

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಬಂಟ್ವಾಡಿ ಎಂಬಲ್ಲಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಹಲಗೆಗಳಲ್ಲಿ ನೀರು ಸೋರಲಾರಂಭಿಸಿದೆ. ಪ್ರತಿವರ್ಷವೂ ಈ ಗೋಳು ಮುಂದುವರಿದಿದ್ದರೂ, ಶಾಶ್ವತ ಪರಿಹಾರ ದೊರೆಯುವ ಲಕ್ಷಣ ಕಾಣಿಸುತ್ತಿಲ್ಲ.
ಪಶ್ಚಿಮಘಟ್ಟ ಪ್ರದೇಶದಿಂದ ಹರಿದು ಬರುವ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಮೂಲಕ 13 ಕೋಟಿ ರೂ. ವೆಚ್ಚದಲ್ಲಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಬಂಟ್ವಾಡಿಯಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಗೊಂಡಿದೆ. ಇದು ಕುಂದಾಪುರ ತಾಲೂಕಿನ ಬೃಹತ್ ಡ್ಯಾಂಗಳಲ್ಲಿ ಒಂದಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಆದರೆ ಹೊಸಾಡು, ತ್ರಾಸಿ, ಸೇನಾಪುರ, ನಾಡ, ಪಡುಕೋಣೆ, ಬಡಾಕೆರೆ, ಹಡವು, ಗುಡ್ಡಮ್ಮಾಡಿ ಸೇರಿದಂತೆ ಅನೇಕ ಪ್ರದೇಶಗಳ ಕೃಷಿಕರಿಗೆ ಆಧಾರವಾಗಬೇಕಿದ್ದ ಡ್ಯಾಂ ಇದೀಗ ಸೂಕ್ತ ನಿರ್ವಹಣೆಯಿಲ್ಲದೇ ಸಮಸ್ಯೆಗಳ ಕೂಪವಾಗಿದೆ.
ಪ್ರತಿವರ್ಷವೂ ಡ್ಯಾಂ ನಿರ್ವಹಣೆಗೆಂದೇ ಅನುದಾನ ಬಿಡುಗಡೆಗೊಳ್ಳುತ್ತಿದ್ದು, ಆದರೆ ಅನುದಾನವೂ ಸಮರ್ಪಕ ಬಳಕೆಗೊಳ್ಳದೆ ಇತ್ತ ನಿರ್ವಹಣೆಯೂ ಇಲ್ಲದಿರುವುದರಿಂದ ನೀರು ಸಂಗ್ರಹಣೆ ಸೂಕ್ತವಾಗಿ ನಡೆಯುತ್ತಿಲ್ಲ ಪ್ರತೀ ವರ್ಷವೂ ಕೃಷಿಕರು ಇದರ ವಿರುದ್ಧ ಧ್ವನಿ ಎತ್ತುತ್ತಲೇ ಇರಬೇಕಿದ್ದು, ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯುವ ಮುಂಚೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಸಂಬಂಧಿತ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಶಕಗಳಿಂದಲೂ ನದಿ ಸುತ್ತಮುತ್ತಲ ಜನರು ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು, ಸುಗ್ಗಿ ಕೃಷಿ ಮಾಡಿಕೊಂಡು ಬಂದಿದ್ದು, ಆದರೆ ಹಲವಾರು ವರ್ಷಗಳಿಂದ ಮುಂಗಾರು ಕೃಷಿಗೆ ಮಾತ್ರ ಸೀಮಿತವಾಗಬೇಕಿದೆ. ಜತೆಗೆ ದ್ವಿದಳ ಧಾನ್ಯ ಬೆಳೆಯೂ ಸ್ಥಗಿತಗೊಂಡಿದೆ. ಹಲಗೆಯಲ್ಲಿ ಸೋರುವಿಕೆ ಒಂದೆಡೆಯಾದರೆ, ಉಬ್ಬರದ ಸಂದರ್ಭ ಹಲಗೆ ಮೇಲಿನಿಂದ ನೀರು ಹಾದುಹೋಗುತ್ತಿರುವುದೂ ಸಮಸ್ಯೆಯಾಗಿದೆ. ಇತ್ತ ಉಪ್ಪು ನೀರು ಕೃಷಿ ಭೂಮಿಗಳಿಗೆ ನುಗ್ಗುತ್ತಿದ್ದು, ಬೆಳೆಗಳು ನಾಶವಾಗುವುದರ ಜತೆಗೆ ಭೂಮಿಗಳೂ ಬರಡಾಗುತ್ತಾ ಸಾಗಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಡ್ಯಾಮ್ ನಿರ್ವಹಣೆ ವೈಫಲ್ಯದಿಂದ ಈ ಭಾಗದ ರೈತರು ಕಂಗೆಟ್ಟಿದ್ದಾರೆ. ಕಳೆದ ವರ್ಷ ಡ್ಯಾಂಗೆ ಹಲಗೆ ಹಾಕುವ ವಿಚಾರ ಹಾಗೂ ಡ್ಯಾಮ್ ನಿರ್ವಹಣೆ ಸಂಬಂಧಿಸಿದಂತೆ ಶಾಸಕರೇ ಧರಣಿ ನಡೆಸಿದ್ದರೂ ಪರಿಣಾಮ ಮಾತ್ರ ಶೂನ್ಯ. ಸಿಹಿ ನೀರಿನ ಲಭ್ಯತೆ ಕ್ಷೀಣಿಸುತ್ತಿದೆ. ಮಳೆಗಾದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಡ್ಯಾಂನ ಸ್ವಲ್ಪ ಭಾಗಕ್ಕೆ ಯಾಂತ್ರೀಕೃತ ಗೇಟ್ ಅಳವಡಿಸಿದ್ದರೂ ನೀರಿನ ಸೋರುವಿಕೆ ನಿಂತಿಲ್ಲ - ನಾಗೇಂದ್ರ, ಸ್ಥಳೀಯ ಕೃಷಿಕ https://www.vijayavani.net/gana-natyothsva-in-neelavar https://www.vijayavani.net/burglary-by-breaking-the-lock-of-the-house