ಸಂಭ್ರಮದ ನಂದಳಿಕೆ ಸಿರಿಜಾತ್ರೆ ಸಂಪನ್ನ

blm-3
Published on

ಕಾರ್ಕಳ: ಸಕಲ ಸಿರಿ ಕ್ಷೇತ್ರಗಳ ತವರೂರು ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.

ಬೆಳಗ್ಗೆ ಶ್ರೀಗಂಧದ ರಜತ ಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಚಾವಡಿ ಅರಮನೆಯಲ್ಲಿ ವಿವಿಧ ಕಲಾತಂಡಗಳಿಂದ ಕಲಾ ಪ್ರದರ್ಶನ ನಡೆದು ಬಳಿಕ ಮೆರವಣಿಗೆಯಲ್ಲಿ ಹೆಗ್ಗಡೆಯವರ ಆಗಮನದ ಮೆರವಣಿಗೆ ನಡೆಯಿತು. ಹಾಗೂ ಅಯನೋತ್ಸವ ಬಲಿ, ಕೆರೆದೀಪೋತ್ಸವ, ಕೆರೆ ದೀಪ ಕಟ್ಟೆಪೂಜೆ ಬಳಿಕ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿ ಜಾತ್ರೆ ಪ್ರಾಚೀನ ವಿಧಿ ವೈಭವಗಳು, ಬ್ರಹ್ಮ ಮಂಡಲ ಸೇವೆ, ಬೆಳಗಿನ ಬಲಿ, ಭೂತ ಬಲಿ, ಬಲ್ಲೇಶ್ವರ ಕಟ್ಟೆಪೂಜೆ ಸಹಿತ ವಿವಿಧ ಧಾರ್ಮಿಕ ವಿಧಾನಗಳು ನೆರವೇರಿತು.

ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆದು ಕ್ಷೇತ್ರದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಕ್ಷೇತ್ರ ವ್ಯವಸ್ಥಾಪಕ ಪಿ.ರವಿರಾಜ್ ಭಟ್, ಪ್ರಧಾನ ಅರ್ಚಕ ಹರೀಶ್ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net