ಗೆರಿಲ್ಲಾ ತಂತ್ರದ ಮೂಲಕ ಆಂಗ್ಲರಿಗೆ ಚಳ್ಳೆಹಣ್ಣು ತಿನ್ನಿಸಿದ ಸಾಹಸಿ

untitled-design-689e24dba2cd7
Published on

| ಮಂಜುನಾಥ ಗದಗಿನ

‘ಹೇ ಥ್ಯಾಕರೇ, ಕನ್ನಡಿಗರ ಮಾನಾಭಿಮಾನ ನಿನ್ನಂಥ ಕಜ್ಜಿ ನಾಯಿಗೇನ್ ಗೊತೆôತಿ. ಇದು ಕೆಚ್ಚೆದೆ ಕಲಿಗಳ ಬೀಡೈತಿ, ಅಂಜಿಕೆ ಎಂಬುದರಿದಿರ ನಾಡೈತಿ...’

ಇಂತಹ ಕೆಚ್ಚೆದೆಯ ಮಾತುಗಳ ಮೂಲಕವೇ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ವೀರ, ಕನ್ನಡಾಭಿಮಾನ, ನಾಡಾಭಿಮಾನ ಮೈಗೂಡಿಸಿಕೊಂಡಿದ್ದ ಕಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ತನ್ನ ತ್ಯಾಗ ಬಲಿದಾನದಿಂದ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಮಗ ರಾಯಣ್ಣ. ಇಂತಹ ವೀರಯೋಧನ ಜನ್ಮದಿನ(ಆ.15) ಇಂದು.

ತಾಯಿ ಕೆಂಚವ್ವ, ತಂದೆ ಭರಮಣ್ಣ. 1798ರ ಆ. 15ರಂದು ಜನಿಸಿದ ರಾಯಣ್ಣ ಕಿತ್ತೂರಿನ ಕಲಿಯಾಗಿ ಬೆಳೆದದ್ದು ರೋಚಕ ಕಥೆ. ಜನರು ಆತನನ್ನು ಪ್ರೀತಿಯಿಂದ ‘ರಾಯಾ’ ಎಂದು ಕರೆಯುತ್ತಿದ್ದರು. ಕರ್ನಾಟಕದಲ್ಲಿ ಜರುಗಿದ ಬ್ರಿಟಿಷ ವಿರೋಧಿ ಬಂಡಾಯ ಗಳಲ್ಲಿ ರಾಯಣ್ಣನ ಹೋರಾಟ ನಿಜಕ್ಕೂ ವೀರೋಚಿತ. ಕ್ಷಾತ್ರ ತೇಜದಿಂದ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ವೀರಯೋಧ ರಾಯಣ್ಣ.

ನಮ್ಮವರಿಂದ ಸೋಲು: ಇಡೀ ದೇಶದಲ್ಲಿ ಆಂಗ್ಲರ ಅಧಿಪತ್ಯ ಸ್ಥಾಪನೆಯಾಗಿ, ಸಣ್ಣಪುಟ್ಟ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂದು ಬ್ರಿಟಿಷರು ಕಾಯು ್ದುಳಿತಿದ್ದರು. ಇದೇ ವೇಳೆ ಸಮೃದ್ಧ ಕಿತ್ತೂರು ಸಂಸ್ಥಾನದ ಮೇಲೆ ಅವರ ಕಣ್ಣು ಬಿತ್ತು. ಚನ್ನಮ್ಮನಿಗೆ ಗಂಡು ಸಂತಾನ ಇಲ್ಲದ ಕಾರಣ ದತ್ತು ತೆಗೆದುಕೊಂಡಿದ್ದಳು. ಇದನ್ನು ತಿಳಿದು ಬ್ರಿಟಿಷರು ದತ್ತು ಪುತ್ರನಿಗೆ ಉತ್ತರಾಧಿಕಾರ ಹಕ್ಕಿಲ್ಲ ಎಂಬ ಕಾಯ್ದೆಯಡಿ ‘ನೀವು ನಮಗೆ ಕಪ್ಪ ಕೊಟ್ಟು ಶರಣಾಗಬೇಕು’ ಎಂದು ತಿಳಿಸಿದಾಗ ಚನ್ನಮ್ಮ, ‘ನಾವೇಕೆ ಕೊಡಬೇಕು ಕಪ್ಪ’ ಎಂದು ಗರ್ಜಿಸಿದ್ದಳು.

ಇದರಿಂದ ಕುಪಿತರಾದ ಆಂಗ್ಲರು ಅಕ್ಟೋಬರ್ 21, 1824ರ ಅ. 21ರಂದು ಬ್ರಿಟಿಷ ಅಧಿಕಾರಿ ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ವನಿತೆ ರಾಣಿ ಚನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ವೀರಸೈನಿಕರು ಮುನ್ನುಗ್ಗಿದ್ದರು. ಇದೇ ವೇಳೆ ಅಮಟೂರು ಬಾಳಪ್ಪನವರು ತಮ್ಮ ಖಡ್ಗದಿಂದ ಥ್ಯಾಕರೆ ರುಂಡ ಚಂಡಾಡಿದರು. ಭಯ ಗೊಂಡ ಆಂಗ್ಲರು ಅಲ್ಲಿಂದ ಕಾಲ್ಕಿತ್ತರು. ಇಷ್ಟಕ್ಕೆ ಸುಮ್ಮನಾಗದ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು.

