ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 19,300ಕ್ಕೇರಿಕೆ

Turkey
Published on

ಅಂಕಾರ: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 19,300 ದಾಟಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನಾಲ್ಕನೇ ದಿನವಾದ ಗುರುವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಆದರೆ ರಕ್ತ ಹೆಪು್ಪಗಟ್ಟುವ ಚಳಿ ಮತ್ತು ಹಿಮದ ಮಳೆಯಿಂದಾಗಿ ನೆಲ ಕಚ್ಚಿರುವ ಸಹಸ್ರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆ ಹಚ್ಚುವ, ರಕ್ಷಿಸುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಕಂಪನದಲ್ಲಿ ಬದುಕುಳಿದವರು ಆಹಾರ ಮತ್ತು ಆಶ್ರಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಮನಸು ಕಲಕುವಂತಿದೆ. ಸರ್ಕಾರದ ಪರಿಹಾರ ಕಾರ್ಯಕ್ಕೆ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸರ್ಕಾರ ಪರಿಹಾರವನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಹವಾಮಾನ ಪರಿಸ್ಥಿತಿಯಿಂದಾಗಿ ಪರಿಹಾರ ಕಾರ್ಯಕ್ಕೆ ತೊಡಕಾಗಿರುವುದನ್ನು ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎಡೋಗನ್ ಒಪ್ಪಿಕೊಂಡಿದ್ದಾರೆ.

ಇಂಡೋನೇಷ್ಯಾದಲ್ಲೂ ಭೂಕಂಪ

ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಪಪುವಾದಲ್ಲಿ ಗುರುವಾರ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಪಪುವಾದ ಉತ್ತರ ಕರಾವಳಿ ಪ್ರದೇಶದಲ್ಲಿ ಕಂಪನ ಉಂಟಾಗಿದ್ದು, ಅದರ ತೀವ್ರತೆಗೆ ತೇಲುವ ರೆಸ್ಟೋರೆಂಟ್ ಸಮುದ್ರಕ್ಕೆ ಕುಸಿದು ಅದರಲ್ಲಿದ್ದ 4 ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನಕ್ಕೆ ಮನೆ, ಕಟ್ಟಡ, ಆಸ್ಪತ್ರೆಗಳು ಹಾನಿಗೊಳಗಾಗಿವೆ. ಜನವರಿಯಿಂದ ಪಪುವಾ ಸರಣಿ ಪ್ರಬಲ ಭೂಕಂಪನದಿಂದ ನಡುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net