More

    ನವದೆಹಲಿಯ ಏಮ್ಸ್ ಮೇಲಿನ ಸೈಬರ್ ದಾಳಿ ರಾಷ್ಟ್ರೀಯ ಭದ್ರತೆಗೊಂದು ಎಚ್ಚರಿಕೆಯ ಗಂಟೆ

    | ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ನವದೆಹಲಿಯ ಏಮ್ಸ್ ಮೇಲಿನ ಸೈಬರ್ ದಾಳಿ ರಾಷ್ಟ್ರೀಯ ಭದ್ರತೆಗೊಂದು ಎಚ್ಚರಿಕೆಯ ಗಂಟೆಸೈಬರ್ ದಾಳಿಕೋರರು (Cyber Attack) ಭಾರತದ ಅತ್ಯಂತ ಪ್ರಮುಖ ಆಸ್ಪತ್ರೆ (Hospitals)ಗಳಲ್ಲಿ ಒಂದರ ವ್ಯವಸ್ಥೆಗಳನ್ನು ಬಹುತೇಕ ಒಂದು ವಾರದ ಕಾಲ ಹ್ಯಾಕ್ ಮಾಡಿ, ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದ್ದಾರೆ. ಇದರಿಂದಾಗಿ ಆಸ್ಪತ್ರೆ ಹಲವು ಪ್ರಮುಖ ವೈದ್ಯಕೀಯ ಸೇವೆಗಳು ಹಾಗೂ ಪ್ರಯೋಗಾಲಯಗಳನ್ನು ಕೈಯಾರೆ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಸಾಂಪ್ರದಾಯಿಕವಾಗಿ ಭಾರತದ ಪ್ರಮುಖ ರಾಜಕಾರಣಿಗಳು ವೈದ್ಯಕೀಯ ಚಿಕಿತ್ಸೆ ಪಡೆಯುವ ಆಸ್ಪತ್ರೆಯಾಗಿದ್ದು, ಇದರ ಮೇಲೆ ಇತ್ತೀಚೆಗೆ ನಡೆದ ರಾನ್ಸಮ್‌ವೇರ್ ದಾಳಿಯ ಪರಿಣಾಮವಾಗಿ ಕೇಂದ್ರೀಕೃತ ಮಾಹಿತಿಗಳು ಸ್ಥಗಿತಗೊಂಡಿವೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ.

    ಭಾರತ ಸರ್ಕಾರಿ ಸ್ವಾಮ್ಯದ ಪ್ರಮುಖ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಾದ ಏಮ್ಸ್ (AIIMS) ಮೇಲೆ ಈ ದಾಳಿ ನಡೆದಿದ್ದು, ಆಸ್ಪತ್ರೆಯ ಆಡಳಿತ ವರ್ಗ ಆಸ್ಪತ್ರೆಯ ಎಲ್ಲ ವಿಭಾಗಗಳಿಗೂ ಕಂಪ್ಯೂಟರೀಕೃತ ವ್ಯವಸ್ಥೆ ಸರಿ ಹೋಗುವ ತನಕ ದಾಖಲೆಗಳನ್ನು ಸ್ವತಃ ನಮೂದಿಸುವಂತೆ ಸೂಚನೆ ನೀಡಿದೆ. ಆಸ್ಪತ್ರೆಗೆ ಸಂಬಂಧಿಸಿದ ವ್ಯಕ್ತಿಗಳು ಈ ಸಮಸ್ಯೆಯ ಕುರಿತು ಮಾತನಾಡುತ್ತಾ, ಈ ಸರ್ವರ್ ಸಮಸ್ಯೆಯ ಪರಿಣಾಮ ಹಲವು ವಿಭಾಗಗಳ ಮೇಲೆ ತೊಂದರೆ ಉಂಟುಮಾಡಿದ್ದು, ಆಸ್ಪತ್ರೆಯ ವಿವಿಧ ಕ್ಲಿನಿಕ್‌ಗಳು, ಹೊಸ ರೋಗಿಗಳ ದಾಖಲಾತಿ ಪ್ರಕ್ರಿಯೆಗಳ ಮೇಲೆ ಪರಿಣಾಮ ಉಂಟುಮಾಡಿದೆ.

