

ಹೊನ್ನಾವರ: ಪರಿಸರವಿಲ್ಲದೇ ಮನುಷ್ಯನ ಜೀವನ ಅಸಾಧ್ಯ. ಹಸಿರೇ ಉಸಿರು ಎಂಬುದು ಕೇವಲ ಮಾತಿನಲ್ಲಷ್ಟೇ ಆಗದೇ ಕಾರ್ಯದಲ್ಲಿ ಆಗಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊದಲನೇ ತರಗತಿಯಿಂದಲೇ ಪರಿಸರ ರಕ್ಷಣೆಯ ಪಾಠ ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹೇಳಿದರು.
ಅರೇಅಂಗಡಿಯ ಎಸ್ಎಸ್ಎಸ್ಕೆಪಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಮಾತೃ ಫೌಂಡೇಷನ್ ಬೆಂಗಳೂರು ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಸಹಸ್ರಾರು ವೃಕ್ಷಾರೋಪಣ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂಬುದನ್ನು ಸಂವಿಧಾನದ ಪರಿಚ್ಛೇದ 55ಎ ನಲ್ಲಿ ಹೇಳಲಾಗಿದೆ. ಇದು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ. ನಾವೆಲ್ಲರೂ ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮೆಲ್ಲರದು. ಪರಿಸರ ದಿನಾಚರಣೆ ಜೂ. 5ರಂದು ಮಾತ್ರ ಆಚರಿಸದೇ ವರ್ಷವಿಡೀ ನಡೆಯುವಂತಾಗಬೇಕು ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪರಿಸರ, ಜೀವವೈವಿಧ್ಯ, ಅವುಗಳ ಅಗತ್ಯ ಮತ್ತು ರಕ್ಷಣೆ ಕುರಿತು ಹೇಳಬೇಕು. ಇದರಿಂದ ಭವಿಷ್ಯ ಉಜ್ವಲವಾಗುವುದು ಎಂದರು.
ನ್ಯಾ. ಅನಂತ ರಾಮನಾಥ ಹೆಗಡೆ ಮಾತನಾಡಿ, ಗಿಡ ನೆಡುವುದು ಒಂದು ಹೆಜ್ಜೆಯಾದರೆ, ಅದರ ಪಾಲನೆ ಮಹತ್ವದ ಹೆಜ್ಜೆಯಾಗಿದೆ. ಹೊನ್ನಾವರದ ವಕೀಲರು ಮಾಡಿದ ಈ ಕೆಲಸ ಉಳಿದೆಲ್ಲರಿಗೂ ಪ್ರೇರಣೆಯಾಗಬೇಕು. ಈ ಜಿಲ್ಲೆ ಹಸಿರು ಜಿಲ್ಲೆಯಾಗಲಿ, ಕರ್ನಾಟಕ ಹಸಿರು ರಾಜ್ಯವಾಗಲಿ, ಭಾರತ ಹಸಿರು ದೇಶವಾಗಲಿ ಎಂದರು.
ನ್ಯಾ. ಸಿ.ಎಂ. ಜೋಶಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದೆ. ನಾನು ಪ್ಲಾಸ್ಟಿಕ್ನಲ್ಲಿ ಆಹಾರ ಸೇವಿಸುವುದಿಲ್ಲ. ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧ’ ಎಂಬ ಮನೋಭಾವನೆ ಎಲ್ಲರೂ ತಾಳಬೇಕಿದೆ ಎಂದರು.
ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮಾತನಾಡಿ, ಪ್ರಕೃತಿಯು ನಮ್ಮ ಎರಡನೇ ತಾಯಿ ಇದ್ದಂತೆ. ಹಸಿರು ನಿಂತರೆ ಉಸಿರು ನಿಲ್ಲುವುದು. ಪ್ರಕೃತಿಯು ಉಸಿರು ನಿಲ್ಲಸಿದಾಗ ನಮ್ಮ ಉಸಿರೂ ನಿಲ್ಲುತ್ತದೆ. ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಿ ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ. ಮಾತನಾಡಿ, ನಮ್ಮ ಜಿಲ್ಲೆಯ ಜನಜೀವನವು ಅರಣ್ಯದೊಂದಿಗೆ ಬೆಸೆದುಕೊಂಡಿದೆ. ಈ ಜಿಲ್ಲೆಗೆ ದೊಡ್ಡ ದೊಡ್ಡ ಯೋಜನೆಗಳು ಬಂದಿವೆ. ಇದರಿಂದ ಅರಣ್ಯಭೂಮಿಗೆ ಹಾನಿಯಾಗಿದೆ. ಪರಿಸರ ಸಂರಕ್ಷಣೆ ನ್ಯಾಯಾಂಗವು ಸಹಕರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.</p><p>ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಭಂಡಾರಿ ಮಾತನಾಡಿ, ಹೊನ್ನಾವರ ನ್ಯಾಯಾಲಯಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರು ಮಾಡಬೇಕು ಎಂದು ಕೋರಿದರು.
ನ್ಯಾಯಮೂರ್ತಿ ಸಚಿನ್ ಶಂಕರ ಮಗದುಮ್ , ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ., ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ಆರ್. ನಾಯ್ಕ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ಅಧ್ಯಕ್ಷ ಮೊಹಮ್ಮದ ತಬ್ರೇಜ್ ಅಲಂ ಶರೀಫ್, ಉ.ಕ. ಜಿಲ್ಲಾ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್., ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ., ಪೋಲಿಸ್ ಅಧೀಕ್ಷಕ ದೀಪನ್ ಎಂ.ಎನ್., ಉಪ ಅರಣ್ಯಾಧಿಕಾರಿ ಯೋಗೀಶ್ ಸಿ.ಕೆ., ಹೈಕೋರ್ಟ್ನ ಹಿರಿಯ ಪದಾಂಕಿತ ವಕೀಲರಾದ ಜಯಕುಮಾರ್ ಪಾಟಿಲ್, ಜಿ.ಕೆ. ಭಟ್, ಎಂ.ಎಸ್. ಭಾಗವತ್, ಗಣಪತಿ ಹೆಗಡೆ ತಲೆಕೆರೆ, ಆರ್.ಎಸ್. ರವಿ, ಹಿರಿಯ ವಕೀಲರಾದ ನಾಗೇಂದ್ರ ನಾಯ್ಕ, ಜಿ.ಎ. ಶ್ರೀಕಂಠೇಗೌಡ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವಕೀಲ ಸತೀಶ ಭಟ್ಟ ಉಳಗೆರೆ ಸ್ವಾಗತಿಸಿದರು. ಹೈಕೋರ್ಟ್ನ ಹಿರಿಯ ಪದಾಂಕಿತ ವಕೀಲರಾದ ವಿಘ್ನೕಶ್ವರ ಎನ್. ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ವಕೀಲ ನಾಗರಾಜ ಹೆಗಡೆ ವಂದಿಸಿದರು.
ವಿಶ್ವ ಪರಿಸರ ದಿನಾಚರಣೆಯ ಸಹಸ್ರಾರು ವೃಕ್ಷಾರೋಪಣ ಅಭಿಯಾನದ ಅಂಗವಾಗಿ ತಾಲೂಕಿನ ಸಾಲಕೋಡ ಮತ್ತು ಅರೇಅಂಗಡಿ ಭೂಪ್ರದೇಶದಲ್ಲಿ ಗಿಡಗಳನ್ನು ಗಣ್ಯರು ನೆಟ್ಟರು.
