ಐದನೇ ವರ್ಷದ ಮಳೆಗಾಲದ ಯಕ್ಷ ತಿರುಗಾಟ ಆರಂಭ

yakshagana
Published on

ಬ್ರಹ್ಮಾವರ: ಮಂದಾರ್ತಿ ಬಳಿಯ ನಡೂರು ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಐದನೇ ವರ್ಷದ ಯಕ್ಷ ತಿರುಗಾಟ ಜುಲೈ 1ರಂದು ಆರಂಭಗೊಂಡಿದೆ ಎಂದು ಮೇಳದ ಭಾಗವತ ಹಾಗೂ ಸಂಚಾಲಕ ಸದಾಶಿವ ಅಮೀನ್ ತಿಳಿಸಿದ್ದಾರೆ.

ಬಾರಾಳಿಮಹಾಗಣಪತಿ ಸನ್ನಿಧಿಯಲ್ಲಿ ಗೆಜ್ಜೆಸೇವೆ ನಡೆಸಿ ಜನ್ನಾಡಿಯಲ್ಲಿ ಪ್ರಥಮ ಆಟ ನಡೆಯಿತು. ಕೊರೊನಾ ಸಮಯದಲ್ಲಿ ಆನ್‌ಲೈನ್ ಮೂಲಕ ಕೇವಲ 10 ಪ್ರದರ್ಶನ ನೀಡಿದ್ದ ತಂಡ ಇದೀಗ ಮಳೆಗಾಲದಲ್ಲಿ 100ಕ್ಕೂ ಹೆಚ್ಚು ಪ್ರದರ್ಶನವನ್ನು ಅಕ್ಟೋಬರ್‌ವರೆಗೆ ನೀಡಲು ಸಜ್ಜಾಗಿದೆ.

ಯಕ್ಷಗಾನ ಕೇವಲ 5 ಜಿಲ್ಲೆಗೆ ಸೀಮಿತವಾದರೂ ಉತ್ತರ ಕರ್ನಾಟಕ, ಹೈದರಾಬಾದ್, ಗೋವಾ, ಮುಂಬೈನಲ್ಲೂ ಪ್ರದರ್ಶನ ನೀಡಲಿದೆ. ಪೌರಾಣಿಕ ಪ್ರಸಂಗಗಳೊಂದಿಗೆ ತುಳುನಾಡಿನ ದೈವ ದೇವರುಗಳ ಮಹಿಮೆ ಸಾರುವ ಶಿವದೂತ ಪಂಜುರ್ಲಿ, ಮಹಾಶಕ್ತಿ ವೀರಭದ್ರ ಪ್ರದರ್ಶನ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾರಿ ಜಗನ್ಮಾತೆ ಶ್ರೀ ವನದುರ್ಗಿ ಎನ್ನುವ ನೂತನ ಪ್ರಸಂಗವನ್ನು ಪ್ರಸಿದ್ಧ ಕಲಾವಿದರೊಂದಿಗೆ ಪ್ರದರ್ಶನ ನೀಡುತ್ತಿರುವುದು ವಿಶೇಷ ಎಂದರು.

ಯಕ್ಷಗಾನ ಕಲಾವಿದರಿಗೆ ಮಳೆಗಾಲದಲ್ಲಿ ಕೆಲಸವಿರುವುದು ವಿರಳ. ಸರ್ಕಾರ ಕಲೆಗೆ ಮತ್ತು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವತ್ತ ಮತ್ತು ಕಲೆಯ ಉಳಿವಿಗೆ ಗಮನ ನೀಡಬೇಕು, ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವೂ ಅಗತ್ಯವಾಗಿದೆ ಎಂದರು. ಕಲಾವಿದ ದಿನಕರ ಕುಂದರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net