    ಸೈಬರ್ ದಾಳಿ (Cyber attack) ಮಾಡಿದ ದಾಳಿಕೋರರು ಆಸ್ಪತ್ರೆಯ ಯಾವೆಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಮತ್ತು ಅವರ ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅದೂ ಅಲ್ಲದೆ ಇನ್ನು ಏಮ್ಸ್ ಆಸ್ಪತ್ರೆಯೂ ಯಾವ ದಾಖಲೆಗಳು ಅಥವಾ ಯಾರ ದಾಖಲೆಗಳನ್ನು ಅವರು ಪಡೆದಿರಬಹುದು ಎಂದು ಹೇಳಿಲ್ಲ. ದೆಹಲಿಯ ಸ್ಥಳೀಯ ಮಾಧ್ಯಮಗಳು ಸೈಬರ್ ದಾಳಿಕೋರರು ತಮ್ಮ ಹ್ಯಾಕಿಂಗ್ ಹಿಂಪಡೆಯಲು 2 ಬಿಲಿಯನ್ ರೂಪಾಯಿಗಳಿಗೆ (24.5 ಮಿಲಿಯನ್ ಡಾಲರ್) ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ದೆಹಲಿ ಪೊಲೀಸ (Delhi Police)ರು ಅಂತಹ ಯಾವ ಮಾಹಿತಿಯೂ ನಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

    ಅತ್ಯಂತ ವಿಶಾಲವಾದ ಏಮ್ಸ್ ಆಸ್ಪತ್ರೆಯು ಪ್ರತಿವರ್ಷವೂ 1.5 ಮಿಲಿಯನ್ ಹೊರರೋಗಿಗಳು ಮತ್ತು 80,000 ಒಳರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಏಮ್ಸ್ ಆಸ್ಪತ್ರೆಯ ವೆಬ್‌ಸೈಟ್ ದಾಖಲೆಗಳು ತಿಳಿಸುತ್ತವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಕೋವಿಡ್-19 ಲಸಿಕೆಯನ್ನು ಏಮ್ಸ್ ನಲ್ಲೇ ಪಡೆದುಕೊಂಡಿದ್ದರು. ಗೃಹ ಸಚಿವ ಅಮಿತ್ ಶಾ (Amit Shah) ಅವರು ಕೋವಿಡ್ – 19 (Covid 19) ಪಾಸಿಟಿವ್ ಎಂದು ದೃಢಪಟ್ಟ ಬಳಿಕ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

