ಐ-ಫೋನ್​ ಕೊಡಿಸದ್ದಕ್ಕೆ ಮನೆ ಬಿಟ್ಟ ಬಾಲಕರು; ಗೋವಾದಲ್ಲಿ ಪತ್ತೆಹಚ್ಚಿ ಪಾಲಕರಿಗೆ ಒಪ್ಪಿಸಿದ ಪೊಲೀಸರು

phone using
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಐಫೋನ್​ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಇಬ್ಬರು ಬಾಲಕರು ಮನೆಬಿಟ್ಟು ಹೋಗಿದ್ದ ಪ್ರಕರಣಕ್ಕೆ ಸಂಜಯನಗರ ಠಾಣೆ ಪೊಲೀಸರು ಬಾಲಕರನ್ನು ಪತ್ತೆ ಹಚ್ಚಿ ಪಾಲಕರಿಗೆ ಒಪ್ಪಿಸುವ ಮೂಲಕ ತೆರೆ ಎಳೆದಿದ್ದಾರೆ.

ಭೂಪಸಂದ್ರ ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿದ್ದ ನಾಗಶೆಟ್ಟಿಹಳ್ಳಿ ಮತ್ತು ಹೆಬ್ಬಾಳದ ಕೆಂಪಾಪುರ ಮೂಲದ 15 ವರ್ಷದ ಇಬ್ಬರು ಬಾಲಕರು ಸೆ.1ರಂದು ಏಕಾಏಕಿ ಮದರಸಾದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪಾಲಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಬಾಲಕರನ್ನು ಗೋವಾದಲ್ಲಿ ಪತ್ತೆಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆತಂದು ಪಾಲಕರ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಗೇಜ್​ ತೆಗೆದುಕೊಂಡು ಹೋಗಿದ್ದರು: ನಾಗಶೆಟ್ಟಿಹಳ್ಳಿ ನಿವಾಸಿಯಾದ ಒಬ್ಬ ಬಾಲಕ ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಮದರಸಾಗೆ ತೆರಳಿ ರಾತ್ರಿ 10 ಗಂಟೆಗೆ ವಾಪಸ್​ ಮನೆಗೆ ಬರುತ್ತಿದ್ದ. ಕೆಂಪಾಪುರದ ಮತ್ತೊಬ್ಬ ಬಾಲಕ ಮದರಸಾದಲ್ಲೇ ಉಳಿದು ಶಿಕ್ಷಣ ಪಡೆಯುತ್ತಿದ್ದ. ಸೆ.1ರಂದು ಮದರಸಾಗೆ ರಜೆ ಇತ್ತು. ಆದರೂ ಸಂಜೆ 4.30ರ ವೇಳೆಗೆ ನಾಗಶೆಟ್ಟಿಹಳ್ಳಿಯಿಂದ ಬಾಲಕ ಮದರಸಾಗೆ ಬಂದಿದ್ದ. ಬಳಿಕ ಇಬ್ಬರೂ ಮದರಸಾದಿಂದ ನಾಪತ್ತೆಯಾಗಿದ್ದರು.

ರಾತ್ರಿಯಾದರೂ ಬಾಲಕ ಮನೆಗೆ ಬಾರದ ಹಿನ್ನೆಲೆ ಆತನ ಮೊಬೈಲ್​ಗೆ ಪಾಲಕರು ಕರೆ ಮಾಡಿದಾಗ ಮೊಬೈಲ್​ ಸ್ವಿಚ್ಡ್​ ಆಫ್​ ಬಂದಿದೆ. ಇದರಿಂದ ಗಾಬರಿಗೊಂಡ ಪಾಲಕರು ಮದರಸಾ ಬಳಿ ಬಂದು ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮದರಸಾದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಇಬ್ಬರೂ ಲಗೇಜ್​ ತೆಗೆದುಕೊಂಡು ಹೊರಗೆ ಹೋಗಿರುವುದು ಕಂಡು ಬಂದಿತ್ತು. ಪಾಲಕರ ದೂರಿನನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರುಬಾಲಕರನ್ನು ಪತ್ತೆಹಚ್ಚಿ ಪಾಲಕರಿಗೆ ಒಪ್ಪಿಸಿದ್ದಾರೆ.

ಕೆಲಸಕ್ಕೆ ಸೇರಿ ದುಡಿದು ಐ&ಫೋನ್​ ತೆಗೆದುಕೊಳ್ಳುವೆ: ಇಬ್ಬರೂ ಬಾಲಕರು ಇತ್ತೀಚೆಗೆ ಐ&ಫೋನ್​ ಕೊಡಿಸುವಂತೆ ಪಾಲಕರ ಬಳಿ ಬೇಡಿಕೆ ಇಟ್ಟಿದ್ದಾರೆ. ಇಬ್ಬರ ಬಳಿಯೂ ಈಗಾಗಲೇ ಆ್ಯಂಡ್​ರಾಯ್ಡ್​ ಮೊಬೈಲ್​ಗಳಿದ್ದವು. ಐ-ಫೋನ್​ ಕೊಡಿಸುವಷ್ಟು ಅನುಕೂಲವಿಲ್ಲದ ಹಿನ್ನೆಲೆ ಪಾಲಕರು ಬಾಲಕರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡ ಬಾಲಕರು, ಮುಂಬೈಗೆ ತೆರಳಿ ಕೆಲಸಕ್ಕೆ ಸೇರಿ ತಾವೇ ದುಡಿದು ಐ-ಫೋನ್​ ತೆಗೆದುಕೊಳ್ಳುವುದಾಗಿ ಪಾಲಕರ ಬಳಿ ಹೇಳಿದ್ದರು. ಆದರೆ ಪಾಲಕರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರ ಬೆನ್ನಲ್ಲೇ ಇಬ್ಬರೂ ಮದರಸಾದಿಂದ ನಾಪತ್ತೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net