

ಬೆಂಗಳೂರು: ಶ್ರೀಮತಿ ವಿದುಷಿ|| ಸವಿತಾ ಡಿ ಎನ್ ಸಂಸ್ಥಾಪಕಿ ಮತ್ತು ನಿರ್ದೇಶಕರಾಗಿರುವ "ಮ್ಯಾತ್ ಮೇಟ್ ಟ್ಯೂಷನ್ ಸೆಂಟರ್ "ನಿಂದ ನ.26ರಂದು ಮಧ್ಯಾಹ್ನ 3 ರಿಂದ ಸಂಜೆ 8ರವರೆಗೆ "ಆಹಾರ ಮೇಳ"ವನ್ನು "ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ", ನ್ಯಾಯಾಂಗ ಬಡಾವಣೆ, ಜಿಕೆವಿಕೆ ಪೋಸ್ಟ್ನಲ್ಲಿ ಆಯೋಜಿಸಲಾಗಿತ್ತು
"ದೈನಂದಿಕ ಜೀವನದಲ್ಲಿ ಗಣಿತ' ಎಂಬ ಮೌಲ್ಯವನ್ನು ತುಂಬಲು ಸ್ಥಳದಲ್ಲಿಯೇ ತಯಾರಿಸಿದ ವಿವಿಧ ಖಾದ್ಯಗಳನ್ನು ಮಕ್ಕಳು ಬಹಳ ಸಂತೋಷ ಹಾಗೂ ಹುಮ್ಮಸ್ಸಿನಿಂದ ಪ್ರಸ್ತುತಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜೆ ಪಿ ನಗರದ ವೈವಿಧ್ಯಮಯ ಖಾದ್ಯಗಳಿಗೆ ಹೆಸರುವಾಸಿಯಾದ "ಜಗಲಿ ತಿಂಡಿ"ಯ ಸಹ ಸಂಸ್ಥಾಪಕಿಯಾದಂತಹ ಶ್ರೀಮತಿ ಪೂರ್ಣಿಮಾ ಕೆ ಉಪಸ್ಥಿತರಿದ್ದರು
ತಮ್ಮ 74ನೇ ವಯಸ್ಸಿನಲ್ಲಿ ಪ್ಯಾರಾ ಸೇಲಿಂಗ್ ಮಾಡಿ ಹೆಸರುವಾಸಿಯಾಗಿರುವ ಶ್ರೀಮತಿ ಮಂಜುಳಾಂಬ ಬಿ. ಎಸ್. ರನ್ನು ಸನ್ಮಾನಿಸಲಾಯಿತು. ಮತ್ತೋರ್ವ ಅತಿಥಿಯಾಗಿ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ, ನ್ಯಾಯಾಂಗ ಬಡಾವಣೆಯನ್ನು ಹಲವು ರೀತಿಯಲ್ಲಿ ಸುಧಾರಿಸುತ್ತಿರುವ ಕೆಂಪಣ್ಣನವರೂ ಉಪಸ್ಥಿತರಿದ್ದರು
ಶ್ರೀಮತಿ ಪೂರ್ಣಿಮಾ ಕೆ ರವರು ಚಾಟ್ಸ್ ಎಂಬ ಪದದ ಉಗಮವನ್ನು ಸಂಕ್ಷಿಪ್ತವಾಗಿ ತಿಳಿಸಿ, ಆಹಾರವನ್ನು ವ್ಯರ್ಥ ಮಾಡದೆ , ಸತ್ವ ಭರಿತ ಆಹಾರವನ್ನೇ ಸೇವಿಸಬೇಕೆಂಬ ಕಿವಿ ಮಾತನ್ನು ಹೇಳಿದರು. ಶ್ರೀಮತಿ ಮಂಜುಳಾಂಬರವರು ಮಕ್ಕಳಿಗೆ ಆಶೀರ್ವದಿಸಿ ಅವರೇ ಮಾಡಿದ ಖಾದ್ಯವನ್ನು ಪ್ರಸ್ತುತಪಡಿಸಿದಕ್ಕೆ ಪ್ರಶಂಸಿಸಿದರು.
ಕೆಂಪಣ್ಣನವರು ಮಕ್ಕಳ ಪೋಷಕರ ಮತ್ತು ಶಿಕ್ಷಕಿ ಶ್ರೀಮತಿ ಸವಿತಾ ಡಿ ಎನ್ ರವರ ಅಚ್ಚುಕಟ್ಟಾದ ಸಂಘಟನೆ ಅದರ ಹಿಂದಿನ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕು| ಮಾಧುರಿ ಯವರು ರಂಗಮಂಟಪದ ಕಾರ್ಯಕ್ರಮಕ್ಕೆ ರೂವಾರಿಯಾಗಿದ್ದರು.
ಸ್ವಾರ್ಥದಿಂದ ನಿಸ್ವಾರ್ಥದ ಕಡೆಗೆ ದಾನದ ರೂಪವಾಗಿ ಸ್ವಲ್ಪ ಅಂಶವನ್ನು ಆಶ್ರಮಕ್ಕೆ ಕೊಡುವ ಸಲುವಾಗಿ ಹಾಗೂ ಗಣಿತವೆಂಬ ಕಬ್ಬಿಣದ ಕಡಲೆಯನ್ನು ಮೃದು ಕಡಲೆಯನ್ನಾಗಿ ಮಾರ್ಪಡಿಸಲು ಗಣಿತವನ್ನು ಪ್ರಾಯೋಗಿಕವಾಗಿ "ಖಾದ್ಯ ಮೇಳ'ದ ಮೂಲಕ ಕಲಿಸಿ, ಮಕ್ಕಳ ಕೌಶಲ್ಯವನ್ನು ಹೊರತರಲಾಗಿದೆ. ಒಟ್ಟಿನಲ್ಲಿ ಈ 'ಖಾದ್ಯ ಮೇಳ'ದ ಚಟುವಟಿಕೆಯು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವಲ್ಲಿ ಸಫಲವಾಯಿತು.