ರಿಯಾ ಚಕ್ರವರ್ತಿಯೆಂದೇ ನಿಂದಿಸಿದ ಕಾಲರ್​​ಗಳು... ಇದರ ಅಸಲಿಯತ್ತೇನು?

sushant_rhea
Published on

ಮುಂಬೈ: ಸುದ್ದಿವಾಹಿನಿಯೊಂದು ಮಾಡಿದ ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬ ಏನೂ ಅರಿಯದ ತಪ್ಪಿಗೆ ಹಗಲು ರಾತ್ರಿ ಶಿಕ್ಷೆ ಅನುಭವಿಸುವಂತಾಗಿದೆ.

ಆಗಿದ್ದೇನು?: ಟಿವಿ ಸುದ್ದಿ ವಾಹಿನಿಯೊಂದು ನಟಿ ರಿಯಾ ಚಕ್ರವರ್ತಿಯದು ಎಂದು ಹೇಳಿ ಮೊಬೈಲ್ ಸಂಖ್ಯೆಯನ್ನು ಪ್ರಸಾರ ಮಾಡಿತ್ತು. ಆದರೆ ಅದರಲ್ಲಿ ಅಚಾತುರ್ಯದಿಂದಾಗಿ ಒಂದು ಸಂಖ್ಯೆ ತಪ್ಪಾಗಿದ್ದು, ಬೇರೊಬ್ಬನ ಮೊಬೈಲ್ ನಂಬರ್ ಅದಾಗಿದೆ.

ಇದರಿಂದಾಗಿ, ರಿಯಾ ಚಕ್ರವರ್ತಿಯದೇ ಎಂದುಕೊಂಡ ಮೊಬೈಲ್ ಸಂಖ್ಯೆಗೆ ಹಲವು ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಆ ನಂಬರ್​​ಗೆ ಕರೆ ಮಾಡಿ ಹಿಗ್ಗಾ ಮುಗ್ಗಾ (ಆಕೆಯನ್ನು) ನಿಂದಿಸುತ್ತಿದ್ದಾರೆ. ಈ ಮೊಬೈಲ್ ನಂಬರ್​​ನ ಅಸಲಿ ವ್ಯಕ್ತಿ ಕರೆ ಸ್ವೀಕರಿಸಿ ನಿಂದನೆಗೆ ಸುಸ್ತಾಗಿದ್ದಾರೆ.

ನಟಿ ರಿಯಾ ಚಕ್ರವರ್ತಿಯ ಮೊಬೈಲ್ ನಂಬರ್ ಎಂದುಕೊಂಡು ಹಲವಾರು ಫೋನ್ ಕರೆಗಳು ಬರುತ್ತಿದ್ದು, ಇದರಿಂದ ನಾನು ಮಾನಸಿಕವಾಗಿ ತೀವ್ರ "ಆಘಾತಕ್ಕೊಳಗಾಗಿದ್ದೇನೆ ಎಂದು ಆತ ಹೇಳಿದ್ದಾರೆ.

ಆತನ ಹೆಸರು ಸಾಗರ್ ಸುರ್ವೆ. ಶಿಕ್ಷಣ ಸಂಸ್ಥೆಯೊಂದಲ್ಲಿ  ಕ್ಲರ್ಕ್ ಆಗಿದ್ದಾರೆ. ಇದು ರಿಯಾ ನಂಬರ್ ಅಲ್ಲ ಎಂದು ಆತ ಹೇಳಿಕೊಂಡರೂ ಒಪ್ಪದೆ, ಕರೆ ಮಾಡಿದವರು ವೀಡಿಯೊ ಪ್ರೂಫ್ ಕಳುಹಿಸಲು ಆತನಿಗೆ ತಿಳಿಸಿದ್ದಾರೆ.

ಆರಂಭದಲ್ಲಿ ಇದರ ತಳ ಬುಡ ಆತನಿಗೆ ಅರ್ಥವಾಗಿರಲಿಲ್ಲ. ನಂತರ ಸುದ್ದಿವಾಹಿನಿಯೊಂದು ರಿಯಾ ಚಕ್ರವರ್ತಿಯ ನಂಬರ್ ಎಂದು ಹೇಳಿಕೊಂಡು, ಅಚಾತುರ್ಯದಿಂದ ಒಂದು ಸಂಖ್ಯೆಯನ್ನು ಬದಲಿಸಿ ಫ್ಲ್ಯಾಷ್ ಮಾಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಆತನ ಸ್ನೇಹಿತರು ತಿಳಿಸಿದ ಮೇಲೆ ಆತನಿಗೆ ವಾಸ್ತವದ ಅರಿವಾಗಿದೆ.

ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಆದರೆ ಅಧಿಕೃತ ದೂರು ನೀಡಲು ಇಷ್ಟವಿಲ್ಲ ಎಂದು ಸುರ್ವೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಕರೆಗಳಿಗೆ ಮುಕ್ತಿ ಹಾಡಲು, ಈ ತಲೆನೋವಿನಿಂದ ಪಾರಾಗಲು ಆತ ಮತ್ತೊಂದು ಫೋನ್ ಸಂಖ್ಯೆ ಬಳಕೆಗೆ ಮೊರೆಹೋಗಬೇಕಾಯಿತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅವರ ತಂದೆ, ರಿಯಾ ಚಕ್ರವರ್ತಿಯೇ ಈ ಸಾವಿಗೆ ಕಾರಣ ಎಂಬರ್ಥದಲ್ಲಿ ಆರೋಪಿಸಿದ ಮೇಲೆ ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆನ್ನಲಾದ ಆರೋಪದ ಮೇಲೆ ಎಫ್​​ಐಆರ್ ದಾಖಲಿಸಲಾಗಿತ್ತು.

ಅದಾದ ನಂತರ ರಿಯಾ ಮತ್ತು ಆಕೆಯ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ ಹಲವು ರೀತಿಯಲ್ಲಿ ಪ್ರಶ್ನಿಸಿ, ವಿಚಾರಣೆ ನಡೆಸಿದೆ ಮತ್ತು ಪ್ರತಿದಿನ ಆಘಾತಕಾರಿ ಅಂಶಗಳು ಹೊರಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net