ಮ್ಯಾನ್ಮಾರ್ ಭೂಕಂಪ; ತುರ್ತು ಪರಿಸ್ಥಿತಿ ಘೋಷಿಸಿದ ಥಾಯ್ ಪ್ರಧಾನಿ ಪೇಟೊಂಗ್​​ಟಾನ್​ ಶಿನವಾತ್ರ | Emergency Declare

Untitled design (88)
Published on

ಬ್ಯಾಂಕಾಕ್: ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಪ್ರಬಲ ಭೂಕಂಪದಿಂದಾಗಿ ಎರಡೂ ದೇಶಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಬೃಹತ್ ಕಟ್ಟಡಗಳು ಮತ್ತು ಸೇತುವೆಗಳು ಕುಸಿದಿದೆ. ಥೈಲ್ಯಾಂಡ್ ಪ್ರಧಾನಿ ಪೇಟೊಂಗ್​​ಟಾನ್​ ಶಿನವಾತ್ರ ಶುಕ್ರವಾರ(ಮಾರ್ಚ್​ 28) ಬ್ಯಾಂಕಾಕ್ ಒಳಗೆ ತುರ್ತು ಪರಿಸ್ಥಿತಿ(Emergency Declare) ಘೋಷಿಸಿದ್ದಾರೆ.

ಈ ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನಲ್ಲಿತ್ತು ಎಂದು ಹೇಳಲಾಗುತ್ತಿದೆ. ಇದು ಥೈಲ್ಯಾಂಡ್‌ನಲ್ಲೂ ಸಹ ಭಾರಿ ಪರಿಣಾಮ ಬೀರಿದೆ. ಬ್ಯಾಂಕಾಕ್‌ನಲ್ಲಿ ಬೃಹತ್ ಕಟ್ಟಡ ಕುಸಿದು ಬಿದ್ದ ಪರಿಣಾಮ 43 ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬ್ಯಾಂಕಾಕ್‌ನ ಚತುಚಕ್ ಪಾರ್ಕ್‌ನಲ್ಲಿರುವ ಕಟ್ಟಡದೊಳಗೆ 50 ಜನರು ಇದ್ದರು ಎಂದು ತುರ್ತು ಸೇವೆಗಳು ತಿಳಿಸಿವೆ. ಈ ಭೂಕಂಪದಿಂದಾಗಿ ಬ್ಯಾಂಕಾಕ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. 50 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮ್ಯಾನ್ಮಾರ್‌ನಲ್ಲೂ ಭಾರಿ ವಿನಾಶ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಥೈಲ್ಯಾಂಡ್‌ನ ಬ್ಯಾಂಕಾಕ್ ನಗರದ ವಿಡಿಯೋದಲ್ಲಿ ಧೂಳಿನ ಮೋಡದ ನಡುವೆ ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿರುವುದನ್ನು ತೋರಿಸಲಾಗಿದೆ. ಅಲ್ಲಿನ ಜನರು ಕಿರುಚುತ್ತಾ ಓಡಿಹೋದರು. ಬ್ಯಾಂಕಾಕ್‌ನ ಚತುಚಕ್ ಮಾರುಕಟ್ಟೆಯ ಬಳಿ ಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ ಮತ್ತು ಕಟ್ಟಡ ಕುಸಿದಾಗ ಎಷ್ಟು ಕಾರ್ಮಿಕರು ಇದ್ದರು ಎಂಬುದು ಇನ್ನೂ ತಿಳಿದಿಲ್ಲ ಎಂದು ಪೊಲೀಸರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು,ರಿಕ್ಟರ್​ ಮಾಪಕದಲ್ಲಿ 7.7 ತೀವ್ರತೆಯು ದಾಖಲಾಗಿದೆ. ಆರಂಭಿಕ ವರದಿಗಳ ಪ್ರಕಾರ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜಿಎಫ್‌ಝಡ್ ಭೂವೈಜ್ಞಾನಿಕ ಕೇಂದ್ರವು ಮಧ್ಯಾಹ್ನದ ಸುಮಾರಿಗೆ 10 ಕಿಲೋಮೀಟರ್ (6.2 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ನೆರೆಯ ಮ್ಯಾನ್ಮಾರ್‌ನಲ್ಲಿದೆ ಎಂದು ತಿಳಿಸಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು 17 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಹಲವರು ಬಹುಮಹಡಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.

ಮಧ್ಯಾಹ್ನ 1.30ರ ಸುಮಾರಿಗೆ ಭೂಕಂಪ ಸಂಭವಿಸಿದಾಗ ಕಟ್ಟಡಗಳಲ್ಲಿ ಎಚ್ಚರಿಕೆಯ ಗಂಟೆಗಳು ಮೊಳಗಲು ಪ್ರಾರಂಭಿಸಿದವು ಮತ್ತು ಜನನಿಬಿಡ ಕೇಂದ್ರ ಬ್ಯಾಂಕಾಕ್‌ನಲ್ಲಿರುವ ಬಹುಮಹಡಿ ಕಟ್ಟಡಗಳು ಮತ್ತು ಹೋಟೆಲ್‌ಗಳಿಂದ ಜನರನ್ನು ಸ್ಥಳಾಂತರಿಸಲಾಯಿತು. ಭೂಕಂಪ ಎಷ್ಟು ಪ್ರಬಲವಾಗಿತ್ತೆಂದರೆ ಕೆಲವು ಎತ್ತರದ ಕಟ್ಟಡಗಳ ಒಳಭಾಗದಲ್ಲಿ 'ಈಜುಕೊಳ'ಗಳಂತೆ ನೀರಿನಲ್ಲಿ ಅಲೆಗಳು ಏಳುತ್ತಿರುವುದು ಕಂಡುಬಂದಿತು. ಭೂಕಂಪದ ಕೇಂದ್ರಬಿಂದುವು ಮಧ್ಯ ಮ್ಯಾನ್ಮಾರ್‌ನಲ್ಲಿತ್ತು, ಇದು ಮೋನಿವಾ ನಗರದಿಂದ ಪೂರ್ವಕ್ಕೆ ಸುಮಾರು 50 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿದೆ. ಮ್ಯಾನ್ಮಾರ್‌ನಲ್ಲಿ ಭೂಕಂಪದ ಪರಿಣಾಮದ ಬಗ್ಗೆ ತಕ್ಷಣದ ಸುದ್ದಿ ಬಂದಿಲ್ಲ.

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ಕಂಪನದ ಅನುಭವವಾಗಿದ್ದು, ನೂರಾರು ಜನರು ಕಟ್ಟಡಗಳಿಂದ ಹೊರಗೆ ಓಡಿಬಂದರು. ಮಾಧ್ಯಮ ವರದಿಗಳ ಪ್ರಕಾರ, ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ಮ್ಯಾನ್ಮಾರ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಮಂಡಲೆ ನಗರದ ಬಳಿ 10 ಕಿ.ಮೀ (6.21 ಮೈಲುಗಳು) ಆಳದಲ್ಲಿದೆ ಎಂದು GFZ ತಿಳಿಸಿದೆ. ಮ್ಯಾನ್ಮಾರ್ ವಿಶ್ವದ ಅತ್ಯಂತ ಭೂಕಂಪನ ಸಕ್ರಿಯ ಪ್ರದೇಶಗಳಲ್ಲಿ ಒಂದಾಗಿದೆ.

ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಥೈಲ್ಯಾಂಡ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ತುರ್ತು ಸಂಖ್ಯೆಯನ್ನು ನೀಡಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net