ಇಂದಿನಿಂದ ಫಿಫಾ ಕ್ಲಬ್​ ವಿಶ್ವಕಪ್​: ಅಮೆರಿಕ ಆತಿಥ್ಯ, ಒಟ್ಟು ಬಹುಮಾನ ಮೊತ್ತ 8,607 ಕೋಟಿ ರೂ.

blank

ಮಿಯಾಮಿ: ಪ್ರತಿಷ್ಠಿತ ಫುಟ್​ಬಾಲ್​ ಕ್ಲಬ್​ಗಳ ಫಿಫಾ ಕ್ಲಬ್​ ವಿಶ್ವಕಪ್​ ಹೊಸ ಸ್ವರೂಪದೊಂದಿಗೆ 21ನೇ ಆವೃತ್ತಿಗೆ ಸಜ್ಜಾಗಿದೆ. 2000ದಿಂದ 2023ರವರೆಗೆ ಪ್ರತಿ ವರ್ಷ ನಡೆಯುತ್ತ ಬಂದಿದ್ದ ಟೂರ್ನಿಯಲ್ಲಿ ಈ ಹಿಂದೆ ಗರಿಷ್ಠ 7 ತಂಡಗಳಷ್ಟೇ ಆಡುತ್ತಿದ್ದವು. ಈ ಬಾರಿ ತಂಡಗಳ ಸಂಖ್ಯೆಯನ್ನು 32ಕ್ಕೆ ವಿಸ್ತರಿಸಲಾಗಿದ್ದು, ಜುಲೈ 13ರವರೆಗೆ ಅಮೆರಿಕದ 12 ತಾಣಗಳಲ್ಲಿ ಒಟ್ಟು 63 ಪಂದ್ಯಗಳು ನಡೆಯಲಿವೆ. ಶನಿವಾರ (ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 5.30) ಮಿಯಾಮಿಯ ಹಾರ್ಡ್​ರಾಕ್​ ಸ್ಟೇಡಿಯಂನಲ್ಲಿ ಆತಿಥೇಯ ದೇಶದ ಇಂಟರ್​ ಮಿಯಾಮಿ ಮತ್ತು ಈಜಿಪ್ಟ್​ನ ಅಲ್​ ಅಹ್ಲಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಯುರೋಪ್​ನಿಂದ ಗರಿಷ್ಠ 12 ಕ್ಲಬ್​ಗಳು ಕಣಕ್ಕಿಳಿಯಲಿವೆ. ದಣ ಅಮೆರಿಕದ 6 ಕ್ಲಬ್​ಗಳು, ಏಷ್ಯಾ, ಆಫ್ರಿಕಾ, ಉತ್ತರ-ಕೇಂದ್ರ ಅಮೆರಿಕ-ಕೆರಿಬಿಯನ್​ನ ತಲಾ 4 ಕ್ಲಬ್​ಗಳು, ಓಶಿಯಾನಿಯಾ ಮತ್ತು ಆತಿಥೇಯ ಅಮೆರಿಕದ ಲಿಯೋನೆಲ್​ ಮೆಸ್ಸಿ ಒಳಗೊಂಡ ಇಂಟರ್​ ಮಿಯಾಮಿ ತಂಡಗಳು ಆಡಲಿವೆ. ಕ್ರಿಶ್ಚಿಯಾನೊ ರೊನಾಲ್ಡೊ ಅವರ ತಂಡ (ಅಲ್​ ನಾಸರ್​) ಟೂರ್ನಿಗೆ ಅರ್ಹತೆ ಪಡೆದಿಲ್ಲ. ಪ್ರತಿ ದೇಶದಿಂದ ಗರಿಷ್ಠ 2 ತಂಡಗಳಷ್ಟೇ ಆಡಬಹುದಾದ ಕಾರಣ, ಬಾರ್ಸಿಲೋನಾ, ಲಿವರ್​ಪೂಲ್​, ಮ್ಯಾಂಚೆಸ್ಟರ್​ ಯುನೈಟೆಡ್​, ನಪೋಲಿ, ಎಸಿ ಮಿಲಾನ್​, ಸೆವಿಲ್ಲಾದಂಥ ಪ್ರತಿಷ್ಠಿತ ಕ್ಲಬ್​ಗಳು ಟೂರ್ನಿಗೆ ಅರ್ಹತೆ ಗಳಿಸಿಲ್ಲ. ಮ್ಯಾಂಚೆಸ್ಟರ್​ ಸಿಟಿ ಟೂರ್ನಿಯ ಹಾಲಿ ಚಾಂಪಿಯನ್​ ತಂಡವೆನಿಸಿದೆ. ರಿಯಲ್​ ಮ್ಯಾಡ್ರಿಡ್​ ಗರಿಷ್ಠ 5 ಬಾರಿ ಪ್ರಶಸ್ತಿ ಗೆದ್ದಿರುವುದು ದಾಖಲೆಯಾಗಿದೆ.

