ಅರ್ಥಧಾರಿಗಳಿಗೆ ಪುರಾಣದ ಆಳ ಜ್ಞಾನ ಅಗತ್ಯ...

Thaalamaddhale
Published on

ಪ್ರೊ. ಶ್ರೀಧರ್​ ಡಿ.ಎಸ್​. ಅಭಿಮತ

ಪಿಪಿಸಿಯಲ್ಲಿ ಕಾರ್ಯಾಗಾರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ತಾಳಮದ್ದಳೆಯು ಮಾತಿನ ಕಲೆಯಾಗಿದೆ. ಹೀಗಾಗಿ ಅರ್ಥಧಾರಿಗಳಿಗೆ ಆಳವಾದ ಪುರಾಣ ಜ್ಞಾನ, ಪ್ರತ್ಯುತ್ಪನ್ನ ಮತಿತ್ವ ಅವಶ್ಯ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಹಿರಿಯ ತಾಳಮದ್ದಳೆ ಅರ್ಥಧಾರಿ ಪ್ರೊ. ಶ್ರೀಧರ್​ ಡಿ.ಎಸ್​. ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘಗಳ ಸಂಯೋಜನೆಯಲ್ಲಿ ಮಾ.12ರಂದು ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಸಿಎ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿರುವ ರಾಧಾಕೃಷ್ಣ ಕಲ್ಚಾರ್​ ಅವರ ಸಾಂಸ್ಕೃತಿಕ ಪಲ್ಲಟಗಳು ಮತ್ತು ತಾಳಮದ್ದಳೆ ಎಂಬ ಲೇಖನ ಹಾಗೂ ಪಾರ್ತಿಸುಬ್ಬ ಕವಿಯ ಪಂಚವಟಿ ಪ್ರಸಂಗದ ಪಠ್ಯ ಆಧರಿಸಿ ನಡೆದ ತಾಳಮದ್ದಳೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ವಿಶೇಷ ಅಧಿಕಾರಿ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇದಿಕೆ, ಕಾರ್ಯಾಗಾರದ ಸಂಯೋಜಕ ಹಾಗೂ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ್​ ಅಳಗೋಡು ಸ್ವಾಗತಿಸಿದರು. ವಿದ್ಯಾರ್ಥಿನಿ ಸಹನಾ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಅಧ್ಯಾಪಕರಿಂದಲೇ ಪಂಚವಟಿ ಪ್ರಸಂಗದ ತಾಳಮದ್ದಳೆ ಪ್ರದರ್ಶನ ನೆರವೇರಿತು. ಭಾಗವತಿಕೆಯಲ್ಲಿ ಅಂತಿಮ ಬಿಎ ವಿದ್ಯಾರ್ಥಿನಿ ಶ್ರೀರಕ್ಷಾ ಹೆಗಡೆ, ಮದ್ದಳೆಯಲ್ಲಿ ಎನ್​.ಜಿ. ಹೆಗಡೆ, ರಾಮನಾಗಿ ಶ್ರೀಧರ್​ ಡಿ.ಎಸ್​., ಸೀತೆಯಾಗಿ ಡಾ. ಶಿವಕುಮಾರ್​ ಅಳಗೋಡು, ಲಕ್ಷ್ಮಣನಾಗಿ ಡಾ. ಮಂಜುನಾಥ್​ ಕರಬ, ಸನ್ಯಾಸಿ ರಾವಣನಾಗಿ ಧೀರಜ್​ ಮಲ್ಪೆ ಅಭಿನಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net