ಟೋಪಿ ಧರಿಸಿ, ನಮಾಜ್ ಮಾಡಿ ಇಫ್ತಾರ್​ ಕೂಟದಲ್ಲಿ ಭಾಗಿಯಾದ ದಳಪತಿ ವಿಜಯ್​; ವಿಡಿಯೋ ವೈರಲ್​

Thalapthy Vijay
Published on

ಚೆನ್ನೈ: ನಟನೆಗೆ ವಿರಾಮ ಪಡೆದಿರುವ ತಮಿಳು ನಟ ವಿಜಯ್​ (Vijay) ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಈಚೆಗೆ ಪಕ್ಷದ ವಾರ್ಷಿಕೋತ್ಸವವನ್ನು ಜೋರಾಗಿ ಆಯೋಜಿಸಿದ್ದರು. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಫರ್ಧಿಸುವುದಾಗಿ ಘೋಷಿಸಿದ್ದು, ಅದಕ್ಕೆ ಬೇಕಾಗಿರುವ ತಯಾರಿಯನ್ನು ಆರಂಭಿಸಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ನಟ ವಿಜಯ್ (Vijay) ಅವರು ಶುಕ್ರವಾರ (ಮಾರ್ಚ್ 07) ಇಫ್ತಾರ್​ ಕೂಟದಲ್ಲಿ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಟೋಪಿ ಧರಿಸಿರುವ ನಟ ವಿಜಯ್ (Vijay) ನಮಾಜ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಮುಸ್ಲಿಂ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ನಟ ವಿಜಯ್ ಅವರ ಜೊತೆಗೆ ಧಾರ್ಮಿಕ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನು ನೋಡಿರುವ ಅಭಿಮಾನಿಗಳು ನಟನ ನಡೆಯನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ. ಎಲ್ಲಾ ಧರ್ಮವನ್ನು ವಿಜಯ್ ಗೌರವಿಸುತ್ತಿದ್ದಾರೆ ಎಂದು ಕಮೆಂಟ್ ಹಾಕುತ್ತಿದ್ದಾರೆ.

ಇನ್ನೂ ನಟ ವಿಜಯ್​ ಇಫ್ತಾರ್ ಕೂಟದಲ್ಲಿ ಭಾಗಿಯಾಗಿರುವ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಹಲವರು ಇದು ವೋಟ್​ ಬ್ಯಾಂಕ್ ಪಾಲಿಟಿಕ್ಸ್ ಎಂದು ಟೀಕಿಸಿದ್ದಾರೆ. ಇಫ್ತಾರ್​ನಲ್ಲಿ ಭಾಗಿಯಾದ ನಟ ವಿಜಯ್​ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ರಾ, ಇದು ತುಷ್ಠೀಕರಣದ ರಾಜಕಾರಣ ಎಂದು ಕಮೆಂಟ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net