ಪ್ರಕೃತಿ ನಾಶ ಆದರೆ ಪ್ರಪಂಚ ನಾಶ ಆಗುತ್ತದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಶೇ. 80ರಷ್ಟು ಅರಣ್ಯ ಇತ್ತು. ರಾಜಕಾರಣಿಗಳಿಗೆ ಮತ್ತು ಸ್ವಾರ್ಥಿಗಳಿಗೆ ಬಲಿಯಾಗಿ ಇಂದು ಇಲ್ಲಿ ಅರಣ್ಯದ ಪ್ರಮಾಣ ಕಡಿಮೆಯಾಗಿದೆ. ಭ್ರಷ್ಟಾಚಾರ ದೊಡ್ಡ ಪಿಡುಗು. ಇದನ್ನು ಕಿತ್ತು ಹಾಕಲು ಎಲ್ಲರ ಸಹಕಾರ ಬೇಕು. | ನ್ಯಾ. ಬಿ. ವೀರಪ್ಪ, ಉಪ ಲೋಕಾಯುಕ್ತ ಕನ್ನಡದಲ್ಲಿ ಮಾತನಾಡಿದ ಪಂಜಾಬ್ ಮೂಲದ ನ್ಯಾಯಮೂರ್ತಿಮಾತೃ ಭಾಷೆಯ ಬಗ್ಗೆ ವಕೀಲರಿಗೆ ಅಭಿಮಾನ ಇರಬೇಕು. ನ್ಯಾಯಾಲಯದಲ್ಲಿ ಇಂಗ್ಲಿಷ್ ಬರುವುದಿಲ್ಲ ಎಂಬ ಕೀಳರಿಮೆ ಬೇಡ. ಕನ್ನಡದಲ್ಲಿ ವಾದ ಮಾಡಿ ಎಂದ ಪಂಜಾಬ್ ಮೂಲದ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರು, ಕನ್ನಡದಲ್ಲಿಯೇ ಸ್ಪಷ್ಟವಾಗಿ ಮಾತನಾಡಿದ್ದು ವಿಶೇಷವಾಗಿತ್ತು.ಅಡೆತಡೆ ಮೀರಿ ಕಾರ್ಯಕ್ರಮಕ್ಕೆ ಬಂದ ಲೋಕಾಯುಕ್ತರುತಾಲೂಕಿನ ಸಾಲ್ಕೋಡ ಅರೆಅಂಗಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಹಸ್ರಾರು ವೃಕ್ಷಾರೋಪಣ ಅಭಿಯಾನದ ಕಾರ್ಯಕ್ರಮದಲ್ಲಿ ಹೈಕೋರ್ಟ್ನ ಐವರು ನ್ಯಾಯಮೂರ್ತಿಗಳು ಮತ್ತು ಇಬ್ಬರು ಉಪ ಲೋಕಾಯುಕ್ತರು ಪಾಲ್ಗೊಂಡು ಪರಿಸರದ ಮಹತ್ವ ಮತ್ತು ಸಂರಕ್ಷಣೆಯ ಅಗತ್ಯತೆ ಬಗ್ಗೆ ಸಂದೇಶ ಸಾರಿದರು.ಬೆಂಗಳೂರಿನಿಂದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್. ಫಣೀಂದ್ರ ಮತ್ತು ನ್ಯಾ. ಬಿ. ವೀರಪ್ಪ ಅವರಿದ್ದ ರೈಲು ಮಾರ್ಗಮಧ್ಯೆ ಸಕಲೇಶಪುರ ಬಳಿ ಗುಡ್ಡ ಕುಸಿತದಿಂದಾಗಿ ಸ್ಥಗಿತಗೊಂಡಿತು. ರೈಲು ಪ್ರಯಾಣ ರದ್ದುಗೊಂಡರೂ ನಿಲ್ದಾಣದಲ್ಲಿಯೇ ಊಟ ಮಾಡಿ, ಸಾಮಾನ್ಯರಂತೆ ಹೊನ್ನಾವರಕ್ಕೆ ಬಸ್ನಲ್ಲಿ ಬಂದು ಪರಿಸರದ ಮೇಲಿನ ತಮ್ಮ ಕಾಳಜಿ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಅಪರೂಪದ ಪ್ರಾಣಿ ಪ್ರಬೇಧವಾದ ಸಿಂಗಳೀಕ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು. ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಪರಿಸರ ಜಾಗೃತಿಗೆ ಸಹಕರಿಸಿದರು.