ್ಡ್ ಹಾಗೂ 2500 ರೂ. ಹಣವಿತ್ತೆಂದು ಪೊಲೀಸ್ ನಾಗರಾಜಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net