

ಹೈದರಾಬಾದ್: ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಅವರ ಕ್ಯಾಚಿ ಟ್ಯೂನ್ಗಳಿಗೆ ಮರುಳಾಗದವರೇ ಇಲ್ಲ. ಕನ್ನಡದಲ್ಲಿ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಚಕ್ರವ್ಯೂಹ ಮತ್ತು ಯುವರತ್ನ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಈ ಎರಡು ಚಿತ್ರದ ಹಾಡುಗಳು ಸೂಪರ್ ಡೂಪರ್ ಹಿಟ್ ಆದವು. ತೆಲುಗಿನಲ್ಲಿ ತುಂಬಾ ಫೇಮಸ್ ಆಗಿರುವ ಥಮನ್, ಸಂಗೀತದಿಂದಾಚೆಗೆ ಮತ್ತೊಂದು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಯಾವುದು ಆ ಕ್ಷೇತ್ರವೆಂದರೆ ಅದೇ ಕ್ರಿಕೆಟ್. ಥಮನ್ ಅವರಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಸಿಸಿಎಲ್ನಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಕಳೆದ ಬಾರಿ ತೆಲುಗು ವಾರಿಯರ್ಸ್ ಟ್ರೋಫಿ ಜಯಿಸಲು ಥಮನ್ ಪ್ರಮುಖ ಪಾತ್ರವಹಿಸಿದ್ದರು.
ಈ ಬಾರಿಯು ಥಮನ್ ತೆಲುಗು ವಾರಿಯರ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆಯಷ್ಟೇ ತೆಲುಗು ವಾರಿಯರ್ಸ್ ಮತ್ತು ಪಂಜಾಬ್ ದೆ ಶೇರ್ ನಡುವೆ ನಡೆದ ಪಂದ್ಯದಲ್ಲಿ ಥಮನ್ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವು ದೊರಕಿಸಿ ಕೊಟ್ಟರು.
ನಿನ್ನೆ ತುಂಬಾ ಗಮನ ಸೆಳೆದಿದ್ದು ಥಮನ್ ಔಟಾದ ರೀತಿ. ಹೌದು, ಇದುವರೆಗೂ ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿ ಔಟಾಗಿಲ್ಲ. ಹೌದು, ಎರಡನೇ ಇನ್ನಿಂಗ್ಸ್ನಲ್ಲಿ ಸ್ಫೋಟಕ ಆಟವಾಡುತ್ತಿದ್ದ ಥಮನ್, ಒಂದು ಎಸೆತವನ್ನು ಬಲವಾಗಿ ಬಾರಿಸಲು ಮುಂದಾದರು. ಆದರೆ, ಆ ಚೆಂಡು ಬೌಲರ್ ಹತ್ತಿರ ಹೋಗಿ ನಿಂತುಕೊಂಡಿತು. ಈ ವೇಳೆ ಥಮನ್ ಒಂದು ರನ್ ಕದಿಯಲು ಯತ್ನಿಸಿದರು. ಈ ವೇಳೆ ಬೌಲರ್ ಓಡಿಹೋಗಿ ಚೆಂಡ್ ಎತ್ತಿಕೊಳ್ಳಲು ಯತ್ನಿಸಿದಾಗ ಥಮನ್ ಕೂಡ ವೇಗವಾಗಿ ಬೌಲರ್ ಕಡೆ ನುಗ್ಗಿದರು. ಇದರಿಂದ ರನೌಟ್ ಮಾಡಲು ಬೌಲರ್ಗೆ ಅಡ್ಡಿಯಾಯಿತು. ಇದನ್ನು ಥಮನ್ ಉದ್ದೇಶಪೂರ್ವಕವಾಗಿ ಮಾಡಿದರೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ, ಫೀಲ್ಡರ್ಗೆ ಅಡ್ಡಿಪಡಿಸಿದ್ದಕ್ಕೆ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿಯ ರನೌಟ್ ನಡೆದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿರಿ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಮೊದಲ ಇನ್ನಿಂಗ್ಸ್ನಲ್ಲಿ 10 ಓವರ್ಗೆ 7 ವಿಕೆಟ್ ನಷ್ಟಕ್ಕೆ 72 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ನಷ್ಟಕ್ಕೆ 59 ರನ್ ಮಾತ್ರ ಕಲೆಹಾಕಿತು. 13 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ 10 ಓವರ್ಗೆ 5 ವಿಕೆಟ್ ನಷ್ಟಕ್ಕೆ 93 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್ ಥಮನ್ (30 ಎಸೆತಕ್ಕೆ 67 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 9.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿ ಗೆಲುವಿನ ದಡ ಮುಟ್ಟಿತು. (ಏಜೆನ್ಸೀಸ್)