

ಹೊಸಕೋಟೆ: ನನ್ನ ಮೇಲೆ ವೈಯಕ್ತಿಕ ದ್ವೇಶ ಇದ್ದರೆ ನೇರವಾಗಿ ಬಂದು ಪ್ರಶ್ನಿಸಲಿ. ಅದನ್ನು ಬಿಟ್ಟು ಅಮೃತ ಸಮಾನವಾದ ಜೀವಜಲವನ್ನು ಹಾಳು ಮಾಡಿ ಸಾಧಿಸುವುದದರೂ ಏನು ಎಂದು ಶಾಸಕ ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಅಮಾನಿ ದೊಡ್ಡಕೆರೆ ಭಾಗದಲ್ಲಿ ಪಕ್ಕದ ಉಪ್ಪಾರಹಳ್ಳಿಯ ಕೃಷಿ ಹೊಂಡದಿಂದ ನಗರದ ಕುಡಿಯುವ ನೀರಿನ ಬಾವಿಗೆ ಹಾದುಹೋಗಿರುವ ಕೊಳವೆ ಪೈಪ್ ಒಡೆದು ಹಾಕಿರುವ ಪ್ರದೇಶಕ್ಕೆ ಪರಿಶೀಲನೆ ನೆಡೆಸಿ, ಮಾತನಾಡಿದರು.
ಹಲವು ತಿಂಗಳಿಂದ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 18 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತಿತ್ತು. ಉಪ್ಪರಹಳ್ಳಿಯ ರೈತರ ಜಮೀನಿನಲ್ಲಿ ಕೃಷಿಗೆ ಬಳಕೆ ನಂತರ ಹೆಚ್ಚುವರಿ ನೀರನ್ನು ನೀಡುವಂತೆ ರೈತರಲ್ಲಿ ಮನವಿ ಮಾಡಿ ಆ ನೀರನ್ನು ಕೃಷಿ ಹೊಂಡದ ಮೂಲಕ ನಗರದ ಸಿಹಿ ನೀರಿನ ಬಾವಿಯಲ್ಲಿ ಶೇಖರಿಸಿ ಹೊಸಕೋಟೆಯ ಪ್ರತಿ ಬಡಾವಣೆಗಳಿಗೆ ಪ್ರತಿ ವಾರಕ್ಕೊಮ್ಮೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿತ್ತು, ಇದನ್ನು ಸಹಿಸದ ಕೆಲವರು ಪೈಪ್ ಒಡೆದು ನೀರನ್ನು ಪೋಲು ಮಾಡಿದ್ದಾರೆ ಎಂದರು.
ಕೂಡಲೆ ಈ ಕೃತ್ಯ ಎಸಗಿದವರ ವಿರುದ್ಧ ದೂರು ನೀಡಲು ನಗರಸಭೆ ಆಯುಕ್ತ ನಿಸಾರ್ ಆಹಮದ್‌ರಿಗೆ ಸೂಚಿಸಿದರು. ಆರೋಪಿಯನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಠಾಣಾ ಉಪ ನಿರೀಕ್ಷಕ ರಾಜು ಅವರಿಗೆ ಸೂಚಿಸಿದರು. ಭಾನುವಾರ ರಾತ್ರಿ ಈ ಕೃತ್ಯ ನೆಡೆದಿರುವ ಶಂಕೆ ಇದ್ದು, ಸುಮಾರು ಐದಾರು ಲಕ್ಷ ಲೀಟರ್ ನೀರು ಪೋಲಾಗಿದೆ.
ಒಡೆದುಹೋಗಿರುವ ಕೊಳವೆ ಪೈಪ್ ಕೂಡಲೆ ಸರಿಪಡಿಸಲು ಸಿಬ್ಬಂದಿಗೆ ತಿಳಿಸಲಾಗಿದೆ. ಈ ಕೃತ್ಯದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೃತ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗುವುದು. ನಿಸಾರ್ ಅಹಮದ್ ನಗರಸಭೆ ಆಯುಕ್ತ