

ಕೋಲಾರ: ಆಧುನಿಕ ಯುಗದಲ್ಲಿ ಮನುಷ್ಯರ ದುರಾಸೆಯಿಂದ ಪರಿಸರದ ಮೇಲೆ ಅಕ್ರಮಣ ಮಾಡಿ ಅಮೂಲ್ಯವಾದ ಜೀವನಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಕೋಲಾರ ನಗರಠಾಣೆ ವೃತ್ತ ನಿರೀಕ್ಷಕ ಎಂ.ಸದಾನಂದ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ರೆಸ್ಟ್ಲೆಸ್ ಡೆವಲಪ್ಮೆಂಟ್ ಹಾಗೂ ಗ್ರಾಮ ವಿಕಾಸ ಸಂಯೋಜನೆಯಡಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಮತ್ತು ಗ್ರೀನ್ ವಾರಿಯರ್ಸ್ ಸಹಯೋಗದಲ್ಲಿ ಹವಾಮಾನ ಬದಲಾವಣೆಯಲ್ಲಿ ಯುವಜನರ ಪಾತ್ರ, ಪರಿಸರ ಮತ್ತು ಕಾನೂನು ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲಾ ಜೀವಿಸುತ್ತಿರುವುದು ಪರಿಸರದಿಂದ, ಪರಿಸರ ಸ್ವಚ್ಛತೆ ತುಂಬಾ ಮುಖ್ಯ. ಮನುಷ್ಯನ ದುರಾಸೆಗೆ ಪರಿಸರ ಬಲಿಯಾಗುತ್ತಿದೆ. ಪರಿಸರ ವಿರುದ್ಧ ಹೋಗಬಾರದು. ಒಂದು ವೇಳೆ ಪರಿಸರಕ್ಕೆ ವಿರುದ್ಧವಾದರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಪರಿಸರದ ಮೇಲೆ ಮಾಡುತ್ತಿರುವ ಆಕ್ರಮಣದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ರೋಗರುಜಿನುಗಳು ಹೆಚ್ಚಾಗುತ್ತಿವೆ. ಪ್ಲಾಸ್ಟಿಕ್ ಮತ್ತು ರಸಗೊಬ್ಬರಗಳ ಮಿತಿಮೀರಿದ ಪರಿಣಾಮ ಆರೋಗ್ಯ ಕೆಡುತ್ತಿದೆ. ಇನ್ನಾದರೂ ಪರಿಸರ ಉಳಿಸಲು ಮೊದಲು ಜಾಗೃತರಾಗಿ ಇತರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಗ್ರಾಮ ವಿಕಾಸ ಸಂಸ್ಥೆಯ ಎಂ.ವಿ.ಎನ್.ರಾವ್ ಮಾತನಾಡಿ, ಮುಂದಿನ ಪೀಳಿಗೆ ಉಳಿಯಬೇಕಾದರೆ ಹವಾಮಾನದ ಬಗ್ಗೆ ತಿಳಿವಳಿಕೆ ಮುಖ್ಯ. ಪ್ಲಾಸ್ಟಿಕ್ ನಿಷೇಧಿಸುವುದು ಒಂದು ಭಾಗ, ಈ ನಿಟ್ಟಿನಲ್ಲಿ ಈ ವಿಷಯವನ್ನು ಹಗುರವಾಗಿ ಪರಿಗಣಿಸದೆ ನಾವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು.
500 ಕೋಟಿ ಸಸಿ ನೆಡುವ ಜವಾಬ್ದಾರಿ
ಜಿಲ್ಲೆಯ 1 ಲಕ್ಷ ಯುವಕರೊಂದಿಗೆ ಕೆಲಸ ಮಾಡುವ ಗುರಿ ಹೊಂದಿದ್ದೇವೆ. ಕೋಲಾರ ಜಿಲ್ಲೆ ಆಂದೋಲನದ ಬೀಡು, ಇಲ್ಲಿಂದ ಪ್ರಾರಂಭವಾದ ಯಾವುದೇ ಕೆಲಸ ಕಾರ್ಯಗಳು ಆಂದೋಲನಗಳು ಯಶಸ್ವಿಯಾಗಿ ನಡೆದಿರುವ ಅನೇಕ ಉದಾಹರಣೆಗಳಿವೆ. ಈ ಹಿನ್ನಲೆಯಲ್ಲಿ ದೇಶ ಉಳಿಯಬೇಕಾದರೆ 500 ಕೋಟಿ ಸಸಿಗಳನ್ನು ನೆಟ್ಟು ಕಾಪಾಡುವ ಜವಾಬ್ದಾರಿ ನಮ್ಮದಾದಾಗ ಮಾತ್ರ ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆ ಸಾಧ್ಯ ಎಂದರು.
ಇಂದಿನ ಹವಾಮಾನ ಏರುಪೇರಿಗೆ ಬದಲಾಗುತ್ತಿರುವ ಕೃಷಿ ಪದ್ಧತಿ ಒಂದು ಕಾರಣವಾದರೆ ಮರಗಳ ಸಂಖ್ಯೆ ಕಡಿಮೆ ಆಗುತ್ತಿರುವುದು, ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿ ಭೂಮಿಗೆ ಸೇರುತ್ತಿರುವುದು. ಪ್ರತಿದಿನ ನಾವು ಬೆಳಗ್ಗಿನಿಂದ ಮಲಗುವವರೆಗೂ ಮಾಡುವ ಕೆಲಸಗಳಲ್ಲಿ ಯಾವ ಕೆಲಸದಿಂದ ಪರಿಸರ ಬದಲಾವಣೆಗೆ ಕಾರಣವಾಗುತ್ತಿದೆ ಎಂಬುವುದನ್ನು ಯೋಚಿಸಿದರೆ ಹವಾಮಾನ ಬದಲಾವಣೆಯಲ್ಲಿ ನಮ್ಮ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಚ್.ವಿ.ಸುಬ್ರಹ್ಮಣಿ ಮಾತನಾಡಿ, ವಿಶ್ವಸಂಸ್ಥೆಯು ಮನುಷ್ಯನಿಂದ ಪರಿಸರದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಯಲು 1972ರಲ್ಲಿ ನೈಸರ್ಗಿಕ ಸಂಪನ್ಮೂಗಳನ್ನು ಉಳಿಸಲು ಪರಿಸರ ಸಂರಕ್ಷಣೆಗೆ ಕಾನೂನು ಜಾರಿಗೆ ತರಲಾಯಿತು ಎಂದು ವಿವರಿಸಿದರು.
ಗ್ರಾಮ ವಿಕಾಸ ಸಂಸ್ಥೆಯ ಎಂ.ವಿ.ಎನ್.ರಾವ್, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸಂಸ್ಥೆಯ ಅಧ್ಯಕ್ಷ ಹೂಹಳ್ಳಿ ನಾಗರಾಜ್, ದೀಪಾ, ಶ್ಯಾಮಲಾ, ಗ್ರೀನ್ ವಾರಿಯರ್ಸ್ ಮುಖ್ಯಸ್ಥರಾದ ಕೀರ್ತಿ, ನಂದಿನಿ, ಗುಣಶ್ರೀ, ಕಾವ್ಯಾ, ಅನುಷಾ, ಚೈತ್ರಾ, ಕೆ.ಜಿ.ಎಫ್ ಹರೀಶ್, ಸೋಮು, ದೇವು ಉಪಸ್ಥಿತರಿದ್ದರು.