    ಇತ್ತೀಚೆಗೆ ಮಾಧ್ಯಮಗಳೊಡನೆ ಮಾತನಾಡುತ್ತಿದ್ದ ಏಮ್ಸ್ ಆಸ್ಪತ್ರೆಯ ವಕ್ತಾರರು ಸಂಸ್ಥೆ ಈಗಾಗಲೇ ತನ್ನ ಎಲ್ಲಾ ಮಾಹಿತಿ, ದಾಖಲೆಗಳನ್ನು ಮರಳಿ ಪಡೆದುಕೊಂಡಿದೆ. ಆದರೆ ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ಪ್ರಯೋಗಾಲಯಗಳು ಸೇರಿದಂತೆ ಆಸ್ಪತ್ರೆಯ ಬಹುತೇಕ ಎಲ್ಲ ಸೇವೆಗಳು ನವೆಂಬರ್ 23ರ ಬಳಿಕ ಇನ್ನೂ ಮಾನವ ಚಾಲಿತವಾಗಿಯೇ ನಡೆಯುತ್ತಿವೆ ಎಂದರು. ಅಧಿಕಾರಿಗಳು ಈಗ ಆಸ್ಪತ್ರೆಯ ನೆಟ್‌ವರ್ಕ್ ಅನ್ನು ಸ್ಯಾನಿಟೈಸ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಸಂಸ್ಥೆಗೆ ಸೇರಿದ ಕನಿಷ್ಠ ಐದು ಸರ್ವರ್‌ಗಳು ಈ ಸೈಬರ್ ದಾಳಿಯಲ್ಲಿ ಸೋಂಕಿತವಾಗಿವೆ. ಇದರ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    ಏಮ್ಸ್ ದೆಹಲಿಯ ನಂಬಿಕರ್ಹ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಆಸ್ಪತ್ರೆಯ ಬಳಿ 40 ಫಿಸಿಕಲ್ ಸರ್ವರ್‌ಗಳಿದ್ದು, 100 ವರ್ಚುವಲ್ ಸರ್ವರ್‌ಗಳಿವೆ. ಸೈಬರ್ ದಾಳಿಯ ಪರಿಣಾಮವಾಗಿ ಇವುಗಳಲ್ಲಿ ಐದು ಸರ್ವರ್‌ಗಳು ಪ್ರಸ್ತುತ ಸೋಂಕಿತವಾಗಿವೆ.

    ಈ ಐದು ಸರ್ವರ್‌ಗಳಲ್ಲಿ ಬಹುತೇಕ 3-4 ಕೋಟಿ ರೋಗಿಗಳಿಗೆ ಸಂಬಂಧಿಸಿದ ಮಾಹಿತಿಗಳು ಸಂಗ್ರಹಿತವಾಗಿದ್ದವು. ಆದರೆ ಆಸ್ಪತ್ರೆಯ ವರದಿಗಳು ರೋಗಿಗಳ ಮಾಹಿತಿ ಕಳವಾಗಿದೆ ಎಂಬ ಮಾತುಗಳು ಆಧಾರ ರಹಿತವಾಗಿವೆ ಎಂದಿವೆ.

    ಹಲವಾರು ವರ್ಷಗಳಿಂದ ಇಂತಹ ಸೈಬರ್ ದಾಳಿಗಳು ಪ್ರಪಂಚದಾದ್ಯಂತ ನಡೆಯುತ್ತಲೇ ಬಂದಿವೆ. ದೆಹಲಿಯ ಏಮ್ಸ್ ಆಸ್ಪತ್ರೆಯ ಮೇಲೆ ನಡೆದ ಈ ಸೈಬರ್ ದಾಳಿ ಆ ಪಟ್ಟಿಗೆ ಒಂದು ಹೊಸ ಸೇರ್ಪಡೆಯಾಗಿದೆ. ಬೇರೆ ದೇಶಗಳ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಸೇರಿದಂತೆ ಹಣ ಗಳಿಸಲು ಅವಕಾಶ ಹುಡುಕುತ್ತಿರುವವರು ಸೈಬರ್ ಸೆಕ್ಯುರಿಟಿಯಲ್ಲಿರುವ ಕೊನೆ ಇಲ್ಲದ ಲೋಪದೋಷಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ.

    ಆದರೆ ಏಮ್ಸ್ ಸಂಸ್ಥೆ ಭಾರತದ ಅತ್ಯಂತ ಮಹತ್ವದ ವೈದ್ಯಕೀಯ ಸಂಸ್ಥೆಯಾಗಿರುವುದು ಮತ್ತು ದಾಳಿಗೊಳಗಾದ ಸಿಸ್ಟಮ್‌ಗಳನ್ನು ಮರಳಿ ಸರಿಪಡಿಸುವಲ್ಲಿ ತಗುಲುತ್ತಿರುವ ಸಮಯವನ್ನು ಗಮನಿಸಿದರೆ ಈ ದಾಳಿಯ ಪ್ರಮಾಣವನ್ನು ಅಂದಾಜಿಸಬಹುದು.

