

ನವದೆಹಲಿ: ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ವಿಶ್ವ ಚಾಂಪಿಯನ್ ಆಗಿದೆ. ಈ ಮೂಲಕ ತನ್ನ 13 ವರ್ಷಗಳ ವಿಶ್ವಕಪ್ ಕನಸನ್ನು ನನಸಾಗಿಸಿಕೊಂಡಿದೆ. ಈ ಟೂರ್ನಿಯ ಆರಂಭದಿಂದ ಫೈನಲ್ ಪಂದ್ಯದವರೆಗೂ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಆಲ್ ರೌಂಡ್ ಪ್ರದರ್ಶನದೊಂದಿಗೆ ಎದುರಾಳಿ ತಂಡಗಳನ್ನು ಮಣಿಸಿ ವಿಶ್ವಕಪ್ಗೆ ಮುತ್ತಿಟ್ಟರು.
ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ಆಟಗಾರರನ್ನು ವಿಶ್ವದಾದ್ಯಂತ ಗಣ್ಯರು ಹೊಗಳುತ್ತಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಟೀಮ್ ಇಂಡಿಯಾ ಆಟಗಾರನ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಆ ಆಟಗಾರನನ್ನು 24 ಕ್ಯಾರೆಟ್ ಶುದ್ಧ ಚಿನ್ನ ಎಂದು ಕರೆದಿದ್ದಾರೆ. ಆ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.
ಚುಟುಕು ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಆಟಗಾರರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಶ್ವದೆಲ್ಲೆಡೆಯಿಂದ ಸೆಲೆಬ್ರಿಟಿಗಳು ಭಾರತೀಯ ಆಟಗಾರರನ್ನು ಹೊಗಳುತ್ತಿದ್ದಾರೆ. ಈ ಪಟ್ಟಿಗೆ ಮಾಜಿ ಕ್ರಿಕೆಟಿಗ ಮತ್ತು ಜನಪ್ರಿಯ ನಿರೂಪಕ ಆಕಾಶ್ ಚೋಪ್ರಾ ಕೂಡ ಸೇರಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಗೆ ಎಲ್ಲೆಡೆ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ಮತ್ತೆ 13 ವರ್ಷಗಳ ಬಳಿಕ ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದೆ. ಅದಕ್ಕಾಗಿ ಅವರನ್ನು ಶ್ಲಾಘಿಸಲಾಗುತ್ತಿದೆ.
ರೋಹಿತ್ ಶರ್ಮ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರಾ, ರೋಹಿತ್ ಓರ್ವ ಅದ್ಭುತ ನಾಯಕ. ಮುಂಬೈ ಇಂಡಿಯನ್ಸ್‌ಗೆ ಐದು ಐಪಿಎಲ್ ಟ್ರೋಫಿಗಳನ್ನು ನೀಡಿದ ಕೀರ್ತಿ ಅವರದು. ಅವರು ಇತ್ತೀಚೆಗೆ ಭಾರತಕ್ಕೆ ಟಿ20 ವಿಶ್ವಕಪ್ ನೀಡಿದ್ದಾರೆ. ಹಾಗಾಗಿ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಸಾಲಿಗೆ ಸೇರಿದ್ದಾರೆ. ನಾಯಕನಾದವನಿಗೆ ಇನ್ನೇನು ಬೇಕು? ರೋಹಿತ್ ಗೆದ್ದ ಈ ವಿಶ್ವಕಪ್ ದಶಕಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಹಿಟ್‌ಮ್ಯಾನ್ ನಾಯಕತ್ವದಲ್ಲಿ ಆಟಗಾರರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಾರೆ. ಆದ್ದರಿಂದಲೇ ಸಹ ಆಟಗಾರರು ರೋಹಿತ್ ಒಳ್ಳೆಯ ಮನುಷ್ಯ ಎನ್ನುತ್ತಾರೆ. ರೋಹಿತ್ ಶರ್ಮ 24 ಕ್ಯಾರೆಟ್ ಶುದ್ಧ ಚಿನ್ನ ಎಂದು ಆಕಾಶ್ ಚೋಪ್ರಾ ಕೊಂಡಾಡಿದರು. (ಏಜೆನ್ಸೀಸ್)