

ಹಾವೇರಿ: ರಮ್ಮಿ ಆಟ ವಾಡಿದರೆ 200 ರೂ.ಗೆ 300 ರೂ. ಕೊಡುವುದಾಗಿ ನಂಬಿಸಿ ಸಿಆರ್‌ಪಿಎಫ್ ಯೋಧನ ಖಾತೆಯಿಂದ ಬರೋಬ್ಬರಿ 70.52 ಲಕ್ಷ ರೂ. ಬೇರೆ ಖಾತೆಗೆ ಹಾಕಿಸಿಕೊಂಡು ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದ ಶಿವಾನಂದ ಈರಪ್ಪ ಜವಳಿ (36) ಮೋಸ ಹೋದವರು.
ಇವರು ಸಿಆರ್‌ಪಿಎಫ್‌ನಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2021 ಜನೇವರಿ 1ರಿಂದ 2023 ಮಾರ್ಚ್ 23ರವರೆಗೆ ತಮ್ಮ ಮೊಬೈಲ್‌ನ ಫೆಸ್‌ಬುಕ್‌ನಲ್ಲಿ ಬರುವ ರಮ್ಮಿ ಆಟವಾಡಲು ಲಾಗಿನ್ ಮಾಡಿಕೊಂಡಿದ್ದಾರೆ. ಅದರಲ್ಲಿ 200 ರೂ. ರಿಚಾರ್ಜ್ ಮಾಡಿದರೆ 300 ರೂ. ಲಾಭಾಂಶವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ಹೇಳಿ ಈತನ ಬ್ಯಾಂಕ್ ಖಾತೆಯ ಮಾಹಿತಿ ಪಡೆದ ಖದೀಮರು 70.52 ಲಕ್ಷ ರೂ. ಪೇಕ್ ಗೇಮ್ ವ್ಯಾಲೆಟ್‌ಗಳಿಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.