    ರಾನ್ಸಮ್‌ವೇರ್ (Ransomware) ಎನ್ನುವುದು ಒಂದು ಬಗೆಯ ಮಾಲ್‌ವೇರ್ ಆಗಿದ್ದು, ಇದು ತಾನು ಗುರಿಯಾಗಿಸಿಕೊಂಡ ಕಂಪ್ಯೂಟರ್ ಅನ್ನು ಎನ್‌ಕ್ರಿಪ್ಟ್ ಮಾಡಬಲ್ಲದು. ಆ ಬಳಿಕ ಅವುಗಳನ್ನು ಅನ್ ಬ್ಲಾಕ್ ಮಾಡಲು ದಾಳಿ ನಡೆಸಿದವರು ಹೆಚ್ಚಿನ ಪ್ರಮಾಣದಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರಾನ್ಸಮ್‌ವೇರ್ ಹಣ ಪಾವತಿಗಳು ಮುಗಿಲು ಮುಟ್ಟಿವೆ. ಅಮೆರಿಕಾದ ಸರ್ಕಾರಿ ದಾಖಲೆಗಳು ಇಂತಹ ದಾಳಿಕೋರರು ಎರಡೂ ರೀತಿಯಲ್ಲಿ ಸುಲಿಗೆ ಮಾಡುತ್ತಾರೆ ಎನ್ನುವುದನ್ನು ತೋರಿಸುತ್ತವೆ. ಇಂತಹ ದಾಳಿಕೋರರು ಸಿಸ್ಟಮ್ ಅನ್ನು ಎನ್‌ಕ್ರಿಪ್ಟ್ ಮಾಡಿ ಬಳಿಕ ಹಣಕ್ಕಾಗಿ ಬೇಡಿಕೆ ಇಡುವ ಜೊತೆಗೆ ಆ ಸಿಸ್ಟಮ್‌ಗಳಿಂದ ಖಾಸಗಿ ಮಾಹಿತಿಗಳನ್ನು ಕಳವು ಮಾಡಿ, ಅವರ ಬೇಡಿಕೆ ಈಡೇರದಿದ್ದರೆ ಅವುಗಳನ್ನು ಬಿಡುಗಡೆಗೊಳಿಸುವುದಾಗಿಯೂ ಬೆದರಿಕೆ ಒಡ್ಡುತ್ತಾರೆ.

    ಅದರಲ್ಲೂ ವೈದ್ಯಕೀಯ ಸಂಸ್ಥೆಗಳಲ್ಲಿರುವ ಅತ್ಯಂತ ಗಹನವಾದ ಮಾಹಿತಿಗಳ ಕಾರಣದಿಂದ ಮತ್ತು ಸಮಾಜದಲ್ಲಿ ಅವುಗಳ ಮಹತ್ವದ ಪಾತ್ರದ ಕಾರಣದಿಂದ ಅವುಗಳು ಈ ಸೈಬರ್ ದಾಳಿಕೋರರಿಗೆ ಆಕರ್ಷಕ ಗುರಿಗಳಾಗಿವೆ. ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದ ಆರೋಗ್ಯ ವಿಮಾ ಸಂಸ್ಥೆಯಾದ ಮೆಡಿಬ್ಯಾಂಕ್ ಪ್ರೈವೇಟ್ ಲಿಮಿಟೆಡ್ ತನ್ನ ಮೇಲೆ ನಡೆದ ಸೈಬರ್ ದಾಳಿಯ ಪರಿಣಾಮವಾಗಿ ಬಹುತೇಕ 10 ಮಿಲಿಯನ್ ನಾಗರಿಕರ ವೈಯಕ್ತಿಕ ಮಾಹಿತಿಗಳು ಬಯಲಾಗಿತ್ತು ಎಂದು ಹೇಳಿತ್ತು.

