

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷಾವಧಿಯಲ್ಲಿ 30,573 ಸುಳ್ಳು ಹೇಳಿದ್ದರಂತೆ! ಈ ಪೈಕಿ ದಿನಕ್ಕೆ 39 ಸುಳ್ಳುಗಳನ್ನು ಅವರು ಕೊನೆಯ ವರ್ಷದಲ್ಲೇ ಹೇಳಿದ್ದು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಟ್ರಂಪ್ ಅವರ ದಬ್ಬಾಳಿಕೆ ನಡವಳಿಕೆ ಅಧಿಕಾರ ಚುಕ್ಕಾಣಿ ಹಿಡಿದ ಮೊದಲ ದಿನದಂದೆ ಶುರುವಾಗಿದೆ. ಟೈಮ್ ಮ್ಯಾಗಜಿನ್ ರಕ್ಷಾ ಪುಟದಲ್ಲಿ ಕಾಣಿಸಿಕೊಳ್ಳುವುದರಿಂದ ಶುರುವಾದ ಮಾಯಾ ಲೋಕದ ಕಥೆ ಅವರು ಶ್ವೇತಭವನದಲ್ಲಿ ಇದ್ದ ಕಡೆಯ ದಿನದವರೆಗೂ ಮುಂದುವರಿಯಿತು ಎಂದು ವರದಿ ವಿಶ್ಲೇಷಿಸಿದೆ.
ಮೊದಲ ವರ್ಷ ಟ್ರಂಪ್ ದಿನಕ್ಕೆ ಆರು ಸುಳ್ಳುಗಳನ್ನು ಹೇಳಿದ್ದರು. ಎರಡನೇ ವರ್ಷ ಈ ಸಂಖ್ಯೆ 16, ಮೂರನೇ ವರ್ಷ 22 ಮತ್ತು ಕೊನೆಯ ವರ್ಷ ದಿನಕ್ಕೆ 39 ಏರಿದೆ. 10,000 ಸುಳ್ಳು ಹೇಳೋದಕ್ಕೆ ಅವರು 27 ತಿಂಗಳು ತಗೊಂಡಿದ್ದರು. ನಂತರದ 14 ತಿಂಗಳಲ್ಲಿ 20,000 ಸುಳ್ಳುಗಳ ಗಡಿ ದಾಟಿದರು. ತದನಂತರದ ಐದೇ ತಿಂಗಳಲ್ಲಿ 30,000 ಸುಳ್ಳುಗಳ ಗಡಿದಾಟಿದ್ದಾರೆ ಎಂದು ವರದಿ ಲೇವಡಿ ಮಾಡಿದೆ.
ಕಳೆದ 10 ವರ್ಷಕ್ಕೂ ಹೆಚ್ಚು ಸಮಯದಿಂದ ಪತ್ರಿಕೆ ಫ್ಯಾಕ್ಟ್ ಚೆಕ್ಕರ್ ಎಂಬ ಉಪಕ್ರಮದ ಮೂಲಕ ಉಭಯ ಪಕ್ಷಗಳ ರಾಜಕಾರಣಿಗಳ ಹೇಳಿಕೆಗಳನ್ನು ವಿಶ್ಲೇಷಿಸಿ ಸತ್ಯಾಸತ್ಯತೆಯನ್ನು ತೆರೆದಿಡುತ್ತಿದೆ. ಆದರೆ, ಟ್ರಂಪ್ ಅವರ ವಾಸ್ತವಾಂಶ ತಿರುಚಿದ ಹೇಳಿಕೆಗಳು ಹೊಸ ಸವಾಲನ್ನೇ ಸೃಷ್ಟಿಸಿದವು. ಹೀಗಾಗಿ ಅವರ ಹೇಳಿಕೆಗಳ ಸತ್ಯಾಂಶವನ್ನು ಬಹಿರಂಗಪಡಿಸುವ ವಾರದ ಅಂಕಣ ‘ವಾಟ್ ಟ್ರಂಪ್ ಗಾಟ್ ರಾಂಗ್ ಆನ್ ಟ್ವಿಟರ್ ದಿಸ್ ವೀಕ್’ ಶುರುವಾಯಿತು. ಓದುಗರ ಬೇಡಿಕೆ ಹೆಚ್ಚಾದ್ದರಿಂದ ನಾಲ್ಕೂ ವರ್ಷಗಳ ಟ್ರಂಪ್ ಡೇಟಾ ಬೇಸ್ ಹಾಗೆಯೇ ಉಳಿಸಲಾಯಿತು ಎಂದು ಪತ್ರಿಕೆ ತಿಳಿಸಿದೆ. (ಏಜೆನ್ಸೀಸ್)