ಟೂರ್ನಿಯಲ್ಲಿ ಆಡುವ 32 ತಂಡಗಳನ್ನು ತಲಾ 4ರಂತೆ 8 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್​ ಹಂತಕ್ಕೇರಲಿವೆ. ಜೂನ್​ 28ರಿಂದ ಜುಲೈ 1ರವರೆಗೆ ಪ್ರಿ ಕ್ವಾರ್ಟರ್​ಫೈನಲ್ಸ್​, ಜುಲೈ 4ಮತ್ತು 5ರಂದು ಕ್ವಾರ್ಟರ್​ಫೈನಲ್ಸ್​, ಜುಲೈ 8-9ರಂದು ಸೆಮಿಫೈನಲ್ಸ್​ ಮತ್ತು ಜುಲೈ 13ರಂದು ಫೈನಲ್​ ನಡೆಯಲಿದೆ.

ಟೂರ್ನಿಯ ಒಟ್ಟು ಬಹುಮಾನ ಮೊತ್ತ 8,607 ಕೋಟಿ ರೂ. ಆಗಿದ್ದು, ಇದರಲ್ಲಿ ಅರ್ಧದಷ್ಟು ಮೊತ್ತ ಎಲ್ಲ 32 ತಂಡಗಳಿಗೆ ಆಯಾ ಕ್ಲಬ್​ಗಳ ವರ್ಚಸ್ಸಿನ ಅನ್ವಯ ಹಂಚಿಕೆಯಾಗಲಿದೆ. ವಿಜೇತ ತಂಡ 344 ಕೋಟಿ ರೂ. ಬಹುಮಾನ ಮೊತ್ತ ಸಹಿತ ಒಟ್ಟು 1,076 ಕೋಟಿ ರೂ. ಗಳಿಸಲಿದೆ. ಟೂರ್ನಿಯ ಪ್ರತಿ ಜಯಕ್ಕೆ 17.21 ಕೋಟಿ ರೂ. ಮತ್ತು ಪ್ರತಿ ಡ್ರಾಕ್ಕೆ 8.60 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್​ಅಪ್​ಗೆ 258 ಕೋಟಿ ರೂ. ಸಿಗಲಿದೆ.

ಟೂರ್ನಿಯಲ್ಲಿ ಆಡುವ ಕೆಲ ಪ್ರತಿಷ್ಠಿತ ಕ್ಲಬ್​ಗಳು: ಇಂಟರ್​ ಮಿಯಾಮಿ, ಪ್ಯಾರಿಸ್​ ಸೈಂಟ್​ ಜಮೈರ್ನ್​, ರಿಯಲ್​ ಮ್ಯಾಡ್ರಿಸ್​, ಬೇಯರ್ನ್​ ಮ್ಯೂನಿಚ್​, ಇಂಟರ್​ ಮಿಲಾನ್​, ಮ್ಯಾಂಚೆಸ್ಟರ್​ ಸಿಟಿ, ಚೆಲ್ಸಿಯಾ, ಜುವೆಂಟಸ್​.

 

 

 

 

 

 

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…