

ಬೆಂಗಳೂರು: ಇದೇ ಶುಕ್ರವಾರ ಬಿಡುಗಡೆಯಾಗಿ ಎಲ್ಲೆಡೆ ಒಳ್ಳೇ ಪ್ರದರ್ಶನ ಕಾಣುತ್ತಿರುವ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾಕ್ಕೆ ಇದೀಗ ವಿವಾದ ಸುತ್ತಿಕೊಂಡಿದೆ. ಚಿತ್ರದ ದೃಶ್ಯವೊಂದರಲ್ಲಿ ಬ್ರಾಹ್ಮಣನ ಹೆಗಲ ಮೇಲೆ ಕಾಲಿಟ್ಟು ಕೀಳಾಗಿ ಮಾತನಾಡುವ ಸಂಭಾಷಣೆ ಇದೆ. ಆ ದೃಶ್ಯವೇ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕೂಡಲೇ ಆ ದೃಶ್ಯವನ್ನು ತೆಗೆದು, ಅವಹೇಳನಕಾರಿ ಮಾತುಗಳನ್ನು ತೆಗೆಯಬೇಕೆಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ವಿವಾದ ಜೋರಾಗುತ್ತಿದ್ದಂತೆ, ವಿಜಯವಾಣಿಗೆ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮನರಂಜನೆ ನಮ್ಮ ಮುಖ್ಯ ಉದ್ದೇಶ. ಆದರೆ, ಆ ದೃಶ್ಯದಿಂದ ಸಮುದಾಯವೊಂದಕ್ಕೆ ಬೇಸರವಾಗಿದ್ದರೆ, ಆ ದೃಶ್ಯವನ್ನು ನಾನು ತೆಗೆಯುತ್ತೇನೆ’ ಎಂದಿದ್ದಾರೆ.
ಯಾರನ್ನೂ ನೋಯಿಸುವ ಉದ್ದೇಶ ನಮ್ಮದಲ್ಲ. ಸಂದರ್ಭಕ್ಕೆ ತಕ್ಕಂತೆ ಆ ದೃಶ್ಯ ಸೃಷ್ಟಿಸಲಾಗಿತ್ತು. ಇದೀಗ ಆ ದೃಶ್ಯದಿಂದ ಸಮುದಾಯಕ್ಕೆ ಬೇಸರವಾಗಿದೆ ಎಂಬುದು ಗೊತ್ತಾಯಿತು. ಈಗಾಗಲೇ ಈ ಸಂಬಂಧ ಕ್ಷಮೆ ಕೇಳಿದ್ದೇನೆ. ಕೂಡಲೇ ಆ ದೃಶ್ಯಕ್ಕೆ ಕತ್ತರಿ ಹಾಕಲಾಗುವುದು.
| ನಂದಕಿಶೋರ ನಿರ್ದೇಶಕ