13ನೇ ಆವೃತ್ತಿಯ ಟೈಗರ್ ಕಪ್ ಕ್ರಿಕೆಟ್ ಟೂರ್ನಿ ಶುಭಾರಂಭ; ಈ ಬಾರಿ ಹುಡುಗಿಯರ ಕ್ರಿಕೆಟ್​ ಶುರು

web tiger cup
Published on

ಬೆಂಗಳೂರು: ಸೈಕಲ್ ಪ್ಯೂರ್ ಅಗರಬತ್ತಿ ಬೆಂಬಲದಿಂದ ಬೆಂಗಳೂರಿನಲ್ಲಿ ನಡೆಯುವ ಟೈಗರ್ ಕಪ್‌ ಕ್ರಿಕೆಟ್ ಪಂದ್ಯಾವಳಿಯ 13ನೇ ಆವೃತ್ತಿ ಶುಭಾರಂಭಗೊಂಡಿದೆ. ಅಂಡರ್ 12, ಅಂಡರ್ 14 ಮತ್ತು ಅಂಡರ್ 16 ವಿಭಾಗಗಳಲ್ಲಿ ನಡೆಯಲಿರುವ ಈ ಪಂದ್ಯಾವಳಿಯು ಮೇ 13ರವರೆಗೆ ನಡೆಯಲಿದೆ. ವಿಶೇಷವೆಂದರೆ ಈ ಆವೃತ್ತಿಯಿಂದ ಹುಡುಗಿಯರ ಕ್ರಿಕೆಟ್ ಪಂದ್ಯಾವಳಿಯೂ ನಡೆಯಲಿದೆ.

6 ಅಡಿ ಎತ್ತರದ ಅಗರಬತ್ತಿಯನ್ನು ಬೆಳಗಿಸುವ ಮೂಲಕ ಈ ವರ್ಷದ ಟೈಗರ್ ಕಪ್ ಪಂದ್ಯಾವಳಿಯನ್ನು ಉದ್ಘಾಟಿಸಲಾಗಿದೆ. ಈ ಸಂದರ್ಭದಲ್ಲಿ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯ ಪ್ರಾಂಶುಪಾಲ ಡಾ. ಭೀಮಸೇನ ಸೊರಗಾಂವ್, ಡೀನ್ ವೆಲ್ಫೇರ್ ಡಾ. ಮಹೇಶ್ ಕುಮಾರ್, ಆಡಳಿತಾಧಿಕಾರಿ ವೀರೇಶ್ ಸಿ.ಎಸ್. ಮತ್ತು ಕ್ರಿಕೆಟ್ ತಜ್ಞ  ಜೋಸೆಫ್ ಹೂವರ್ ಹಾಗೂ ಮಹಿಳಾ ಕ್ರಿಕೆಟ್ ಆಟಗಾರರು ಉಪಸ್ಥಿತರಿದ್ದರು.

ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಮಂಗಳವಾರ ಕ್ರಿಕೆಟ್ ಪಂದ್ಯಗಳು ಆರಂಭಗೊಂಡಿದ್ದು, ಬೆಂಗಳೂರು, ಮೈಸೂರು, ಧಾರವಾಡ, ಕೊಪ್ಪಳ ಮತ್ತು ಬೆಳಗಾವಿಯ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.

ಪ್ರಸಿದ್ಧ ಕ್ರಿಕೆಟಿಗರಾದ ಸಂದೀಪ್ ಪಾಟೀಲ್, ಹರ್ಭಜನ್ ಸಿಂಗ್ ಮತ್ತು ಯೂಸುಫ್ ಪಠಾಣ್ ಅವರಿಂದ ರಚಿತವಾದ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ 900ಕ್ಕೂ ಹೆಚ್ಚು ಆಟಗಾರರನ್ನು ಒಳಗೊಂಡ 56 ತಂಡಗಳು ಆಡುತ್ತವೆ. 2025ರ 13ನೇ ಆವೃತ್ತಿಯ ಟೈಗರ್ ಕಪ್ ಪಂದ್ಯಾವಳಿ ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮೀಸಲಾಗಿದ್ದು, ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ದೇಶದ ಅರಣ್ಯ ಸಂರಕ್ಷಣೆಯಲ್ಲಿ ಮತ್ತು ವನ್ಯಜೀವಿ ರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಅರಣ್ಯ ಸಂರಕ್ಷಕರಿಗೆ ಬಹುಮಾನವಾಗಿ ನೀಡಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿರುವ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಅವರು, “ಕ್ರೀಡೆಯು ಯುವಜನತೆಯ ಜೀವನವನ್ನು ರೂಪಿಸುವ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ನಾವು ನಂಬಿದ್ದೇವೆ. ಅದಕ್ಕೆ ಪೂರಕವಾಗಿ ಈ ವರ್ಷದಿಂದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನೂ ಆರಂಭಿಸಿದ್ದು, ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸಲಿದ್ದೇವೆ. ಈ ಪಂದ್ಯಾವಳಿ ಮೂಲಕ ಅರಣ್ಯ ಸಂರಕ್ಷಣೆಗೆ ಹೋರಾಡುತ್ತಿರುವ ಸಿಬ್ಬಂದಿಗಳನ್ನು ಗೌರವಿಸುವುದು ನಮಗೆ ಹೆಮ್ಮೆಯ ವಿಚಾರವಾಗಿದೆ” ಎಂದು ಹೇಳಿದರು.

ಕ್ರಿಕೆಟ್ ತಜ್ಞ ಜೋಸೆಫ್ ಹೂವರ್ ಅವರು ಮಾತನಾಡಿ, “ಈ ವೇದಿಕೆಯ ಮೂಲಕ ಯುವ ಕ್ರಿಕೆಟಿಗರು ದೊಡ್ಡ ಸಾಧನೆಯ ಪ್ರಯಾಣದಲ್ಲಿ ಮೊದಲ ಹೆಜ್ಜೆ ಇಡುವುದನ್ನು ನೋಡುವುದು ಹರ್ಷದಾಯಕವಾಗಿದೆ” ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net