'ತಾಯಿ-ಮಗಳು-ಮೊಮ್ಮಗಳು..': ನಡೆದೇ ಹೋಯ್ತು ಕ್ರೈಂ..ಅಜ್ಜಿಯೇ ಆರೋಪಿ

Crime
Published on

ತೆಲಂಗಾಣ: ಮಹಿಳೆಯೋರ್ವಳು ತನ್ನ ಒಂದು ತಿಂಗಳ ಮಗುವನ್ನು ಕರೆದುಕೊಂಡು ಅಮ್ಮನ ಮನೆಗೆ ಬಂದಳು..ನಾಲ್ಕು ದಿನ ಅಮ್ಮ-ಮಗಳ ನಡುವೆ ಬರೀ ಜಗಳ ನಡೆಯಿತು. ಐದನೇ ದಿನ ಆ ಪುಟ್ಟ ಮಗು ಕಾಣೆಯಾಯಿತು. ಅಷ್ಟಕ್ಕೂ ಮಗುವಿಗೆ ಏನಾಯಿತು? ಮುಂದೆ ಓದಿ.

ತೆಲಂಗಾಣದಲ್ಲಿ ಘಟನೆ ನಡೆದಿದೆ. ತವರಿಗೆ ಬಂದ ಮಗಳೊಂದಿಗೆ ಜಗಳ ಆಡಿದ ತಾಯಿ, ಕೊನೆಗೆ ತನ್ನ ಪುಟ್ಟ ಮೊಮ್ಮಗಳನ್ನು 1.10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಇದೀಗ ಪೊಲೀಸರು ಪೆಡ್ಡಪಲ್ಲಿ ಜಿಲ್ಲೆಯ ವ್ಯಕ್ತಿಯೋರ್ವನ ಬಳಿಯಿದ್ದ ನವಜಾತ ಶಿಶುವನ್ನು ಮರಳಿ ಅಮ್ಮನ ಮಡಿಲಿಗೆ ಸೇರಿಸಿದ್ದಾರೆ.

ಆರೋಪಿ ವೃದ್ಧೆಯ ಹೆಸರು ಕನಕಮ್ಮಾ. ತೆಲಂಗಾಣದ ಹುಜುರಾಬಾದ್​​ ಜಿಲ್ಲೆಯ ನಿವಾಸಿ. ಆಕೆಯ ಮಗಳು ಜೆ.ಪದ್ಮಾ ನಾಲ್ಕು ವರ್ಷಗಳ ಹಿಂದೆ ಅಂತರ್ಜಾತಿ ಯುವಕನನ್ನು ವಿವಾಹವಾಗಿದ್ದರು. ಇದರಿಂದಾಗಿ ಕನಕಮ್ಮಂಗೆ ಸಿಕ್ಕಾಪಟೆ ಸಿಟ್ಟಿತ್ತು. ಅಂದಿನಿಂದಲೂ ಪದ್ಮಾ ಅಮ್ಮನ ಮನೆಗೆ ಬಂದಿರಲಿಲ್ಲ. ಆದರೆ ಈಗ ಒಂದು ತಿಂಗಳು ಮಗುವನ್ನು ಕರೆದುಕೊಂಡು, ಪತಿಯೊಂದಿಗೆ ಬಂದಿದ್ದರು. ಆದರೆ ಕನಕಮ್ಮನ ಸಿಟ್ಟು ಇನ್ನೂ ಕರಗಿರಲಿಲ್ಲ. ಮಗಳು ಮನೆಗೆ ಬಂದ ದಿನದಿಂದಲೂ ಆಕೆ ಜಗಳವಾಡುತ್ತಲೇ ಇದ್ದರು.

ಪುಟ್ಟ ಮಗು ಕಾಣೆಯಾಗುತ್ತಿದ್ದಂತೆ ಪದ್ಮಾ ಪೊಲೀಸರಿಗೆ ಕರೆ ಮಾಡಿದರು. ಹಾಗೇ, ತನಗೆ ಅಮ್ಮನ ಮೇಲೆಯೇ ಅನುಮಾನ ಎಂದು ನೇರವಾಗಿಯೇ ದೂರು ನೀಡಿದ್ದರು. ಇದನ್ನೂ ಓದಿ: ಕರೊನಾ ಸುಳ್ಳಿನ ರೋಗ, ಬೇಕಿದ್ರೆ ಸಾಬೀತು ಮಾಡ್ತೇನೆ: ಸರ್ಕಾರ, ವೈದ್ಯರಿಗೆ ಸ್ವಾಮೀಜಿ ಸವಾಲು!

ವಿಚಾರಣೆಯ ನಂತರ ಕನಕಮ್ಮ ಒಪ್ಪಿಕೊಂಡಿದ್ದಾರೆ. ನನಗೆ ಹಣ ಬೇಕಿತ್ತು. ತುಂಬ ಸಾಲ ಮಾಡಿಕೊಂಡಿದ್ದೆ. ಮಗು ಮಾರಾಟ ಮಾಡಿದರೆ ಹಣ ಸಿಗುತ್ತದೆ ಎಂಬುದು ಗೊತ್ತಿತ್ತು. ನನಗೆ ನನ್ನ ಮಗಳ ಬಗ್ಗೆಯೂ ತೀವ್ರ ಅಸಮಾಧಾನ ಇತ್ತು. ಹಾಗಾಗಿಯೇ ಮೊಮ್ಮಗುವನ್ನು ಮಾರಾಟ ಮಾಡಿದೆ ಎಂದು ಪೊಲೀಸರಿಗೆ ಹೇಳಿಕೊಂಡಿದ್ದಾರೆ. ಆಕೆ ಕೊಟ್ಟ ಮಾಹಿತಿಯ ಅನ್ವಯ ಮಗುವನ್ನು ಮರಳಿ ಹುಡುಕಲಾಗಿದೆ.

ಇದೀಗ ಕನಕಮ್ಮ ಮತ್ತು ಆಕೆಯಿಂದ ಮಗುವನ್ನು ಪಡೆದವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net