ಆದರೆ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಯಿತು. ರಾಯಣ್ಣ, ಚನ್ನಮ್ಮ ಬ್ರಿಟಿಷರ ವಶವಾದರು. ಆದರೆ, ಕೆಲವು ದಿನಗಳ ನಂತರ ರಾಯಣ್ಣ ಬಿಡು ಗಡೆಯಾದ. ರಾಣಿ ಚನ್ನಮ್ಮನನ್ನು ಬ್ರಿಟಿಷರು ಬಂಧಿಸಿ ಬೈಲ ಹೊಂಗಲ ಜೈಲಿನಲ್ಲಿ ಇಟ್ಟ ನಂತರ ರಾಯಣ್ಣ ಚನ್ನಮ್ಮನ ದತ್ತು ಪುತ್ರ ಶಿವಲಿಂಗಸರ್ಜನ ರಕ್ಷಕನಾಗಿ ನಿಂತು ಬ್ರಿಟಿಷರ ವಿರುದ್ಧ ಮತ್ತೊಂದು ಸಮರ ರೂಪಿಸತೊಡಗಿದ. ಚನ್ನಮ್ಮನ ಸ್ಮರಣೆಯಲ್ಲಿ ಶಿವಲಿಂಗಸರ್ಜನನ್ನು ತಮ್ಮ ದೊರೆಯೆಂದು ಪಣತೊಟ್ಟು ನೂರಾರು ಹಳ್ಳಿಗರ ಬೆಂಬಲ ಪಡೆದು ಗೆರಿಲ್ಲಾ ಯುದ್ಧ ತಂತ್ರಗಳಿಂದ ಬ್ರಿಟಿಷರ ವಿರುದ್ಧ ಕಾರ್ಯಾಚರಣೆ ರೂಪಿಸಿದರು.

ಮೋಸದಿಂದ ಸೆರೆ: ಯುದ್ಧ ಮಾಡಿ ರಾಯಣ್ಣನ್ನು ಗೆಲಲ್ಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ಕುತಂತ್ರ ಬುದ್ಧಿ ಪ್ರಯೋಗ ಮಾಡಿದರು. ರಾಯಣ್ಣನ ಸ್ವಂತ ಮಾವನಾಗಿದ್ದ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಬಳಸಿಕೊಂಡರು. ಆತನ ಮೇಲೆ ಬ್ರಿಟಿಷ್ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ಹೀಗಾಗಿ ರಾಯಣ್ಣ ಬ್ರಿಟಿಷರ ವಶವಾದನು. ಎಂಟು ತಿಂಗಳ ಸೆರೆವಾಸದ ನಂತರ ಅವನಿಗೆ ಹಾಗೂ ಆತನ 13 ಜನ ಸಂಗಡಿಗರಿಗೆ ಫಾಸಿ ಶಿಕ್ಷೆ ವಿಧಿಸಲಾಯಿತು.

ರಾಯಣ್ಣ ಆಶಯದಂತೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂ ಕಿನ ನಂದಗಡ ಗ್ರಾಮದಲ್ಲಿ 1831ರ ಜ. 26ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ನಂತರ ಅಲ್ಲಿ ನೆಟ್ಟ ಆಲದ ಗಿಡ ಮರವಾಗಿ ಇನ್ನೂ ಇದೆ. ಕಾಕತಾಳೀಯ ಎಂಬಂತೆ, ರಾಯಣ್ಣ ಜನಿಸಿದ ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನವಾದರೆ, ಅವನ ನಿಧನವಾದ ಜನವರಿ 26 ಭಾರತವು ಗಣರಾಜ್ಯವೆಂದು ಘೊಷಿಸಿದ ದಿನವಾಗಿದೆ ಎನ್ನುವುದು ವಿಶೇಷ.

ಗೆರಿಲ್ಲಾ ಯುದ್ಧ

ರಾಯಣ್ಣ ಬ್ರಿಟಿಷ್ ಸರ್ಕಾರದ ಸೊಕ್ಕಡಗಿಸಲು ತನ್ನ ಸೈನ್ಯದೊಂದಿಗೆ ದಟ್ಟಡವಿಯಲ್ಲಿ ಅಡಗಿಕೊಂಡು ರಣತಂತ್ರ ಹೆಣೆದು ಯುದ್ಧ ಸಾರುತ್ತಿದ್ದ. ಅದರಲ್ಲೂ ಖಾನಾಪುರ ತಾಲೂಕಿನ ಹಂಡಿಭಡಗನಾಥ, ಸಂಪಗಾಂವ, ನಂದಗಡ ಕಾನನದಲ್ಲಿ ರಾಯಣ್ಣ ಬಿಡಾರ ಹೂಡಿ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತಿದ್ದ. ರಾತ್ರಿ ಹೊತ್ತಿನಲ್ಲಿ ರಾಯಣ್ಣ ಸೈನ್ಯ ಹೆಚ್ಚು ಕಾರ್ಯಾಚರಣೆ ಮಾಡುತ್ತಿತ್ತು. ಇದು ಕೂಡ ಗೆರಿಲ್ಲಾ ಯುದ್ಧದ ಒಂದು ತಂತ್ರವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net