    ಹೆಚ್ಚಿನ ರಾಷ್ಟ್ರಗಳು ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರವನ್ನು ಕ್ರಿಟಿಕಲ್ ಇನ್ಫಾರ್ಮೇಶನ್ (ಸಿಐ) ಇನ್‌ಫ್ರಾಸ್ಟ್ರಕ್ಚರ್ ಎಂದು ಕರೆಯುತ್ತವೆ. ಆದರೆ ಭಾರತದಲ್ಲಿ ಇನ್ನೂ ಆರೋಗ್ಯ ಕ್ಷೇತ್ರವನ್ನು ನೇರವಾಗಿ ಸಿಐ ಎಂದು ಹೆಸರಿಸಲಾಗಿಲ್ಲ.

    ದೆಹಲಿ ಪೊಲೀಸರು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆ 2008ರ ಸೆಕ್ಷನ್ 66 (ಎಫ್) ಅಡಿಯಲ್ಲಿ ಈ ಸೈಬರ್ ದಾಳಿಯನ್ನು ಸೈಬರ್ ಭಯೋತ್ಪಾದನೆ ಎಂದು ದಾಖಲಿಸಿಕೊಂಡಿದ್ದಾರೆ. ಇದು ಯಾವುದೇ ಸಾಮಾನ್ಯ ರಾನ್ಸಮ್‌ವೇರ್ ಪ್ರಕರಣಕ್ಕಿಂತ ಹೆಚ್ಚು ಗಂಭೀರವಾದದ್ದು ಎಂದು ಪರಿಗಣಿಸಿದ್ದಾರೆ. ಸಿಐಗಳ ಮೇಲೆ ನಡೆಯುವ ಸೈಬರ್ ದಾಳಿಯಲ್ಲಿ ರಾಷ್ಟ್ರೀಯ ಭದ್ರತೆಗೂ ತೊಂದರೆ ಎದುರಾಗುವ ಸಾಧ್ಯತೆಗಳೂ ಇವೆ. ಆದ್ದರಿಂದ ಈಗ ಸೈಬರ್ ದಾಳಿಗೆ ತುತ್ತಾಗಿರುವ ಏಮ್ಸ್ ಸರ್ವರ್‌ಗಳಲ್ಲಿ ಭಾರತ ಸರ್ಕಾರದ ಅತ್ಯುನ್ನತ ಸ್ಥರಗಳಲ್ಲಿರುವ ನಾಯಕರಿಗೆ ಸಂಬಂಧಿಸಿದ ಆರೋಗ್ಯ ವಿಚಾರದ ಮಾಹಿತಿಗಳೂ ಇದ್ದವು ಎನ್ನುವುದನ್ನು ಅಲಕ್ಷಿಸುವಂತಿಲ್ಲ. ಆದ್ದರಿಂದ ಈ ದಾಳಿಯ ಹಿಂದೆ ಕೇವಲ ಹಣ ಕೇಳುವುದಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಉದ್ದೇಶಗಳು ಇದ್ದಿರಬಹುದು ಎನ್ನುವ ಶಂಕೆಗಳೂ ಮೂಡಿವೆ.

    ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ ಬ್ಯಾನ್! ಮದ್ರಾಸ್​ ಹೈಕೋರ್ಟ್ ಆದೇಶ, ಕಾರಣ ಹೀಗಿದೆ….

    ಮುದ್ದಿನ ನಾಯಿಗೆ ಅದ್ಧೂರಿ ಬರ್ತಡೇ! ಬಂದ ಅತಿಥಿಗಳಿಂದ 3 ಚಿನ್ನದ ಲಾಕೆಟ್ ಸೇರಿದಂತೆ ಭರ್ಜರಿ ಗಿಫ್ಟ್​

    ನಿಮ್ಮ ಆಹಾರದಲ್ಲಿ ವಿಟಮಿನ್​ ಡಿ ಬೇಕಾದಷ್ಟು ಇದ್ದರೆ ದೀರ್ಘಾಯುಷ್ಯ ಪಡೆಯಬಹುದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts